ADVERTISEMENT

ಇಷ್ಟು ಗರ್ವ ಶೋಭೆಯಲ್ಲ

ಡಾ.ಸಿ.ಎನ್.ರಾಮಚಂದ್ರನ್
Published 15 ನವೆಂಬರ್ 2017, 20:51 IST
Last Updated 15 ನವೆಂಬರ್ 2017, 20:51 IST

ನಮಗೆಲ್ಲರಿಗೂ ಹುಟ್ಟಿನಿಂದ ಸಾವಿನ ತನಕ ವೈದ್ಯರು ಒಂದಲ್ಲಾ ಒಂದು ಕಾರಣಕ್ಕೆ ಬೇಕೇಬೇಕು; ಮತ್ತು ಎಲ್ಲರ ಅನುಭವಕ್ಕೂ ಬಂದಿರುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರೂ ಸೇರಿದಂತೆ ಹೆಚ್ಚಿನ ವೈದ್ಯರು ತಮ್ಮ ಕಾರ್ಯವನ್ನು ವೃತ್ತಿಯಂತೆ ಬಗೆಯದೆ ಅದೊಂದು ಸಮಾಜ ಸೇವೆಯಂತೆ ಮಾಡುತ್ತಾರೆ. ರೋಗಗಳನ್ನು ಗುಣಪಡಿಸುತ್ತಾರೆ, ರೋಗಿಗಳಿಗೆ ಜೀವ ಕೊಡುತ್ತಾರೆ.

ಆದರೆ, ಈ ಹಿಂದೆ ನಡೆದ ಮತ್ತು ಇಂದು ನಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರವನ್ನು ನೋಡಿದರೆ, ತಮ್ಮ ವೃತ್ತಿಯನ್ನು ಒಂದು ದಂಧೆಯಂತೆ ನೋಡುವವರೇ ಹೆಚ್ಚಾಗುತ್ತಿದ್ದಾರೋ ಎಂಬ ಅನುಮಾನ ಬರುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಯಂತ್ರೋಪಕರಣಗಳಿಲ್ಲ, ಅವಶ್ಯಕ ಔಷಧಗಳಿಲ್ಲ– ಇದೆಲ್ಲಾ ನಿಜ; ಹಾಗೆಯೇ ತನ್ನ ಪ್ರತಿಷ್ಠೆಯನ್ನು ಮರೆತು, ಈ ಮುಷ್ಕರದಿಂದ ಬಡ ರೋಗಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ ಎಂಬುದೂ ನಿಜ.

ಆದರೆ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರೂ ತಾಂತ್ರಿಕನಿಪುಣರೂ ಸೇವಾ ಮನೋಭಾವದಿಂದಲೇ ಕೆಲಸಮಾಡುತ್ತಾರೆಯೇ? ಹಾಗಿದ್ದರೆ, ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಮೆಡಿಕಲ್ ಕಾಲೇಜುಗಳಲ್ಲಿ ಯಾರೂ ಪ್ರವೇಶ ಪಡೆಯುತ್ತಿರಲಿಲ್ಲ; ಒಂದಾದ ನಂತರ ಒಂದರಂತೆ ‘ಹೈಟೆಕ್ ಖಾಸಗಿ ಆಸ್ಪತ್ರೆಗಳು’ ಬೆಳೆಯುತ್ತಿರಲಿಲ್ಲ. ಒಂದೇ ಬಗೆಯ ಮೈನರ್ ಆಪರೇಷನ್‍ಗೆ (ಅಪೆಂಡಿಕ್ಸ್ ಅನ್ನೋಣ) ₹ 20 ಸಾವಿರದಿಂದ ₹ 50 ಸಾವಿರದವರೆಗೆ ವ್ಯತ್ಯಾಸವಿರುತ್ತಿರಲಿಲ್ಲ; ಮೃತದೇಹವನ್ನಿಟ್ಟುಕೊಂಡು, ಬಿಲ್ ಕೊಡದ ಹೊರತು ದೇಹವನ್ನು ಕೊಡುವುದಿಲ್ಲ ಎಂದು ಚೌಕಾಸಿ ಮಾಡುತ್ತಿರಲಿಲ್ಲ; ಜನೌಷಧದ (ಜೆನೆರಿಕ್) ಬದಲು ದುಬಾರಿ ಬ್ರ್ಯಾಂಡ್ ಔಷಧಗಳನ್ನು ಬರೆದು ಕೊಡುತ್ತಿರಲಿಲ್ಲ.

ADVERTISEMENT

ಇವೆಲ್ಲವನ್ನೂ ಮರೆತು (ಅಥವಾ ನಿರ್ಲಕ್ಷಿಸಿ), ಈಗ ನಡೆಯುತ್ತಿರುವ ಮುಷ್ಕರದ ನಾಯಕರಂತೆ ಕಾಣುವ ಐ.ಎಂ.ಎ. ಅಧ್ಯಕ್ಷರು, ‘ಸರ್ಕಾರ, ನಾವು ಬೇಡವೆಂದರೂ ಈ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಲು ಮುಂದಾಗಿದೆ. ಇದೇನಾದರೂ ಜಾರಿಗೆ ಬಂದರೆ ನಾವು ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮುಚ್ಚುತ್ತೇವೆ; ಆಗೇನು ಮಾಡುತ್ತೀರಿ?’ ಎಂದು ಆರ್ಭಟಿಸುತ್ತಿರುವುದು ವಿಷಾದನೀಯ; ಇಂತಹ ಗರ್ವ ಯಾರಿಗೂ ಸಲ್ಲ. ‘ತಿಂಗಳಿಗೆ ಲಕ್ಷಗಟ್ಟಲೆ ಬರುವ ಆದಾಯವಿಲ್ಲದೇ ಹೋದರೆ ನೀವೇನು ಮಾಡುತ್ತೀರಿ’ ಎಂದು ಕೇಳಬೇಕೆನ್ನಿಸುತ್ತದೆ.

ಸರ್ಕಾರ ತನ್ನ ಹಟವನ್ನು ಹಾಗೂ ವೈದ್ಯರು ತಮ್ಮ ಅಹಂ ಅನ್ನು ಬಿಟ್ಟರೆ, ಮಾತುಕತೆಯ ಮೂಲಕ ಎಲ್ಲಾ ಪ್ರಶ್ನೆಗಳನ್ನೂ ಪರಿಹರಿಸಿಕೊಳ್ಳಬಹುದೆಂದು ತೋರುತ್ತದೆ. ಹಾಗಾಗುತ್ತದೆಯೇ? ಅಥವಾ ಈಗ ಸತ್ತಿರುವ 12 ಮಂದಿಯೊಡನೆ ಇನ್ನಷ್ಟು ಜನರು ಸಾಯಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.