ADVERTISEMENT

ಅಸಹ್ಯಕರ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST

ರಾಜ್ಯದ ಮೂರು ಪ್ರಧಾನ ರಾಜಕೀಯ ಪಕ್ಷಗಳಿಗೆ ಟಿಕೆಟ್‌ ಹಂಚಿಕೆಯು ಬಿಡಿಸಲಾಗದ ಕಗ್ಗಂಟಾಗಿದೆ. ಆಕಾಂಕ್ಷಿಗಳು ಟಿಕೆಟ್‌ ದೊರೆಯದ ಕಾರಣಕ್ಕೆ ಅಸಮಾಧಾನಗೊಂಡು ಬೀದಿಗೆ ಇಳಿದಿದ್ದಾರೆ. ಅವರ ಬೆಂಬಲಿಗರು ಗುಂಪು ಕಟ್ಟಿಕೊಂಡು ಅವರದೇ ಪಕ್ಷದ ಕಚೇರಿಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಕಿಟಕಿ ಗಾಜು ಒಡೆದಿದ್ದಾರೆ. ಪಕ್ಷದ ವರಿಷ್ಠರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿದ್ದಾರೆ. ಆತ್ಮಹತ್ಯೆಯ ನಾಟಕಗಳೂ ನಡೆದಿವೆ.

ಒಂದು ಪಕ್ಷದ ನಾಯಕನೆಂದು ಹೇಳಿಕೊಳ್ಳುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯದ ಒಂದೇ ಕಾರಣಕ್ಕೆ ಬೇರೆ ಪಕ್ಷಕ್ಕೆ ಹಾರುತ್ತೇನೆಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇಂತಹ ರಾಜಕಾರಣಿಗಳನ್ನು ಪಕ್ಷದ ಕಾರ್ಯಕರ್ತರು–ಮುಖಂಡರು ಎಂದು ಕರೆಯುವುದಾದರೂ ಹೇಗೆ? ಇಂತಹ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅವಶ್ಯಕ.

ಪಕ್ಷಗಳು ಮೊದಲು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಬೇಕು. ಅಂಥವರನ್ನು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದಲ್ಲಿ ಪಕ್ಷದ ಸದಸ್ಯರು ಮತ ಹಾಕಿ ಚುನಾಯಿಸಬೇಕು. ಪಕ್ಷದ ಆಂತರಿಕ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಆ ಕ್ಷೇತ್ರದ ಟಿಕೆಟ್‌ ನೀಡುವುದು ಸೂಕ್ತ. ಆಗ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ನಿಜವಾದ ಕಾರ್ಯಕರ್ತರಿಗೆ ತಮ್ಮ ಅಭ್ಯರ್ಥಿಯ ಪರ ಮತ ಕೇಳಲು ಆತ್ಮವಿಶ್ವಾಸ, ಹುಮ್ಮಸ್ಸು ಇರುತ್ತದೆ. ಕೀಳು ಮಟ್ಟದ ಕಿತ್ತಾಟಗಳಿಂದ ಯಾರಿಗೂ ಒಳಿತಲ್ಲ.

ADVERTISEMENT

ಪ್ರೊ.ಡಿ.ಎಸ್. ಮಂಜುನಾಥ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.