ADVERTISEMENT

ಎಲ್ಲ ಮಾಂಸಾಹಾರಿಗಳೆ

ಪ್ರಜಾವಾಣಿ ವಿಶೇಷ
Published 4 ಮೇ 2016, 19:30 IST
Last Updated 4 ಮೇ 2016, 19:30 IST

ಶಿವಮೊಗ್ಗ ಜಿಲ್ಲೆಯ ಮತ್ತೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ಈಚೆಗೆ ನಡೆದ ಸೋಮಯಾಗದಲ್ಲಿ ವೇದ  ಮಂತ್ರ ಘೋಷಣೆ ಜೊತೆಗೆ ಮಾಂಸ ಸೇವನೆಯನ್ನೂ ಮಾಡಿರುವುದು ಬಹುತೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಮನುಷ್ಯ ಮೂಲತಃ ಮಾಂಸಾಹಾರಿ ಎಂಬುದು ಇದರಿಂದ ಖಚಿತವಾಗುತ್ತದೆ.

ವೈಜ್ಞಾನಿಕವಾಗಿ ಅವಲೋಕಿಸಿದಾಗ, ಬ್ರಾಹ್ಮಣ ಸಮುದಾಯ ಸೇರಿದಂತೆ ಭೂಮಿ ಮೇಲೆ ವಾಸಿಸುವ ಎಲ್ಲ ಜಾತಿ, ವರ್ಗದ ಜನ ಮಾಂಸಾಹಾರಿಗಳೇ ಆಗಿದ್ದಾರೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಆನೆ, ಜಿಂಕೆ ಸೇರಿದಂತೆ ಎಲ್ಲ ಸಸ್ಯಹಾರಿ ಪ್ರಾಣಿಗಳು ಮಗುವಿಗೆ ಜನ್ಮ ನೀಡುತ್ತಿದ್ದಂತೆ, ಆ ಮರಿ 10ರಿಂದ 20 ನಿಮಿಷದಲ್ಲಿ ಓಡಾಡಲು ಆರಂಭಿಸುತ್ತದೆ.

ಆದರೆ ಸಿಂಹ, ಬೆಕ್ಕು, ನಾಯಿ, ಹುಲಿ, ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳು ಜನ್ಮ ನೀಡಿ 5ರಿಂದ 10 ದಿನಗಳವರೆಗೆ ಓಡಾಡುವುದಿರಲಿ ಸರಿಯಾಗಿ ಕಣ್ಣನ್ನೂ ಬಿಡುವುದಿಲ್ಲ. ಈ ಜಾತಿಗೆ ಮಾನವ ಕೂಡ ಸೇರುತ್ತಾನೆ. ಇದರಿಂದ ಎಲ್ಲ ಮಾಂಸಾಹಾರಿ ಜೀವಿಗಳ ದೈಹಿಕ ನಡೆ ಒಂದೇ ರೀತಿ ಇರುತ್ತದೆ ಎಂಬುದು ತಿಳಿಯುತ್ತದೆ.ಜಾಗೃತ ಸಮುದಾಯದ ಸಾಲಿನಲ್ಲಿರುವ ಬ್ರಾಹ್ಮಣರು ಮಾಂಸಾಹಾರದ ಅಪಾಯದ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದಾರೆ.

ಶ್ರಮಿಕರಲ್ಲದ ಯಾವುದೇ ವರ್ಗದ ಜನ ಮಾಂಸ ಸೇವಿಸುವುದು ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಪೂಜೆ, ಪುನಸ್ಕಾರದಂತಹ  ಶ್ರಮಿಕವಲ್ಲದ ವೃತ್ತಿ ನಡೆಸುವ ಸಮುದಾಯಕ್ಕೆ ಸಸ್ಯಾಹಾರವೇ ಸೂಕ್ತ. ಇದನ್ನರಿತು ಒಂದೆರಡು ಶತಮಾನಗಳ ಹಿಂದೆ ಆ ವರ್ಗದ ಜನ ಮಾಂಸಾಹಾರ ತ್ಯಜಿಸಿದ್ದಾರೆ.

ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ಮತ್ತು ದೈಹಿಕ ಶ್ರಮವಲ್ಲದ ವೃತ್ತಿ ನಡೆಸುತ್ತಿರುವ ಎಲ್ಲ ಜಾತಿ, ಸಮುದಾಯದ ಜನ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರವನ್ನು ಅಳವಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತ.

ಆದರೆ, ಕ್ರೀಡಾಪಟುಗಳು, ಹಮಾಲಿಗಳು, ಕೃಷಿಕರು, ಕೂಲಿ ಕಾರ್ಮಿಕರು ಸೇರಿದಂತೆ ಮೈಮುರಿದು ದುಡಿಯುವವರು ಯಾವುದೇ ಜಾತಿಗೆ ಸೇರಿರಲಿ ಅವರಿಗೆ ಮಾಂಸಾಹಾರ ಅಪಾಯಕಾರಿಯಲ್ಲ. ಒಟ್ಟಿನಲ್ಲಿ ಮಾಂಸಾಹಾರ ಅವರು ಮಾಡುವ ವೃತ್ತಿಯನ್ನು ಅವಲಂಬಿಸಿರಬೇಕು, ಜಾತಿ, ವರ್ಗವನ್ನಲ್ಲ ಎಂಬುದು ಮಾತ್ರ ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT