ADVERTISEMENT

ಉತ್ಪ್ರೇಕ್ಷಿತ ಅಂಕಿಅಂಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:30 IST
Last Updated 27 ಜೂನ್ 2016, 19:30 IST

ಭಾರತದಲ್ಲಿ ಬಡತನ ನಿರ್ಮೂಲನೆಯಾಗಿಲ್ಲ, ಬಡತನ ನಿರ್ಮೂಲನೆ ಮಾಡಲು ಹೊರಟವರೆಲ್ಲರೂ ಶ್ರೀಮಂತರಾಗಿದ್ದಾರೆ ಎಂಬ ಪ್ರಸನ್ನ ಅವರ ಅನಿಸಿಕೆ (ಪ್ರ.ವಾ. ಜೂನ್‌ 25) ಅಕ್ಷರಶಃ ಸತ್ಯ. ‘ಗರೀಬಿ ಹಠಾವೋ’ ಘೋಷಣೆ ಗರೀಬರ ಶೋಷಣೆಯಾಗಿಯೇ ಕಾಡಿತು. ಜಾಗತೀಕರಣ, ಎಫ್‌ಡಿಐ, ಬೃಹತ್ ಕೈಗಾರಿಕೆಗಳ ಸ್ಥಾಪನೆ, ಹೆದ್ದಾರಿಗಳ ನಿರ್ಮಾಣದಂಥ ಬಹುಕೋಟಿ ಬಂಡವಾಳ ಹೂಡಿಕೆಯ ಬೃಹತ್ ಯೋಜನೆಗಳೆಲ್ಲಾ ಬಡವರ ಸಂಖ್ಯೆಯನ್ನು ಮತ್ತಷ್ಟು, ಮಗದಷ್ಟು ಏರಿಸಿವೆ.

ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಂಡು, ನೆಮ್ಮದಿಯ ಜೀವನ ನಡೆಸುತ್ತಿದ್ದ ರೈತರನ್ನು ಒಕ್ಕಲೆಬ್ಬಿಸಿ ಮತ್ತಷ್ಟು ಜನರನ್ನು ಬಡತನದ ಬವಣೆಗೆ ನೂಕಲಾಗಿದೆ. ಬಡತನ ಅಂದಾಜು ಮಾಡುವ ಸಮೀಕ್ಷಕರೆಲ್ಲಾ ಸರ್ಕಾರದ ಕೃಪೆಯಲ್ಲಿದ್ದು, ಕಡಿಮೆ ಸಂಖ್ಯೆ ತೋರಿಸಿ ಭೇಷ್‌ ಎನಿಸಿಕೊಂಡಿದ್ದಾರೆ.

ಚುನಾವಣೆಯ ಪ್ರಣಾಳಿಕೆಯಲ್ಲಿ, ಸಾಧನೆಯ ಸರಮಾಲೆಯಲ್ಲಿ ಬಡವರ ಬಡಕಲು ಚಿತ್ರವನ್ನು ಪೋಣಿಸಿ ತೋರಿಸಲಾದೀತೇ? ಬಲಿಷ್ಠ ಭಾರತದಲ್ಲಿ ಬಡ ಪ್ರಜೆಗಳ ಸಂಖ್ಯೆ ಅಪಾರ ಎನ್ನಲಾದೀತೇ? ಅದಕ್ಕಾಗಿ ಪ್ರತಿ ಆರ್ಥಿಕ ಸಮೀಕ್ಷೆಯ ಅಂಕಿಅಂಶ ಪಟ್ಟಿಯಲ್ಲಿ ಬಡತನ ಕಡಿಮೆಯಾಗಿದೆ ಎಂದು ತೋರಿಸಲಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಬಡವರ ಸಂಖ್ಯೆ ವರ್ಷ ವರ್ಷವೂ ಏರುತ್ತಿದೆ.
- ಜಿ.ಶಿವಣ್ಣ ಕೊತ್ತೀಪುರ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.