ADVERTISEMENT

ಮಂಗಳವಾರ, 6–2–1968

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST

ದೊಡ್ಡಬಳ್ಳಾಪುರದಲ್ಲಿ ಗೋಲಿಬಾರ್: 1 ಸಾವು; ಐವರಿಗೆ ಗಾಯ

ದೊಡ್ಡಬಳ್ಳಾಪುರ, ಫೆ. 5– ಈ ಪಟ್ಟಣದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಂದು ಪೊಲೀಸರು ಗುಂಡು ಹಾರಿಸಿದಾಗ ಒಬ್ಬ ಸತ್ತು ಐದು ಮಂದಿ ಗಾಯಗೊಂಡರು.

ಸಾಕಷ್ಟು ಆಹಾರಧಾನ್ಯ ಕೊಡುತ್ತಿಲ್ಲವೆಂದು ಕುಪಿತಗೊಂಡಿದ್ದ ಸುಮಾರು ಮೂರು ಸಾವಿರ ಮಂದಿಯ ಗುಂಪು ತಾಲ್ಲೂಕು ಕಚೇರಿಯ ಬಳಿ ಒಂದೇ ಸಮನೆ ಕಲ್ಲೆಸೆಯುವುದರಲ್ಲಿ ತೊಡಗಿದ್ದಾಗ ಆರು ಬೆದರು ಗುಂಡುಗಳನ್ನು ಹಾರಿಸಿ ಅದು ಗುಂಪನ್ನು ಚದುರಿಸುವುದರಲ್ಲಿ ವಿಫಲಗೊಂಡ ನಂತರ ಗುಂಪಿನ ಮೇಲೆ ಆರು ಬಾರಿ ಗುಂಡು ಹಾರಿಸಲಾಯಿತು.

ADVERTISEMENT

ಬೆಳಿಗ್ಗೆ ‘ಶಾಂತಿಯುತ ಸತ್ಯಾಗ್ರಹ’ದಿಂದ ಆರಂಭವಾದ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಹಿಂಸಾರೂ‍ಪ ತಾಳಿ ಕೊನೆಗೆ ಗೋಲಿಬಾರ್‌ನಲ್ಲಿ ಪರ್ಯವಸಾನಗೊಂಡಿತು.

ಕಮ್ಯುನಿಸ್ಟರ ವಿರುದ್ಧ ಅಮೆರಿಕನ್ ಪ್ರತಿದಾಳಿ: ಸೈಗಾನ್ ಸುತ್ತ ಕಾಳಗ

ಸೈಗಾನ್, ಫೆ. 5– ಅಮೆರಿಕನ್ ಮತ್ತು ಅದರ ಮಿತ್ರ ರಾಷ್ಟ್ರಗಳ ಸೈನ್ಯಗಳು ಇಂದು ದಕ್ಷಿಣ ವಿಯಟ್ನಾಮ್‌ನಲ್ಲಿ ಕಮ್ಯುನಿಸ್ಟರ ವಿರುದ್ಧ ಪ್ರತಿದಾಳಿ ಪ್ರಾರಂಭಿಸಿವೆಯೆಂದು ಅಮೆರಿಕನ್ ಕಮಾಂಡ್ ಪಡೆ ಪ್ರಕಟಿಸಿದೆ.

ಇದಕ್ಕೆ ಮೊದಲು ದಕ್ಷಿಣ ವಿಯಟ್ನಾಂ ಉಪಾಧ್ಯಕ್ಷರು ರಾಜಧಾನಿ ವಿರುದ್ಧ ಹೊಸ ವಿಯಟ್ನಾಂ ದಾಳಿ ನಿರೀಕ್ಷಿತವೆಂದು ಹೇಳಿ ಅದರ ತುಕಡಿಗಳು ನಗರದ ಸುತ್ತ ಜಮಾಯಿಸಿವೆಯೆಂದು ತಿಳಿಸಿದ್ದರು. ಅಲ್ಲಿ ಮತ್ತು ಸೈಗಾನಿನಲ್ಲಿ ಭೀಕರ ಕಾಳಗವಾಗುತ್ತಿದೆಯೆಂದು ಇತ್ತೀಚಿನ ವರದಿ.

ಪ್ಯೂಬ್ಲೊ ಪ್ರಕರಣ: ಒಪ್ಪಂದದ ವರದಿ ನಿರಾಕರಣೆ

ವಾಷಿಂಗ್‌ಟನ್, ಫೆ. 5– ಪ್ಯೂಬ್ಲೊ ನೌಕೆ ಮತ್ತು ಚಾಲಕ ವರ್ಗದವರ ಬಿಡುಗಡೆ ಬಗ್ಗೆ ಮಾತುಕತೆ ನಡೆಸಲು ಅಮೆರಿಕ ಮತ್ತು ಉತ್ತರ ಕೊರಿಯಾ ಪ್ರತಿನಿಧಿಗಳು ಇಂದು ಪುನಃ ನಿಸ್ಸೇನಿಕೃತ ವಲಯದ ಪಾನ್‌ ಮುಂಜೋಂನಲ್ಲಿ ಸಭೆ ಸೇರಿದ್ದರು.

ಪ್ಯೂಬ್ಲೊ ನೌಕೆ ಚಾಲಕರ ಬಿಡುಗಡೆ ಬಗ್ಗೆ ಒಪ್ಪಂದವಾಯಿತೆಂಬ ವರದಿಯನ್ನು ಅಮೆರಿಕದ ಅಧಿಕಾರಿಗಳು ನಿರಾಕರಿಸಿದರು.

ಅಂಡಮಾನ್‌ನಲ್ಲಿ ಪ್ರಧಾನಿ ಇಂದಿರಾ: ಭವ್ಯ ಸ್ವಾಗತ

ಪೋರ್ಟ್‌ಬ್ಲೇರ್, ಫೆ. 5– ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಭವ್ಯ ಸ್ವಾಗತ ದೊರೆಯಿತು.

ಸಹಸ್ರಾರು ಮಂದಿ ಸ್ತ್ರೀ– ಪುರುಷರು ಮತ್ತು ಮಕ್ಕಳು ‘ಇಂದಿರಾ ಗಾಂಧಿ ಜಿಂದಾಬಾದ್’ ಘೋಷಣೆಗೈಯ್ಯುತ್ತಾ ಸ್ವಾಗತ ಬಯಸಿದರು. ಮಧ್ಯೆ ಸಮುದ್ರದಲ್ಲಿ ನಿಂತ ಐ.ಎನ್.ಎಸ್. ಮೈಸೂರು ನೌಕೆಯಿಂದ ದೋಣಿಯಲ್ಲಿ ಛಾಥಂಜೆಟ್ಟಿಗೆ ಅವರು ಬಂದರು.

ನಿಸರ್ಗ ಸೌಂದರ್ಯ ಹಿನ್ನೆಲೆಯ ಗಂಗೊಳ್ಳಿ ನದಿ ಸೇತುವೆಗಳು: ಇಂದು ಉದ್ಘಾಟನೆ

ಕುಂದಾಪುರ, ಫೆ. 5– ಪಶ್ಚಿಮ ಕಡಲ ತೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಗೊಳ್ಳಿ ನದಿಗೆ ಐದು ಕಡೆ 104 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐದು ಸೇತುವೆಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಫೆ. 6 ರಂದು ಸಂಜೆ 4 ಗಂಟೆಗೆ ಕುಂದಾಪುರದ ಬಳಿ ಸೇರವೇರಿಸುವರು.

ಕೇಂದ್ರದ ಸಾರಿಗೆ ಸಚಿವ ಶ್ರೀ ವಿ.ಕೆ.ಆರ್.ವಿ. ರಾವ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ರೈಲ್ವೆ ಮಂತ್ರಿ ಶ್ರೀ ಸಿ.ಎಂ. ಪೂಣಚ್ಚ ಅವರು ಶ್ರೀ ಲಾಲ್ ಬಹಾದುರ್ ಶಾಸ್ತ್ರಿ ಅವರ ಪ್ರತಿಮೆಯ ಅನಾವರಣವನ್ನು ನೇರವೇರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.