ADVERTISEMENT

ಶುಕ್ರವಾರ, 26–5–1967

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ದೆಹಲಿ–ಬೆಂಗಳೂರು ನೇರ ಬ್ರಾಡ್‌ಗೇಜ್‌ ಸಾಧ್ಯತೆ ಪರಿಶೀಲನೆ
ನವದೆಹಲಿ, ಮೇ 25– ಸಿಕಂದರಾಬಾದ್‌ ಮೂಲಕ ದೆಹಲಿ ಮತ್ತು ಬೆಂಗಳೂರು ಮಧ್ಯೆ ನೇರ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಿಸುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿರುವುದಾಗಿ ರೈಲ್ವೆ ಇಲಾಖೆ ಸಚಿವ ಶ್ರೀ ಸಿ.ಎಂ. ಪೂಣಚ್ಚ ಅವರು ಇಂದು ಪಾರ್ಲಿಮೆಂಟ್‌ನಲ್ಲಿ ತಿಳಿಸಿದರು.
 
ಗುಂತಕಲ್‌ ಮತ್ತು ಬೆಂಗಳೂರು ನಡುವಣ ಮೀಟರ್‌ಗೇಜ್‌ ವಿಭಾಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಬಗ್ಗೆ ಟ್ರಾಫಿಕ್‌ ಸರ್ವೆ ಕಾರ್ಯ ನಡೆಯುತ್ತಿರುವುದಾಗಿಯೂ ಅವರು ಹೇಳಿದರು.
 
ಕಡಿಮೆ ಸೇದಿ, ದೀರ್ಘಕಾಲ ಬಾಳಿ!
ನವದೆಹಲಿ, ಮೇ 25–  ‘ಕಡಿಮೆ ಸೇದಿ, ಹೆಚ್ಚು ಕಾಲ ಬದುಕಿ’. ಧೂಮಪಾನ ಮಾಡದಿರುವ ಅರ್ಥ ಸಚಿವ ಶ್ರೀ ಮುರಾರಜೀ ದೇಸಾಯ್‌ ಅವರು ಇಂದು ಸಿಗರೇಟ್‌ ಮೇಲೆ ತೆರಿಗೆಯನ್ನು ಹೆಚ್ಚಿಸಿರುವುದನ್ನು ಪ್ರಕಟಿಸುತ್ತಾ ಧೂಮಪಾನಾಸಕ್ತರಿಗೆ ನೀಡಿದ ಸಲಹೆಯಿದು.
 
ಧೂಮಪಾನ ಮಾಡುವವರ ಜೇಬಿನ ಮೇಲೆ ಕಣ್ಣಿಟ್ಟಿರುವುದಾಗಿ ಅವರು ತಿಳಿಸಿದಾಗ ಲೋಕಸಭೆಯಲ್ಲಿ ಸದಸ್ಯರ ಹುಬ್ಬುಗಳು ಗಂಟಿಕ್ಕಿದುವು. ‘ಸದಸ್ಯರು, ಮತ್ತಿತರರು ಕಡಿಮೆ ಸೇದುವುದರ ಮೂಲಕ ಅದನ್ನು (ತೆರಿಗೆ) ತಪ್ಪಿಸಿಕೊಳ್ಳಬಹುದು. ಅಲ್ಲದೆ ಹೆಚ್ಚು ಕಾಲ ಬದುಕಲೂಬಹುದು’ ಎಂದು ಅವರು ತಿಳಿಸಿದಾಗ ಹುಬ್ಬುಗಳು ಸಡಿಲಿದುವು.
 
ಪ್ಯಾಲಸ್ಟೈನ್‌– ಇಸ್ರೇಲ್‌ ಪಡೆಗಳ ನಡುವೆ ಘರ್ಷಣೆ
ಕೈರೋ, ಮೇ 25– ಪ್ಯಾಲಸ್ಟೈನ್‌ ಸೇನೆ ಮತ್ತು ಇಸ್ರೇಲ್‌ ಕಾವಲು ಪಡೆಗಳ ನಡುವೆ ನಿನ್ನೆ ರಾತ್ರಿ ಘರ್ಷಣೆ ಸಂಭವಿಸಿತೆಂದು ಮಧ್ಯ ಪ್ರಾಚ್ಯ ವಾರ್ತಾ ಸಂಸ್ಥೆ ವರದಿ ಮಾಡಿದೆ.
 
ಡೆಯಿರ್‌ ಎಲ್‌ ಬಲ್ಹಾ ಪ್ರದೇಶದಲ್ಲಿ ಈ ಘರ್ಷಣೆ ನಡೆಯಿತೆಂದು ವಾರ್ತಾ ಸಂಸ್ಥೆ ತಿಳಿಸಿದೆ. ಇಸ್ರೇಲ್‌ ಕಾವಲು ಪಡೆ ಗಾಜಾ ಪ್ರದೇಶದೊಳಕ್ಕೆ ನುಸುಳಿಹೋಯಿತೆಂದು ಆಗ ಪ್ಯಾಲಸ್ಟೈನ್‌ ಸೇನೆ ಗುಂಡು ಹಾರಿಸಿದ್ದರಿಂದ ಇಸ್ರೇಲಿಗಳು ಹಿಂತೆಗೆದುಕೊಂಡರೆಂದೂ ಅದು ತಿಳಿಸಿದೆ.
 
ರಾಜ್ಯ ಶಿಕ್ಷಣ ಸಲಹಾ ಮಂಡಳಿ ಶಿಫಾರಸು: 15 ವರ್ಷದ ಶಿಕ್ಷಣ– ಕಾಲೇಜ್‌ ಮಟ್ಟದಲ್ಲಿ ಇಂಗ್ಲೀಷ್‌ ಜತೆಗೆ ಕನ್ನಡ ಮಾಧ್ಯಮ
ಬೆಂಗಳೂರು, ಮೇ 25– ಐಚ್ಛಿಕ ವಿಷಯಗಳಿಲ್ಲದ ಹತ್ತು ವರ್ಷಗಳ ಸಾಮಾನ್ಯ ಶಾಲಾ ಶಿಕ್ಷಣ, ಆನಂತರ ಎರಡು ವರ್ಷಗಳ ಜ್ಯೂನಿಯರ್‌ ಕಾಲೇಜು ಶಿಕ್ಷಣ, ಕೊನೆಯದಾಗಿ ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣ.
 
ಈ 15 ವರ್ಷಗಳ ಶಿಕ್ಷಣ ಕ್ರಮವನ್ನು ರಾಜ್ಯಾದ್ಯಂತ ಜಾರಿಗೆ ತರುವಂತೆ ರಾಜ್ಯ ಶಿಕ್ಷಣ ಸಲಹಾ ಮಂಡಳಿಯು ಶಿಫಾರಸು ಮಾಡಿದೆ. ಕಾಲೇಜು ಶಿಕ್ಷಣದಲ್ಲಿ ಈಗ ಅನುಸರಿಸಲಾಗುತ್ತಿರುವ ಇಂಗ್ಲೀಷ್‌ ಮಾಧ್ಯಮದೊಂದಿಗೆ ಕನ್ನಡವನ್ನು ಬದಲು ಮಾಧ್ಯಮವಾಗಿ ಅನುಷ್ಠಾನಕ್ಕೆ ತರಲು ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಿಗೆ ಮಂಡಳಿಯು ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.