ADVERTISEMENT

ಸೋಮವಾರ, 20–03–1967

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಪಾಂಡಿಚೆರಿ ಸರ್ಕಾರದ ರಾಜೀನಾಮೆ
ಪಾಂಡಿಚೆರಿ, ಮಾ. 19– ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯ ಕಾಂಗ್ರೆಸ್ ಸಂಪುಟವು ಇಂದು ರಾಜೀನಾಮೆ ಸಲ್ಲಿಸಿತು. ಮುಖ್ಯಮಂತ್ರಿ ವಿ. ವೆಂಕಟಸುಬ್ಬ ರೆಡ್ಡಿಯಾರ್‌ರವರು ತಮ್ಮ ಸಂಪುಟದ ರಾಜೀನಾಮೆಯನ್ನು ಲೆಫ್ಟಿನೆಂಟ್ ಗೌರ್ನರ್ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದರು.
 
ನಾಲ್ಕು ಮಂದಿ ಸಚಿವರಲ್ಲಿ ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದರಿಂದ ಸಂಪುಟದ ರಾಜೀನಾಮೆಯನ್ನು ಸಲ್ಲಿಸುತ್ತಿರುವುದಾಗಿ ಮುಖ್ಯಮಂತ್ರಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
 
ಎಲ್ಲಿ ಭರವಸೆ?
ಮದ್ರಾಸ್, ಮಾ. 19– ‘ರೂಪಾಯಿಗೆ ಮೂರು ಸೇರು ಅಕ್ಕಿ ಯಾವಾಗ ಸಿಗುವುದು?’ ಮದ್ರಾಸ್ ವಿಧಾನ ಸಭೆಯಲ್ಲಿ ಶನಿವಾರ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಮತ್ತೆ ಮತ್ತೆ ಸರಕಾರಕ್ಕೆ ಕೇಳಿದ ಪ್ರಶ್ನೆಯಿದು.

ಚುನಾವಣೆಗೆ ಮೊದಲು ಡಿ.ಎಂ.ಕೆ. ಪಕ್ಷವು ಅಕ್ಕಿ ಬೆಲೆ ಇಳಿಸಿ ರೂಪಾಯಿಗೆ ಮೂರು ಸೇರಿನಂತೆ ಅಕ್ಕಿ ದೊರಕಿಸುವುದಾಗಿ ಆಶ್ವಾಸನೆ ನೀಡಿದ್ದನ್ನು ಅವರು ಉಲ್ಲೇಖಿಸುತ್ತಿದ್ದರು. ತಾಳ್ಮೆಯಿಂದಿರಲು ಡಿ.ಎಂ.ಕೆ. ಸದಸ್ಯರು ಕಾಂಗ್ರೆಸ್ಸಿಗರಿಗೆ ಹೇಳಿದರು. ಭರವಸೆಯನ್ನು ‘ಕಾಲಕ್ರಮದಲ್ಲಿ ನೆರವೇರಿಸಲಾಗುವುದು’ ಎಂದು ಉತ್ತರಿಸಿದರು.
 
ಪಾಳೇಗಾರರು
ನವದೆಹಲಿ, ಮಾ. 19–  ‘ಪಾಳೇಗಾರಿಕೆಯ ಆರೋಪ 20 ವರ್ಷಗಳ ಹಿಂದೆಯೇ ನಿರ್ನಾಮವಾಗಿರುವ ಮಾಜಿ ರಾಜರುಗಳಿಗಿಂತ ಕಾಂಗ್ರೆಸ್ಸಿಗೇ ಹೆಚ್ಚು ಸರಿ ಹೊಂದುತ್ತದೆ’
ಲೋಕಸಭೆಯಲ್ಲಿ ಮಹಾರಾಜ ಕರ್ಣಿಸಿಂಗ್ ಅವರ ಚಟಾಕಿ ಇದು.
 
‘ಪಾಳೇಗಾರಿಕೆ ವ್ಯವಸ್ಥೆ ಮುಂದುವರಿಯುತ್ತಿದೆ ಎಂಬುದಕ್ಕೆ ಎರಡನೇ ಬಾರಿ ಪ್ರಧಾನಿಯಾಗಿ ಶ್ರೀಮತಿ ಇಂದಿರಾಗಾಂಧಿ ಆಯ್ಕೆಯಾದುದೇ ಸಾಕ್ಷಿ. ನೆಹರೂರ ಪುತ್ರಿಯಾದುದರಿಂದ ಮಾತ್ರವೇ ಕಾಂಗ್ರೆಸ್ ಅವರನ್ನು ಆಯ್ಕೆ ಮಾಡಿತು. ಅದಲ್ಲದಿದ್ದರೆ ಮುರಾರಜಿ ದೇಸಾಯ್ ಆಯ್ಕೆಯಾಗುತ್ತಿದ್ದರು’ ಎಂದು ಅವರು ನಿನ್ನೆ ಲೋಕಸಭೆಯಲ್ಲಿ ನುಡಿದರು.
 
ಯೋಜನೆ ಮಂಡಳಿ ಉಪಾಧ್ಯಕ್ಷರಾಗಿ ಶ್ರೀ ಬಿ.ಕೆ. ನೆಹರೂ
ನವದೆಹಲಿ, ಮಾ. 19– ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಿ.ಕೆ. ನೆಹರೂರವರು ಮೇ ತಿಂಗಳ ಅಂತ್ಯದ ಅಥವಾ ಜೂನ್ ತಿಂಗಳ ಆರಂಭದ ಹೊತ್ತಿಗೆ ತಮ್ಮ ಹುದ್ದೆಗೆ ರಾಜೀನಾಮೆಯಿತ್ತು ಭಾರತಕ್ಕೆ ಹಿಂದಿರುಗುವ ನಿರೀಕ್ಷೆಯಿದೆ.
 
ಸಮಾಲೋಚನೆಗಾಗಿ ಈಗ ಇಲ್ಲಿಗೆ ಬಂದಿರುವ ಶ್ರೀ ನೆಹರೂರವರಿಗೆ ಪ್ರಮುಖ ಹುದ್ದೆಯೊಂದನ್ನು ನೀಡಲಾಗುವುದೆಂದು ಹೇಳಲಾಗುತ್ತಿದೆ. 
 
ಎಸ್.ಎಂ. ಬ್ಯಾನರ್ಜಿ ಲೋಕಸಭೆ ಕಮ್ಯುನಿಸ್ಟ್ ಗುಂಪಿನ ಮುಖ್ಯ ಸಚೇತಕ
ನವದೆಹಲಿ, ಮಾ. 19–  ಲೋಕಸಭೆಯಲ್ಲಿನ ಕಮ್ಯುನಿಸ್ಟ್ ಪಕ್ಷ (ಬಲ) ಗುಂಪಿನ ಮುಖ್ಯ ಸಚೇತಕರಾಗಿ ಎಸ್.ಎಂ. ಬ್ಯಾನರ್ಜಿಯವರು ಆಯ್ಕೆಯಾಗಿದ್ಶಾರೆ. ಪಕ್ಷೇತರರಾಗಿ ಚುನಾಯಿತರಾದ ಬ್ಯಾನರ್ಜಿಯವರು ಈಗ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿರುವುದರಿಂದ ಲೋಕಸಭೆಯಲ್ಲಿ ಪಕ್ಷದ ಬಲ 24ಕ್ಕೆ ಏರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.