ADVERTISEMENT

ಆಷಾಢಭೂತಿತನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಫೆಬ್ರುವರಿ 2016, 19:30 IST
Last Updated 11 ಫೆಬ್ರುವರಿ 2016, 19:30 IST

ನ್ಯಾಯಾಧೀಶರ ಕೈತೋಟ ಹಾಳು ಮಾಡಿದ ಕಾರಣಕ್ಕೆ ಮೇಕೆ ಹಾಗೂ ಅದರ ಮಾಲೀಕನನ್ನು ಬಂಧಿಸಿ, ಏಳು ವರ್ಷದ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣ  ದಾಖಲಿಸಿರುವ ಸುದ್ದಿ (ಪ್ರ.ವಾ., ಫೆ. 9) ಓದಿ ಅಚ್ಚರಿಯಾಯಿತು.

ನ್ಯಾಯಾಧೀಶರ ಕೈತೋಟದ ಎಲೆಗಳನ್ನು ತಿಂದು ಜೀರ್ಣಿಸಿಕೊಂಡಿರುವ ಮೇಕೆಗೆ ತಕ್ಕ ಶಾಸ್ತಿ ಮಾಡಿರುವ ಈ ಕ್ರಮಕ್ಕೆ ಭಲೆ ಎನ್ನಲೇಬೇಕು!
ಛತ್ತೀಸಗಡದಲ್ಲಿ ನಡೆದಂತಹ ಈ ಘಟನೆ ಅನೇಕರಿಗೆ ಬಹುಮುಖ್ಯವಲ್ಲದ ಹಾಸ್ಯಾಸ್ಪದ ಪ್ರಸಂಗ ಎನಿಸಬಹುದು. ಆದರೆ ಇದರಲ್ಲಿ ದೇಶದ ಆಡಳಿತ ವರ್ಗದ ಮನೋಭಾವ, ಆಷಾಢಭೂತಿತನ ಎದ್ದು ಕಾಣುತ್ತದೆ. ಆದರೆ ನಮ್ಮ ರಾಜ್ಯವೂ ಸೇರಿದಂತೆ ದೇಶದಾದ್ಯಂತ ಜೀವನೋಪಾಯಕ್ಕಾಗಿ ರೈತರು ಬೆವರು ಸುರಿಸಿ ಬೆಳೆದಂತಹ ಬೆಳೆಗಳು ನಿತ್ಯ ಕಾಡುಹಂದಿ, ಕೋತಿ, ಜಿಂಕೆ, ಕಾಡಾನೆ ದಾಳಿಗಳಿಗೆ ಸಿಲುಕಿ ನಾಶವಾಗುತ್ತಲೇ ಇವೆ.

ಈ ಬಗ್ಗೆ ರೈತರು ದೂರು ನೀಡಿದರೂ ಪೊಲೀಸರಾಗಲಿ, ಅರಣ್ಯಾಧಿಕಾರಿಗಳಾಗಲಿ ಗಮನಹರಿಸಿದ ಉದಾಹರಣೆ ಇಲ್ಲ. ಸಾಲ ಸೋಲ ಮಾಡಿ ಬೆಳೆದ ಬೆಳೆ ನಿತ್ಯ ಕಾಡುಪ್ರಾಣಿಗಳ ಪಾಲಾಗಿ, ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ನ್ಯಾಯಾಧೀಶರ ಕೈತೋಟದ ಬಗ್ಗೆ ತೋರಿದ ಕಾಳಜಿಯಲ್ಲಿ ಸ್ವಲ್ಪವನ್ನಾದರೂ ಅನ್ನದಾತರ ಬೆಳೆ ಬಗ್ಗೆ  ತೋರಿದರೆ ಬಡಪಾಯಿ ರೈತರ ಜೀವನ ಸ್ವಲ್ಪವಾದರೂ ಸುಧಾರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.