ADVERTISEMENT

ಮಂಗಳವಾರ, 2–1–1968

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಮಂಗಳವಾರ, 2–1–1968
ಮಂಗಳವಾರ, 2–1–1968   

ಯು.ಪಿ. ಸರಕಾರದಿಂದ ಎಸ್.ಎಸ್.ಪಿ. ನಿರ್ಗಮನ

ಲೋಹಿಯಾನಗರ, ಜ. 1– ಉತ್ತರಪ್ರದೇಶ ಸರ್ಕಾರದಿಂದ ಸಂಯುಕ್ತ ಸೋಷಲಿಸ್ಟ್ ಪಕ್ಷ ನಿರ್ಗಮಿಸಲಿದೆ. ಎಸ್.ಎಸ್.ಪಿ. ಸಚಿವರು ಇಷ್ಟರಲ್ಲೆ ರಾಜೀನಾಮೆ ಕೊಡುವ ನಿರೀಕ್ಷೆ ಇದೆ.

ಸಚಿವ ಸಂಪುಟದಿಂದ ತಮ್ಮ ಪಕ್ಷದ ಸಚಿವರನ್ನು ವಾಪಸ್ ಕರೆಯಿಸಿಕೊಳ್ಳಲು ಸಂಯುಕ್ತ ಸೋಷಲಿಸ್ಟ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಇಂದು ನಿರ್ಧರಿಸಿತು.

ADVERTISEMENT

ಭೂಕಂದಾಯ ರದ್ದು, ಮುನ್ನೆಚ್ಚರಿಕೆ ಸ್ಥಾನಬದ್ಧತಾ ಕಾನೂನು ಪ್ರಕಾರ ಬಂಧಿಸಲಾಗಿರುವ ಸರಕಾರಿ ನೌಕರರ ಬಿಡುಗಡೆ ಮತ್ತು ರಾಜ್ಯದ ಆಡಳಿತಾಂಗದಿಂದ ಇಂಗ್ಲಿಷ್ ನಿರ್ಮೂಲನ– ಈ ವಿಚಾರಗಳಲ್ಲಿ ಸಮ್ಮಿಶ್ರ ಸರಕಾರ ಒಪ್ಪಂದ ಪಾಲಿಸಿಲ್ಲವೆಂದು ಸಮಿತಿ ತನ್ನ ನಿರ್ಣಯದಲ್ಲಿ ದೂಷಿಸಿದೆ.

ಚರಣ್‌ಸಿಂಗ್ ಮೌನ

ಲಖನೌ, ಜ. 1– ಸಂಯುಕ್ತ ವಿಧಾಯಕ ಸರ್ಕಾರದಿಂದ ನಿರ್ಗಮಿಸಬೇಕೆಂಬ ಎಸ್.ಎಸ್.ಪಿ. ನಿರ್ಧಾರ ಕುರಿತ ವರದಿ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಚರಣ್‌ಸಿಂಗ್ ಅವರು ಇಂದು ಇಲ್ಲಿ ನಿರಾಕರಿಸಿದರು.

ತಾವಾಗಿಯೇ ವಿಶ್ವಾಸ ಮತ ಕೋರುವ ‍ಪ್ರಶ್ನೆಯೇ ಇಲ್ಲವೆಂದೂ, ವಿರೋಧ ಪಕ್ಷವು ಅಪೇಕ್ಷಿಸಿದರೆ ಅದೇ ತಮ್ಮ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಬಹುದೆಂದೂ ಶ್ರೀ ಚರಣ್‌ಸಿಂಗ್ ತಿಳಿಸಿದರು.

ಯಥೇಚ್ಛ ವಿದ್ಯುತ್ ಕಾರಣ ಕೈಗಾರಿಕೆಗೆ

ಆದ್ಯತೆ ಕೊಡಲು ದಕ್ಷಿಣ ರಾಜ್ಯಗಳಿಗೆ ಕರೆ

ಬೆಂಗಳೂರು, ಜ. 1– ವಿದ್ಯುಚ್ಛಕ್ತಿ ಹೆಚ್ಚುವರಿ ಇರುವ ಕಾರಣ ದಕ್ಷಿಣ ರಾಜ್ಯಗಳು ವಿದ್ಯುತ್ ಉತ್ಪಾದಕ ಯೋಜನೆಗಳಿಗೆ ಬದಲಾಗಿ ಕೈಗಾರಿಕೆ ಯೋಜನೆಗಳಿಗೆ ಗಮನ ಕೊಡಬೇಕೆಂದು ಯೋಜನಾ ಆಯೋಗದ ಸದಸ್ಯ ಶ್ರೀ ಆರ್. ವೆಂಕಟರಾಮನ್ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ವಿದ್ಯುತ್ ಜಾಲದ ರಚನೆ ಶೀಘ್ರವಾಗಿ ಆಗಬೇಕೆಂಬ ತೀವ್ರಾಸಕ್ತಿ ಯೋಜನಾ ಆಯೋಗಕ್ಕಿದೆಯೆಂದೂ ಈ ಉದ್ದೇಶದಿಂದ ರಾಜ್ಯಗಳ ನಡುವೆ ವಿದ್ಯುತ್ ಲೈನುಗಳನ್ನು ಸ್ಥಾಪಿಸುವುದಕ್ಕೆ ರಾಜ್ಯಗಳ ಯೋಜನೆಗಳಲ್ಲಿ ಹಣವನ್ನು ಗೊತ್ತು ಮಾಡಲಾಗಿದೆಯೆಂದೂ ತಿಳಿಸಿದರು.

ಚಹಾ ರಫ್ತಿನಲ್ಲಿ ಮತ್ತೆ ಭಾರತಕ್ಕೆ ಮೊದಲ ಸ್ಥಾನ

ನವದೆಹಲಿ, ಜ. 1– ಚಹಾ ರಫ್ತಿನಲ್ಲಿ ವಿಶ್ವದ ಮೊದಲ ಸ್ಥಾನವನ್ನು ಭಾರತ ಮತ್ತೆ ಪಡೆದಿದೆ. 1967ರಲ್ಲಿ ಭಾರತ ರಫ್ತು ಮಾಡಿರುವ ಚಹಾದ ಪ್ರಮಾಣ 205 ದಶಲಕ್ಷ ಕಿಲೋ ಗ್ರಾಂ. ಇದು ಹೊಸ ದಾಖಲೆ ಕೂಡ.

1959ರಲ್ಲಿ ಭಾರತವು ಈ ಸ್ಥಾನವನ್ನು ಸಿಂಹಳಕ್ಕೆ ಬಿಟ್ಟುಕೊಟ್ಟಿತ್ತು. 1966 ರಲ್ಲೂ ಸಿಂಹಳಕ್ಕೇ ಅಗ್ರಸ್ಥಾನ.

ಬಹು ಜನರ ಬಯಕೆಯಂತೆ ಇಂಗ್ಲೀಷ್ ಮುಂದುವರಿಕೆ ಅಗತ್ಯವೆಂದು ಚವಾಣ್

ಹೈದರಾಬಾದ್, ಜ. 1– ಅನೇಕ ವರ್ಷಗಳ ಕಾಲ ಇಂಗ್ಲೀಷ್ ಭಾಷೆಯು ರಾಷ್ಟ್ರದ ಸಹಭಾಷೆಯಾಗಿ ಮುಂದುವರಿಯಬೇಕೆಂದು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ಹೇಳಿದರು.

‘ಇಂಗ್ಲೀಷ್ ಮುಂದುವರೆಯಬೇಕೆಂಬುದು ಅದರ ಆಂತರಿಕ ಯೋಗ್ಯತೆಯ ಕಾರಣದಿಂದಲ್ಲ. ಆದರೆ ರಾಷ್ಟ್ರದಲ್ಲಿಯ ಬಹುಜನರು ಆ ರೀತಿ ಬಯಸಿರುವುದೇ ಆಗಿದೆ’ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.