ADVERTISEMENT

ಶುಕ್ರವಾರ, 7–7–1967

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST

ನಕ್ಸಲ್‌ಬರಿಯಲ್ಲಿ ಮಾವೊ ಪ್ರಭಾವ: ಚವಾಣ್‌ ಕಳವಳ
ನವದೆಹಲಿ, ಜುಲೈ 6– 
‘ನಕ್ಸಲ್‌ಬರಿಯಲ್ಲಿ ಸ್ಥಳೀಯ ಮಾವೊವಾದ ತಲೆ ಎತ್ತುತ್ತಿದೆ, ಹೊರಗಡೆ ಚೀನಾ ಒಂದು ಕೈಯಲ್ಲಿ ಕೆಂಪು ಪುಸ್ತಕ ಹಾಗೂ ಇನ್ನೊಂದರಲ್ಲಿ ಖಡ್ಗ ಹಿಡಿದು ನರ್ತಿಸುತ್ತಿದೆ’ ಎಂದು ಗೃಹಸಚಿವ ಶ್ರೀ ಚವಾಣ್‌ ಇಂದು ಲೋಕಸಭೆಯಲ್ಲಿ ತಿಳಿಸಿದರು.

ಈ ಆಯಕಟ್ಟಿನ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಉದ್ಭವಿಸಿರುವ ಸಮಸ್ಯೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರೊಡನೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಆಹಾರ ಸಮಸ್ಯೆ ಗಂಭೀರ: ಪ್ರಧಾನಿ
ನವದೆಹಲಿ, ಜುಲೈ 6–
‘ದೇಶದ ಆಹಾರ ಪರಿಸ್ಥಿತಿ ‘ಅತ್ಯಂತ ಕಳವಳಕಾರಿ’ಯಾಗಿದ್ದು, ಹೆಚ್ಚು ಉತ್ಪಾದನೆ ಹಾಗೂ ಸರಿಯಾದ ಖರೀದಿ ಕ್ರಮ ಅಳವಡಿಸಲು ಎಲ್ಲರೂ ಗಮನಹರಿಸಬೇಕು’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ADVERTISEMENT

ಇಲ್ಲಿನ ವಿಜ್ಞಾನ ಭವನದಲ್ಲಿ ಏರ್ಪಡಿಸಿರುವ ಮುಖ್ಯಮಂತ್ರಿಗಳ ಎರಡು ದಿನಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಆರ್ಥಿಕ ಹಾಗೂ ಆಹಾರದ ಸಂಕಷ್ಟವಿರುವ ಇಂದಿನ ಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಿನ ಶ್ರಮಕ್ಕೆ ಗರಿಷ್ಠ ಆದ್ಯತೆ ನೀಡಬೇಕು’ ಎಂದರು.

ಭೂಸುಧಾರಣೆ ತ್ವರಿತಗೊಳಿಸಲು ಮನವಿ
ನವದೆಹಲಿ, ಜುಲೈ 6–
ಭೂ ಸುಧಾರಣಾ ಕ್ರಮಗಳನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ ಕೇಂದ್ರದ ಆಹಾರ ಸಚಿವ ಶ್ರೀ ಜಗಜೀವನ ರಾಂ ಅವರು ರಾಜ್ಯಗಳು ಭೂಮಿಯ ಒಡೆತನದ ಅವಧಿ ಹಾಗೂ ಹಕ್ಕುಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಒಡೆತನದ ಬಗ್ಗೆ ತೀರ್ಮಾನ ವಿಳಂಬ ಮಾಡಿದರೆ ರೈತರಿಗೆ ಭೂಮಿಯ ಮೇಲೆ ಹೂಡಿಕೆ ಮಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ತಡವಾಗುತ್ತದೆ ಎಂದು ಸಚಿವರು ಹೇಳಿದರು.

ನೆರವು ಹೆಚ್ಚಳಕ್ಕೆ ಮನವಿ
ನವದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಹಲವು ಸಲಹೆಗಳನ್ನು ನೀಡಿದರು. ರಾಜ್ಯಗಳಿಗೆ ನೀಡುವ ನೆರವನ್ನು ಹೆಚ್ಚಿಸುವುದೂ ಅವುಗಳಲ್ಲಿ ಒಂದಾಗಿತ್ತು.

ಸ್ಥಳೀಯ ಭಾಷೆಯಲ್ಲೇ ಪರೀಕ್ಷೆ
ನವದೆಹಲಿ, ಜುಲೈ 6–
ಮುಂದಿನ ಒಂದು ವರ್ಷದೊಳಗೆ ಸ್ಥಳೀಯ ಭಾಷೆಗಳಲ್ಲೇ ಯುಪಿಎಸ್‌ಸಿ ಪರೀಕ್ಷೆಗಳನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಶ್ರೀ ಚವಾಣ್‌ ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.