ADVERTISEMENT

ಅಸಂಬದ್ಧ

ಅಯ್ಯಪ್ಪ ಹೂಗಾರ್
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST

ಸುತ್ತೂರಿನ ಜಾತ್ರೆ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಉಡುಪಿಯ ಬಾರ್ಕೂರು ಮಹಾಸಂಸ್ಥಾನದ ಹರಿಹರಾತ್ಮಕ ಪೀಠದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ‘ಬುದ್ಧಿಜೀವಿಗಳೆಂಬ ಕಳೆ ಕೀಳದಿದ್ದರೆ ಧರ್ಮದ ಕೊಲೆಯಾಗುತ್ತದೆ’ ಎಂದು ಹೇಳಿರುವುದು (ಪ್ರ.ವಾ., ಫೆ. 8) ಅಸಂಬದ್ಧವಾಗಿದೆ.

ಇಂದಿನ ನಮ್ಮ ಸಾಮಾಜಿಕ ಜೀವನವನ್ನು ಮಾನವ ಧರ್ಮದಿಂದ ದೂರ ಮಾಡುತ್ತಿರುವುದು ವಿವಿಧ ಧರ್ಮಾಚರಣೆಯ ಹೆಸರಿನಲ್ಲಿ ಹುಲುಸಾಗಿ ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದದ ಕಳೆಯಾಗಿದೆ.

ಒಂದೆಡೆ ಮೌಢ್ಯ ಮತ್ತು ಕಂದಾಚಾರಗಳನ್ನೇ ಧರ್ಮವೆಂದು ವ್ಯಾಖ್ಯಾನಿಸುತ್ತಾ, ಇನ್ನೊಂದೆಡೆ ಇಂದಿನ ವಿವಿಧ ಮತಗಳ ವಕ್ತಾರಿಕೆ ವಹಿಸಿರುವ ಮಠ, ಮಸೀದಿ, ಚರ್ಚು ಇತ್ಯಾದಿಗಳ ಕರ್ಮಠ ಮುಖ್ಯಸ್ಥರು ಸಮಾಜ ಸೇವೆಯ ಹೆಸರಿನಲ್ಲಿ ಬಂಡವಾಳವಾದದ ಪಾದಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ ವಾಸ್ತವದಲ್ಲಿ ಸಾಮಾಜಿಕ ಅಸಮಾನತೆಯನ್ನು ಪ್ರೋತ್ಸಾಹಿಸುತ್ತಾ ನಿಜವಾದ ಸಾಮಾಜಿಕ ಪ್ರಗತಿಗೆ ಅಡ್ಡಿಯಾಗಿದ್ದಾರೆ.

ಬಡತನ ನಿರ್ಮೂಲನೆ, ಪ್ರಜಾ ಕ್ಷೇಮಕ್ಕೆ ಖಾತರಿ ಕೊಡುವ ಪ್ರಜಾತಾಂತ್ರಿಕ ಪ್ರಜ್ಞೆಯ ಬೆಳವಣಿಗೆ ಕುರಿತು ಈ ಕರ್ಮಠ ಪ್ರತಿಪಾದಕರಲ್ಲಿ ಯಾವ ಯೋಚನೆ, ಯೋಜನೆಗಳಿವೆ?

ಜಾಗತೀಕರಣವೆಂಬ ಘೋರ ಶೋಷಣಾವ್ಯೂಹದ ಮೂಲಕ ಜಗತ್ತನ್ನು ನಿಯಂತ್ರಿಸುತ್ತಿರುವ ಬಲಾಢ್ಯ ಬಂಡವಾಳಶಾಹಿ ವರ್ಗಗಳು ತಮ್ಮ ಉಳಿವಿಗಾಗಿ ಎಲ್ಲ ಮತ ಧರ್ಮಗಳಲ್ಲೂ ಇಂದು ಕೋಮುವಾದದ ಕಳೆ ಬೆಳೆಯಲು ಪ್ರೋತ್ಸಾಹಿಸುತ್ತಿವೆ.

ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿನ ಕರ್ಮಠರು ಮೂಲಭೂತವಾದದ ಈ ಕಳೆ ತೋಟವನ್ನು ನೋಡಿಕೊಳ್ಳುವ ತೋಟಗಾರರ ಪಾತ್ರ ನಿರ್ವಹಿಸುತ್ತಿರುವುದು ನಗ್ನ ಸತ್ಯವಾಗಿದೆ. ಕೋಮುವಾದದ ಕಳೆ ಕೀಳುವ ಮೂಲಕ ಮಾತ್ರ ಮಾನವ ಧರ್ಮದ ರಕ್ಷಣೆ ಸಾಧ್ಯ.

ಸತ್ಯ ಹೀಗಿರುವಾಗ ವೈಚಾರಿಕತೆಯ ಕತ್ತರಿ ಹಿಡಿದು ಈ ಕಳೆ ಕೀಳುವ ಕೆಲಸದಲ್ಲಿ ನಿರತರಾಗಿರುವ ಬುದ್ಧಿಜೀವಿಗಳೇ ಇಂದಿನ ನಿಜವಾದ ಧರ್ಮ ಪ್ರತಿಪಾದಕರು ವಿನಾ ಕರ್ಮಠ ಆಲೋಚನೆಯ ಮಠಾಧೀಶರಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT