ADVERTISEMENT

ಇವರು ಮಾಡುತ್ತಿರುವುದೇನು?

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ತಮ್ಮ ಮುಂದಿನ ಮುಖ್ಯಮಂತ್ರಿಯಾರಾಗುತ್ತಾರೆ ಎಂಬ ಬಗ್ಗೆ ಉತ್ತರಪ್ರದೇಶ ವಿಧಾನಸಭೆಯಲ್ಲಿನ ಬಿಜೆಪಿಯ 325 ಶಾಸಕರಿಗೆ ಕೊನೆಯ ಕ್ಷಣದವರೆಗೂ ಸುಳಿವು ಇರಲಿಲ್ಲ ಎಂಬ ಸುದ್ದಿ (ಪ್ರ.ವಾ., ಮಾರ್ಚ್‌ 19) ಓದಿ ದಿಗ್ಭ್ರಮೆಗೊಂಡೆ.
 
ಜನಪ್ರತಿನಿಧಿಗಳಾದವರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡಲಾರದಂತಹ ಸ್ಥಿತಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದಿರುವುದು ನಿಜಕ್ಕೂ ಶೋಚನೀಯ. ಯಾವ ಪಕ್ಷದವರಾದರೇನು, ಹೈಕಮಾಂಡ್‌ಗೆ ಎಲ್ಲರೂ ಅಧೀನರೆ ಎಂಬುದು ಇದರಿಂದ ತಿಳಿಯುತ್ತದೆ. ಮುಚ್ಚಿದ ಲಕೋಟೆಯಲ್ಲಿ ಭಾವಿ ಮುಖ್ಯಮಂತ್ರಿಯ ಹೆಸರು ದೆಹಲಿಯಿಂದ ಬರುತ್ತದೆ ಎಂದು ಕಾಂಗ್ರೆಸ್‌ನವರನ್ನು ಲೇವಡಿ ಮಾಡುತ್ತಿದ್ದ ಬಿಜೆಪಿಯವರು ಈಗ ಮಾಡುತ್ತಿರುವುದೇನು?
ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ
 
ಬೇಸಿಗೆಯಲ್ಲೂ ಬನ್ನಿ
ರಾಜ್ಯದ ಜನಪ್ರತಿನಿಧಿಗಳು ಬೇಸಿಗೆ ಕಾಲವನ್ನು ಹೊರತುಪಡಿಸಿ ಮಿಕ್ಕೆಲ್ಲ ದಿನಗಳಲ್ಲಿ ಯಾವಾಗ ಬೇಕಾದರೂ ತಮ್ಮ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಎಗ್ಗಿಲ್ಲದೆ ಭೇಟಿ ಕೊಡುತ್ತಾರೆ. ಆದರೆ ಬೇಸಿಗೆ ಬಂದಾಗ ಮಾತ್ರ ಹಳ್ಳಿಗಳಿಗೆ ಬರಲು ಏನಾದರೊಂದು ನೆಪ ಹೇಳುತ್ತಾ ತಪ್ಪಿಸಿಕೊಳ್ಳುತ್ತಾರೆ. 
 
ಅನವಶ್ಯಕ ಕಾರ್ಯಕ್ರಮಗಳಿಗೆಲ್ಲ ಅನುದಾನ ಪ್ರಕಟಿಸುವ ಜನಪ್ರತಿನಿಧಿಗಳು, ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಹಣ ಬಿಡುಗಡೆಯಲ್ಲಿ ಉದಾರತೆ ತೋರುವುದಿಲ್ಲ. ಹೀಗಾಗಿ ನೀರು ನಿರ್ವಹಣೆಗೆ ಹಣವಿಲ್ಲದೆ ಅಧಿಕಾರಿಗಳು ಜನರೊಂದಿಗೆ ಸ್ಪಂದಿಸುವುದಿಲ್ಲ.

ಇದರಿಂದ ಸಮಸ್ಯೆ ಬಿಗಡಾಯಿಸಿ ಕುಡಿಯುವ ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತದೆ. ಬೇಸಿಗೆ ಕಾಲದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ನಿಜವಾದ ಸಮಸ್ಯೆಯನ್ನು ಜನಪ್ರತಿನಿಧಿಗಳು ಅರಿಯಲಿ. ಆಗಲಾದರೂ ಯಾವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಅರಿವು ಅವರಿಗಾಗಬಹುದು.
ಪಾಂಡೋಮಟ್ಟಿ ಶಿವಮೂರ್ತಿ, ಚನ್ನಗಿರಿ 
 
ತ್ಯಾಗಮೂರ್ತಿಗೆ ಕೊಡುಗೆ
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕಾಗಿ ₹ 175 ಕೋಟಿ ಅನುದಾನ ಮೀಸಲಿರಿಸಿರುವುದು ಸ್ವಾಗತಾರ್ಹ.
ಸಹಸ್ರಾರು ವರ್ಷಗಳಿಂದ ಸೂರಿಲ್ಲದೆ ಬಿಸಿಲು, ಮಳೆ, ಗಾಳಿಯಲ್ಲಿ ನಿಂತಿರುವ, ತ್ಯಾಗ-ವೈರಾಗ್ಯದ ಸಾಕಾರಮೂರ್ತಿಗೆ ಇದು ಅತ್ಯಲ್ಪ ಕೊಡುಗೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಕೆಲವರ ಹೇಳಿಕೆ ನನ್ನಂತಹ ಅಭಿಪ್ರಾಯ ಹೊಂದಿರುವವರಿಗೆ ನೋವು ತರಿಸುವಂತಿದೆ. ಅಪೂರ್ವ ಸೌಂದರ್ಯದ ಈ ಏಕಶಿಲಾಮೂರ್ತಿಯನ್ನು ಮುಂದಿನ ತಲೆಮಾರಿಗಾಗಿ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
 
12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ಬಳಸುವ ಕ್ಷೀರ, ಚಂದನ, ನೀರು ಮುಂತಾದ ವಸ್ತುಗಳು ಗೊಮ್ಮಟೇಶ ಮೂರ್ತಿಯ ಸೌಂದರ್ಯವನ್ನು ಕಾಪಾಡುವುದರ ಜೊತೆಗೆ ಆ ಶಿಲೆಯನ್ನು ರಕ್ಷಿಸುತ್ತವೆಂಬುದು ವೈಜ್ಞಾನಿಕ ಸತ್ಯ. ಈ ನಿಟ್ಟಿನಲ್ಲಿ ಮಹಾಮಸ್ತಕಾಭಿಷೇಕಕ್ಕಾಗಿ ಹಣ ಮೀಸಲಿರಿಸಿರುವ ಸರ್ಕಾರದ ನಿರ್ಧಾರ ಸಮಂಜಸವಾದುದು.
ಚಂದ್ರೇಗೌಡ ನಾರಮ್ನಳ್ಳಿ, ಕೆಂಕೆರೆ, ಅರಸೀಕೆರೆ ತಾಲ್ಲೂಕು
 
ಬದಲಾವಣೆ ತನ್ನಿ
ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಮಾತ್ರ ಕನಿಷ್ಠ ವಿದ್ಯಾರ್ಹತೆಯನ್ನು  ಕಡ್ಡಾಯಪಡಿಸಿಲ್ಲವೇಕೆ? ಹಾಗಾದರೆ ರಾಜಕಾರಣಿಗಳು ಎಲ್ಲವನ್ನೂ ಬಲ್ಲ ಮಹಾನ್ ವ್ಯಕ್ತಿಗಳೆಂದು ಅರ್ಥವೇ?
 
ನೀತಿ ನಿರೂಪಿಸುವವರಿಗೇ ಕನಿಷ್ಠ ವಿದ್ಯಾರ್ಹತೆ ಬೇಡವೆಂದ ಮೇಲೆ ಅವರ ಅಧೀನದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೇಕೆ ಇಂತಹ ನಿಯಮ ಇರಬೇಕು? ಕೇವಲ ಜಾತಿ, ಮತ, ಧರ್ಮ, ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದ ಮೇಲೆ ನಡೆಯುವ ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತರದ ಹೊರತು ದೇಶದ ಉದ್ಧಾರ ಸಾಧ್ಯವಿಲ್ಲ.
ನಿಕಿತಾ ಶ್ರೀಧರ್,  ತುರುವನೂರು, ಚಿತ್ರದುರ್ಗ ತಾಲ್ಲೂಕು
 
ಏನಾಗಿದೆ ಕನ್ನಡದ ಸ್ಥಿತಿ?
ನಾನು ದುಡಿಯುವ ಟೈಲರ್ ಅಂಗಡಿಯಲ್ಲಿ ಸಂಗ್ರಹವಾಗಿದ್ದ ಬಟ್ಟೆಯ ಚೂರುಗಳನ್ನು, ಕಸ ಸಂಗ್ರಹ ಮಾಡುವ ವಾಹನಕ್ಕೆ ನೀಡುವ ಒಂದು ಪ್ರಯತ್ನದಲ್ಲಿ ನನಗಾದ ಅನುಭವ ಇಂತಿದೆ.
 
ಕಸವನ್ನು ಸಂಗ್ರಹಿಸುವ ವಾಹನದಲ್ಲಿ ನಿಂತಿದ್ದ ಕೆಲಸಗಾರನು, ಇದು ನಿಗದಿಪಡಿಸಿದ ಖಾಸಗಿಯವರ ಕಸ ಸಂಗ್ರಹದ ವಾಹನವೆಂದೂ, ನೀವು ನೀಡುವ ತ್ಯಾಜ್ಯವನ್ನು ನಾವು ಸಾಗಿಸುವುದಿಲ್ಲವೆಂದೂ ಹಿಂದಿಯಲ್ಲಿ ಹೇಳಿದ. ಹಿಂದಿ ಭಾಷೆಯ ಗಂಧಗಾಳಿ ಗೊತ್ತಿಲ್ಲದ ನಾನು, ಸಮಯ ಸಂದರ್ಭವನ್ನು  ಆಧರಿಸಿ ಅವನ ಮಾತನ್ನು ಅರ್ಥೈಸಿಕೊಂಡೆ.
 
ಅಂತೆಯೇ ಕ್ಷಣಕಾಲ ಚಿಂತಿತನಾದೆ. ಏಕೆಂದರೆ, ಕಸ ಸಾಗಣೆ ಕೆಲಸಕ್ಕೂ ಪರಭಾಷಿಕರೇ ಪೈಪೋಟಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಾದರೆ ಎಲ್ಲಿಗೆ ಬಂತು ಕನ್ನಡದ ಸ್ಥಿತಿಗತಿ ಎಂಬ ಪ್ರಶ್ನೆ ನನ್ನನ್ನು ಕಾಡಿತು.
ದೇವಕಿಸುತ, ಬೆಂಗಳೂರು
 
ನೆರವು ನೀಡಿ
33 ವರ್ಷದ ನನ್ನ ಪತ್ನಿ ಶಾನ್‌ಬಾಕ ದೇವಿಗೆ ಇತ್ತೀಚೆಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ತುರ್ತಾಗಿ ಆಗಬೇಕಾಗಿದ್ದ ಶಸ್ತ್ರಚಿಕಿತ್ಸೆಗಾಗಿ ₹ 2 ಲಕ್ಷ ಸಾಲ ಮಾಡಿದ್ದೇನೆ. ಇದರ ಜೊತೆಗೆ ದಿನನಿತ್ಯದ ಆಕೆಯ ಚಿಕಿತ್ಸಾ ವೆಚ್ಚವನ್ನೂ ಭರಿಸಬೇಕಾಗಿದೆ. ಫುಟ್‌ಪಾತ್‌ ವ್ಯಾಪಾರಿಯಾದ ನನಗೆ ಇಷ್ಟೊಂದು ಹಣ ಭರಿಸಲು ಸಾಧ್ಯವಾಗುತ್ತಿಲ್ಲ. ದಾನಿಗಳು ದಯಮಾಡಿ ನೆರವಾಗಿ.
 
ನಮ್ಮ ಬ್ಯಾಂಕ್‌ ಜಂಟಿ ಖಾತೆ ವಿವರ: ಎಸ್‌.ಕುಮಾರನ್‌ ಮತ್ತು ಶಾನ್‌ಬಾಕ ದೇವಿ, ಖಾತೆ ಸಂಖ್ಯೆ– 602637763, ಇಂಡಿಯನ್‌ ಬ್ಯಾಂಕ್‌, ಅಲಸೂರು ಶಾಖೆ, ಬೆಂಗಳೂರು. IFSC CODE- IDIB000U008, ಮೊಬೈಲ್‌– 9008579575
 ಎಸ್‌.ಕುಮಾರನ್‌, ಬೆಂಗಳೂರು
 
ಆಗಿದ್ದೆಲ್ಲ ಒಳ್ಳೆಯದಕ್ಕೆ!
ವಿಧಾನಸಭೆ ಕಲಾಪ ನೋಡಲು ಕಾದು ಕುಳಿತಿದ್ದ ವಿದ್ಯಾರ್ಥಿನಿಯರು (ಪ್ರ.ವಾ. ಚಿತ್ರ, ಮಾರ್ಚ್‌ 18). ಮಕ್ಕಳೇ, ಗದ್ದಲದಿಂದಾಗಿ ನಿಂತ ಕಲಾಪ ಮತ್ತೆ ಆರಂಭವಾಗಿದ್ದರೂ ಗದ್ದಲದಿಂದಲೇ ಮುಕ್ತಾಯವಾಗುತ್ತಿತ್ತು. ಮೇಜು ಕುಟ್ಟುವುದನ್ನು, ತೋಳೇರಿಸುವುದನ್ನು ಕೈಯ್ಯಲಿರುವ ಕಾಗದ ಪತ್ರಗಳನ್ನೆಸೆಯುವುದನ್ನು ಕುರ್ಚಿ ಮೇಲೆತ್ತಿ ಕೂಗುವುದನ್ನು ಸಭಾತ್ಯಾಗವೆನ್ನುತ್ತಾ ಎದ್ದೋಗುವುದನ್ನು ನೀವು ನೋಡದಿದ್ದುದೇ ಒಳ್ಳೆಯದಾಯಿತು ಬಿಡಿ, ಭ್ರಮನಿರಸನವಾಗುವುದು ತಪ್ಪಿತು!
ಜೆ.ಬಿ.ಮಂಜುನಾಥ, ಪಾಂಡವಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.