ADVERTISEMENT

ಸೋಮವಾರ, 17–7–1967

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST

* ಆರ್ಥಿಕ ಹಿಂಜರಿತ ಉಂಟಾಗಿಲ್ಲ ಎಂದು ಉಪಪ್ರಧಾನಿ
ಹೈದರಾಬಾದ್‌, ಜುಲೈ 16–
‘ದೇಶದ ಅರ್ಥಸ್ಥಿತಿ ಸ್ವಲ್ಪ ಕುಸಿದಿದೆಯೇ ವಿನಾ ಕೆಲವರು ವಿಶ್ಲೇಷಿಸುವಂತೆ ಆರ್ಥಿಕ ಹಿಂಜರಿತ ಉಂಟಾಗಿಲ್ಲ’ ಎಂದು ಉಪಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ ಇಂದು ಹೇಳಿದರು.

ಭಾರತದ ಅರ್ಥ ವ್ಯವಸ್ಥೆಯನ್ನು ತನ್ನ ಗುರಿಯತ್ತ ವೇಗವಾಗಿ ಧಾವಿಸುತ್ತಿರುವ ವ್ಯಕ್ತಿಗೆ ಹೋಲಿಸಿದ ಅವರು, ‘ವೇಗವಾಗಿ ಓಡುವವರು ಒಂದು ಹಂತದಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ವ್ಯವಸ್ಥೆಯೇ ಅವರನ್ನು ಸ್ವಲ್ಪ ಹೊತ್ತು ತಡೆಯುತ್ತದೆ’ ಎಂದರು.

* ಕದನ ವಿರಾಮಕ್ಕೆ ಒಪ್ಪಿಗೆ
ವಿಶ್ವಸಂಸ್ಥೆ, ಜುಲೈ 16–
ಸುಯೆಜ್‌ ಕಾಲುವೆಯ ಪ್ರದೇಶದಲ್ಲಿ ಪುನಃ ಪರಸ್ಪರರ ಮೇಲೆ ದಾಳಿ ನಡೆಸಿದ್ದ ಯುಎಆರ್‌ ಹಾಗೂ ಇಸ್ರೇಲ್‌ ಸೇನೆಗಳು ಕದಮ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ವಿಶ್ವಸಂಸ್ಥೆ  ಘೋಷಿಸಿದೆ.

ADVERTISEMENT

* ರಾಜ್ಯ ಸರ್ಕಾರಗಳಿಂದ ಕೇಂದ್ರದ ದೂಷಣೆ: ಮೊರಾರ್ಜಿ
ವಿಜಯಪುರಿ, ಜುಲೈ 16–
‘ಕಾಂಗ್ರೆಸ್ಸೇತರ ರಾಜ್ಯ ಸರ್ಕಾರಗಳು ಸರಿಯಾಗಿ ಆಡಳಿತ ನಡೆಸುವುದನ್ನು ಬಿಟ್ಟು, ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ನಿಂದಿಸುವುದನ್ನು ಪರಿಪಾಠ ಮಾಡಿಕೊಂಡಿವೆ’ ಎಂದು ಉಪ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ ಹೇಳಿದರು.

‘ಕಾಂಗ್ರೆಸ್‌ ಸರ್ಕಾರವನ್ನು ನಿಂದಿಸಿದ್ದ ವಿರೋಧಪಕ್ಷದವರೂ ಕೊನೆಗೆ ಕಾಂಗ್ರೆಸ್‌ ಹಾದಿಗೇ ಬಂದಿದ್ದಾರೆ. ಅಧಿಕಾರದಲ್ಲಿ ಇರುವುದರ ಅರ್ಥವೇನು ಎಂಬುದನ್ನು ಈ ಪಕ್ಷಗಳು ತಿಳಿದುಕೊಳ್ಳಬೇಕು. ಅವರು ನಮಗಿಂತ ಒಳ್ಳೆಯ ಕೆಲಸ ಮಾಡಿ ತೋರಿಸಲಿ ಎಂಬುದೇ ನಮ್ಮ ಇಚ್ಛೆ. ಅವರು ಒಳ್ಳೆಯ ಕೆಲಸಗಳನ್ನು ಮಾಡಿದರೆ ನಾವೂ ಅವರನ್ನು ಅನುಸರಿಸಲು ಸಿದ್ಧ’ ಎಂದು ಶ್ರೀ ದೇಸಾಯಿ ಅವರು ಹೇಳಿದರು.

* ಕೇಂದ್ರ ಸರ್ಕಾರದ ರಫ್ತು ತೀತಿಗೆ ಅರಸು ಟೀಕೆ
ಬೆಂಗಳೂರು, ಜುಲೈ 15–
ಪಶು ಸಂಗೋಪನೆ ಹಾಗೂ ವಾರ್ತಾ ಸಚಿವ ಶ್ರೀ ದೇವರಾಜ ಅರಸು ಅವರು ಇಂದು ಕೇಂದ್ರ ಸರ್ಕಾರದ ಆಮದು ಮತ್ತು ರಫ್ತು ನೀತಿಯನ್ನು ಟೀಕಿಸಿದರು.

ಕೇಂದ್ರದ ನೀತಿಯ ಬಗ್ಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ‘ವಿದೇಶಿ ವಿನಿಮಯವನ್ನು ಸಂಗ್ರಹಿಸುವ ಉದ್ದೇಶದಿಂದ ನಾವು ನಮಗೆ ಅಗತ್ಯವಿರುವ ವಸ್ತುಗಳನ್ನು ಸಹ ರಫ್ತು ಮಾಡುತ್ತಿದ್ದೇವೆ. ಸರ್ಕಾರ ಆಹಾರ ಧಾನ್ಯವನ್ನೂ ರಫ್ತುಮಾಡುತ್ತಿದೆಯೇ ಎಂಬುದು ತಿಳಿಯದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.