ADVERTISEMENT

ಸೋಮವಾರ, 1–5–1967

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2017, 19:30 IST
Last Updated 30 ಏಪ್ರಿಲ್ 2017, 19:30 IST
ಕನಿಷ್ಠ 5 ವರ್ಷ ಸಂಪರ್ಕ ಭಾಷೆ ಪ್ರಶ್ನೆಯೇ ಬೇಡ
ನವದೆಹಲಿ, ಏ. 30–ಕನಿಷ್ಠ ಐದು ವರ್ಷಗಳವರೆಗೆ ‘ಸಂಪರ್ಕ ಭಾಷೆಯ’ ಪ್ರಶ್ನೆಯನ್ನೇ ಎತ್ತಬಾರದೆಂದು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬೋತಿಭೂಷಣ್ ಭಟ್ಟಾಚಾರ್ಯರವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 
ಎಲ್ಲ ಘಟ್ಟಗಳಲ್ಲೂ ಪ್ರಾದೇಶಿಕ ಭಾಷೆಗಳೇ ಶಿಕ್ಷಣ ಮಾಧ್ಯಮವಾಗಿರಬೇಕೆಂದು ಅವರು ಪ್ರತಿಪಾದಿಸಿದರು. ಸಂಪರ್ಕ ಭಾಷೆ, ಕಡ್ಡಾಯ ಭಾಷೆ ಹಿಂದಿಯಾಗಬೇಕೆ, ಇಂಗ್ಲೀಷ್‌ ಆಗಬೇಕೆ, ತ್ರಿಭಾಷಾ ಸೂತ್ರ ಮುಂತಾದವುಗಳನ್ನು ಕುರಿತ ವಿವಾದ ತಣ್ಣಗಾಗಲು ಬಿಡಬೇಕೆಂದು ಹೇಳಿದರು.
ಈ ಮಧ್ಯೆ ಸರ್ಕಾರವು ಹಿಂದಿಯನ್ನು ಜನಪ್ರಿಯಗೊಳಿಸಿ, ಜನತೆ ಅದನ್ನು ಸಂಪರ್ಕ ಭಾಷೆಯನ್ನಾಗಿ ಒಪ್ಪಿಕೊಳ್ಳುವಂತೆ ಮಾಡಬೇಕೆಂದೂ ನುಡಿದರು.
 
ಭಾಷೆ ಬಗ್ಗೆ ಒಮ್ಮತ ಯತ್ನ ವಿಫಲ
ನವದೆಹಲಿ, ಏ. 30– ಇಂದು ಇಲ್ಲಿ ಮುಕ್ತಾಯಗೊಂಡ ಮೂರು ದಿನಗಳ ರಾಜ್ಯ ಶಿಕ್ಷಣ ಸಚಿವರ ಸಮ್ಮೇಳನವು, ಭಾಷಾ ಸಮಸ್ಯೆ ಬಗ್ಗೆ ಒಂದು ಒಮ್ಮತದ ಇತ್ಯರ್ಥಕ್ಕೆ ಬರುವುದರಲ್ಲಿ ವಿಫಲಗೊಂಡಿತು.
 
ಭಾಷಾ ಸಮಸ್ಯೆಯ ಇತ್ಯರ್ಥದ ಬಗ್ಗೆ ಒಂದು ಸರ್ವಸಮ್ಮತವಾದ ಅಭಿಪ್ರಾಯಕ್ಕೆ ಬರಲು ಒಂಬತ್ತು ಮಂದಿ ಸದಸ್ಯರ ಸಮಿತಿ ಯೊಂದನ್ನು ನೇಮಿಸಲಾಯಿತು.
 
ಹರಿಯಾನದ ಶಿಕ್ಷಣ ಸಚಿವ ಶ್ರೀ ಹರದ್ವಾರಿ ಲಾಲ್ ಅವರು ಮಂಡಿಸಿದ ನಿರ್ಣಯದ ಆಧಾರದ ಮೇಲೆ ಸಮಿತಿಯು ತನ್ನ ಕಾರ್ಯದಲ್ಲಿ ಮುಂದುವರಿಯಬೇಕೆಂದು ಸಮ್ಮೇಳನವು  ಸೂಚನೆ ನೀಡಿತು.
 
ಉಕ್ಕಿನ ಮೇಲೆ ಹತೋಟಿ ರದ್ದು
ನವದೆಹಲಿ, ಏ. 30– ಎಲ್ಲ ಬಗೆಯ ಉಕ್ಕಿನ ಬೆಲೆ ಹಾಗೂ ವಿತರಣೆ ಮೇಲೆ ಶಾಸನಬದ್ಧ ಹತೋಟಿಯನ್ನು ಮೇ 1 ರಿಂದ ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
 
ಈ ವಿಷಯವನ್ನು ಇಂದು ಇಲ್ಲಿ ಪ್ರಕಟಿಸಿದ ಕೇಂದ್ರ ಉಕ್ಕು ಮತ್ತು ಕಬ್ಬಿಣ ಸಚಿವ ಶಾಖೆಯ ಕಾರ್ಯದರ್ಶಿ ಶ್ರೀ ಎಚ್.  ಲಾಲ್ ಅವರು ಬೆಲೆ ಏರಿಕೆಯಾಗದೆಂದೂ, ಬೆಲೆಗಳು ಒಂದು ನ್ಯಾಯಯುತ ಮಟ್ಟಕ್ಕಿಂತ ಹೆಚ್ಚಾದರೆ ಸರ್ಕಾರ ಪುನಃ ಕೈಹಾಕುವುದೆಂದೂ ಎಚ್ಚರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.