ADVERTISEMENT

ಇವು ಉದ್ಧಾರದ ದಾರಿಗಳೇ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ನಮ್ಮ ಸರ್ಕಾರಗಳು ಸ್ಮಾರ್ಟ್‌ ಸಿಟಿ ನಿರ್ಮಾಣ ಮತ್ತು ಸ್ಮಾರ್ಟ್‌ ವಿಲೇಜ್‌ ನಿರ್ನಾಮದಲ್ಲಿ ಉತ್ಸಾಹ ತೋರುತ್ತಿವೆ. ‘ಹಳ್ಳಿಗಳು ಉದ್ಧಾರವಾಗದೆ ಭಾರತ ಉದ್ಧಾರವಾಗದು’ ಎಂದಿದ್ದರು ಬಾಪು. ಆದರೆ ನಗರಗಳನ್ನೇ ಇನ್ನಷ್ಟು ಉದ್ಧಾರ ಮಾಡಲು ಸರ್ಕಾರಗಳು ಮುಂದಾಗಿವೆ. ‘ಇಂಡೊ ಡ್ಯಾನಿಷ್‌ ಕಲ್ಚರಲ್‌ ಅಸೋಷಿಯೇಷನ್‌’ ವತಿಯಿಂದ ಮಂಡ್ಯ ಮತ್ತು ಕೋಲಾರ ಜಿಲ್ಲೆಗಳನ್ನು ಸುತ್ತಿ ಬಂದೆ. ಯಾವ ಹಳ್ಳಿಯಲ್ಲೂ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಇದ್ದಷ್ಟೂ ಜೀವಂತಿಕೆ ಇಲ್ಲ. ಯುವಕರು ಬೆಳಿಗ್ಗೆ ಎದ್ದು ಬೆಂಗಳೂರಿಗೆ ಹೋಗಿ ರಾತ್ರಿ ಒಂಬತ್ತಕ್ಕೆ ಬರುತ್ತಾರೆ. ಹಗಲು ಊರಿಗೆ ಊರೇ ವೃದ್ಧಾಶ್ರಮ. ಅಲ್ಲೊಂದು ಇಲ್ಲೊಂದು ತಿಂಗಳು ಲೆಕ್ಕದ ಬೊಮ್ಮಟೆ ಅಳು ಸದ್ದು. ಒಂದೊಂದು ಉದ್ದಿಮೆ, ಕಾರ್ಖಾನೆ ಕ್ಲಸ್ಟರ್‌–ಗ್ರಾಮಗಳ ನಡುವೆ ಸ್ಥಾಪಿತವಾದರೆ ಯುವಕರು ಹಳ್ಳಿಯಲ್ಲಿ ನಿಲ್ಲುತ್ತಾರೆ. ಉದ್ದಿಮೆ ಮತ್ತು ಕೃಷಿ ಎರಡೂ ನಡೆಯುತ್ತವೆ.ಮುದುಕರ ಜೀವನಕ್ಕೂ ಆಶ್ರಯವಿರುತ್ತದೆ.

₹ 275 ಕೋಟಿ ವೆಚ್ಚದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ ಎಂದು ಸರ್ಕಾರ ಹೇಳಿದೆ. ಅದರಿಂದ ಆಚೆಯಾದರೂ ಹಸಿರು ಬೆಲ್ಟ್‌ ಇರಬೇಕು. ಹೊಸ ಲೇಔಟ್‌ಗಳು ಹುಟ್ಟಬಾರದು. ವರ್ತುಲದೊಳಗಿನ ಸಿಟಿ ಸಮಗ್ರವಾಗಿರಬೇಕು. ಮತ್ತೆ ಅಗೆ, ಒಡೆ, ಎಳಿ–ಬೀಳಿಸು, ವಿಸ್ತರಿಸು, ಸ್ಲಮ್ಮು... ಎಲ್ಲಾ ಅರೆಬರೆ. ಬೆಲ್ಟ್‌ ಕಿತ್ತು ಹೊಟ್ಟೆಯೂ ಒಡೆಯಿತು ಎಂದಾಗಬಾರದು. ಇಲ್ಲದಿದ್ದರೆ ಸ್ಮಾರ್ಟ್‌ ಹಳ್ಳಿಗಳೂ ಏಳವು, ಸಿಟಿಗಳು ಸ್ಮಾರ್ಟೂ ಆಗವು. ವ್ಯರ್ಥ ಖರ್ಚು, ಜನತೆಗೆ ಅನ್ಯಾಯ, ‘ಹಣ ಲಪಟಾಯಿಸುವ ತಂತ್ರ’ ಎಂದು ಜನರು ಭಾವಿಸುವಂತಾಗುತ್ತದೆ. ಸರ್ಕಾರಗಳಿಂದ ಜನರಿಗೆ ಏನು ಸಂದೇಶ ರವಾನೆಯಾಗುತ್ತಿದೆ. ಬಿಟ್ಟಿ ಅಕ್ಕಿ, ಔಷಧ ಇತ್ಯಾದಿಗಳು ಉದ್ಧಾರದ ದಾರಿಗಳೇ?

–ರಾಮರಾಜು, ಚಾಮರಾಜನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.