ADVERTISEMENT

ಶುಕ್ರವಾರ, 3–3–1967

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:30 IST
Last Updated 2 ಮಾರ್ಚ್ 2017, 19:30 IST
ಮುಖ್ಯಮಂತ್ರಿತ್ವಕ್ಕೆ ಶ್ರೀ ನಿಜಲಿಂಗಪ್ಪ: ಒಮ್ಮತದ ಆಯ್ಕೆ
ಬೆಂಗಳೂರು, ಮಾ. 2– ವಿಧಾನಮಂಡಲದ  ಕಾಂಗ್ರೆಸ್‌ ಪಕ್ಷ ಸರ್ವಾನುಮತದಿಂದ ಒಂದು ನಿಮಿಷದಲ್ಲಿ ಚುನಾಯಿಸಿದ, ರಾಷ್ಟ್ರದ ಹಿರಿಯ ಕಾಂಗ್ರೆಸ್ಸಿಗರಲ್ಲಿ ಒಬ್ಬರಾದ ಎಸ್‌. ನಿಜಲಿಂಗಪ್ಪ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಮತ್ತೈದು ವರ್ಷಗಳ ಕಾಲ ರಾಜ್ಯಾಡಳಿತ ನಡೆಸುವ ಭಾರ ವಹಿಸಿದ ನಂತರ ‘ಹೃದಯ ತುಂಬಿದ್ದ’ ಶ್ರೀಯುತರು ಕರ್ನಾಟಕ ಜನತೆ ‘ಸ್ವಲ್ಪವಾದರೂ ತುಂಬು ಜೀವನ ನಡೆಸುವಂತಾಗಲು’ ದುಡಿಯುವ ಪ್ರತಿಜ್ಞೆ ಮಾಡಿದರು.
 
ಈ ಉಡಿಗೆ ಬೇಡ
ಚಂಡೀಘಡ, ಮಾ. 2– ಹರಿಯಾನ ರಾಜ್ಯದಲ್ಲಿ ಇನ್ನು ಮೇಲೆ ಚರ್ಮಕ್ಕೆ ಅಂಟಿದಂತಹ ಬಿಗಿಯುಡುಪುಗಳಿಗೆ ಅರ್ಧಚಂದ್ರ. ರಾಜ್ಯ ಸರ್ಕಾರದ ನೌಕರರು ಸಲ್‌ವಾರ್‌ ಕಮೀಜ್‌ ಮುಂತಾದ ಬಿಗಿಯುಡುಪುಗಳನ್ನು ಧರಿಸಿ ಬೊಂಬೆಗಳಂತೆ ನಡೆಯುವುದನ್ನು ಸರ್ಕಾರ ಸಹಿಸಿಲ್ಲ. ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ನೌಕರರಲ್ಲಿ ಬಿಗಿ ಯುಡುಪು ಧರಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಸರ್ಕಾರ ‘ಕಳವಳದಿಂದ ಗಮನಿಸಿದೆ’ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ, ಇಲಾಖೆ ಮುಖ್ಯರಿಗೆ ಕಳುಹಿಸುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
 
ಸಂಯುಕ್ತ ವಿರೋಧರಂಗ ರಚನೆಗೆ ಪ್ರಯತ್ನ
ಬೆಂಗಳೂರು, ಮಾ. 2– ರಾಜ್ಯದ ವಿಧಾನ ಸಭೆಯಲ್ಲಿ ಪ್ರತಿನಿಧಿಸಲ್ಪಟ್ಟಿರುವ ವಿವಿಧ ವಿರೋಧ ಪಕ್ಷಗಳು ಮತ್ತು ಆರಿಸಲ್ಪಟ್ಟಿರುವ ಸ್ವತಂತ್ರ ಅಭ್ಯರ್ಥಿಗಳಿಂದ ಕೂಡಿದ ಸಂಯುಕ್ತರಂಗ ಒಂದನ್ನು ರಚಿಸಬೇಕೆಂಬ ಅಭಿಪ್ರಾಯಯವನ್ನು ಇಂದು ನಡೆದ ವಿರೋಧಪಕ್ಷಗಳ ಮತ್ತು ಸ್ವತಂತ್ರ ಶಾಸನಸಭಾ ಸದಸ್ಯರುಗಳ ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
 
ರಾಷ್ಟ್ರಪತಿ ಸ್ಥಾನಕ್ಕೆ ಡಾ. ಜಾಕೀರ್‌ ಹುಸೇನ್‌ ಸೂಕ್ತ ವ್ಯಕ್ತಿ: ಜೆ.ಪಿ.
ಪಟ್ನ, ಮಾ. 2– ಸರ್ವೋದಯ ನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ಅಭಿಪ್ರಾಯದಂತೆ, ಡಾ. ಜಾಕೀರ್‌ ಹುಸೇನ್‌ ಅವರು ಭಾರತದ ರಾಷ್ಟ್ರಪತಿಯಾಗಲು ಸೂಕ್ತ ವ್ಯಕ್ತಿಯೆಂಬುದು ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.