ADVERTISEMENT

ಐತಿಹಾಸಿಕವಾದ ದಿಟ್ಟ ನಿರ್ಧಾರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

ಕೆಪಿಎಸ್‌ಸಿಯ 2011ರ ಗೆಜೆಟೆಡ್‌ ಪ್ರೊಬೇಷನರ್‌ ಅಧಿಕಾರಿಗಳ  ಆಯ್ಕೆ ಪಟ್ಟಿಯನ್ನು  ರದ್ದುಗೊಳಿಸಿದ ರಾಜ್ಯ ಸರ್ಕಾರದ ಕ್ರಮ ದಿಟ್ಟತನದಿಂದ ಕೂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ಅಭಿನಂದಿಸಬೇಕಾಗಿದೆ.

ಕೆಪಿಎಸ್‌ಸಿ ತನ್ನ ವಿಶ್ವಾಸಾರ್ಹತೆ ಯನ್ನು ಕಳೆದುಕೊಂಡುಬಿಟ್ಟಿದೆ. ಅಧಿಕಾರ ದುರುಪಯೋಗ, ರಾಜಕಾರಣಿಗಳ ಪ್ರಭಾವ, ‘ಬಲಾಢ್ಯ ಜನಾಂಗದವರ ಆಕ್ಟೋಪಸ್‌ ಹಿಡಿತ’, ಧನ ಬಲವುಳ್ಳವರ ಅತಿಕ್ರಮ ಪ್ರವೇಶದಿಂದಾಗಿ ‘ಶ್ರಮಿಕ, ಸ್ವಾಭಿಮಾನಿ, ಪ್ರತಿಭಾವಂತ’ ಅರ್ಹ ಅಭ್ಯರ್ಥಿಗಳಲ್ಲಿ ಕೆಪಿಎಸ್‌ಸಿ ಮೇಲೆ ನಂಬಿಕೆಯೇ ನಶಿಸಿಹೋಗಿದೆ.

ಆಯ್ಕೆ ಪಟ್ಟಿ ರದ್ದು ಮಾಡಿರುವುದರಿಂದ ಕೆಲವು  ಅರ್ಹ ಪ್ರಾಮಾಣಿಕರಿಗೆ ತೊಂದರೆಯಾಗಬಹುದು. ಆದರೆ ದೂರದೃಷ್ಟಿ ನೆಲೆಯಲ್ಲಿ ಈ ನಿರ್ಧಾರ ಅತ್ಯಂತ ಸಮರ್ಪಕವಾಗಿದೆ. ಅಲ್ಲದೆ, ಮುಂದಿನ ನಮ್ಮ ಪ್ರತಿಭಾ­ವಂತರಿಗೆ ಸರ್ಕಾರದ ನಿರ್ಧಾರ ಆಶಾಕಿರಣದಂತೆ ಗೋಚರಿ­ಸುತ್ತಿದೆ. ಮಾತ್ರವಲ್ಲ, ವಾಮಮಾರ್ಗದಿಂದ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದ ‘ಅನರ್ಹ’ರಿಗೆ ಎಚ್ಚರಿಕೆ ಗಂಟೆಯಾಗಿದೆ.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವ ಬದಲು ವಿರೋಧಿಸುತ್ತಿರುವ ಮಂದಿಯಲ್ಲಿ ‘ಸ್ವಹಿತ’ ಅಡಗಿದೆಯೇ ಹೊರತು ಲೋಕಹಿತವಂತೂ ಅಲ್ಲ ಎಂಬುದನ್ನು ಪ್ರಜ್ಞಾವಂತರೂ ಗಮನಿಸಬೇಕಿದೆ. ಮುಖ್ಯಮಂತ್ರಿಯವರೇ,  ತಾವಿರುವ ಹುದ್ದೆ ಶಾಶ್ವತವಲ್ಲ. ಇರುವಷ್ಟು ದಿನ ಬಹುಜನ ಒಪ್ಪಿ, ಮೆಚ್ಚಿ ಸದಾಕಾಲ ಸ್ಮರಿಸುವ ಯೋಜನೆ, ಕಾರ್ಯಕ್ರಮ, ನಿರ್ಧಾರಗಳನ್ನು ಅನುಷ್ಠಾಗೊಳಿಸುವತ್ತ ಮುಂದಾಗಿ. ಇದೇ ನಮ್ಮೆಲ್ಲರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.