ADVERTISEMENT

ಕಿರಿಕಿರಿಗೆ ಮುಕ್ತಿ ಸಿಗಲಿ

ಮಹೇಶ್ವರ ಹುರಕಡ್ಲಿ ಬಾಚಿಗೊಂಡನಹಳ್ಳಿ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST

ಗೆಳೆಯನೊಬ್ಬ ಬಹುದಿನಗಳ ನಂತರ ಫೋನಾಯಿಸಿದ. ಉಭಯ ಕುಶಲೋಪರಿಯ ನಂತರ ಮಾತುಕತೆ ಹೊರಳಿದ್ದು ರಾಜಕೀಯದೆಡೆಗೆ. ಪ್ರಸ್ತುತ ಚುನಾವಣೆಯಲ್ಲಿ ಆತನ ಮತ್ತು ನನ್ನ ಆಯ್ಕೆಯ ಪಕ್ಷಗಳು ಬೇರೆ ಬೇರೆಯಾಗಿದ್ದವು. ಮಾತು ಮುಂದುವರೆಸಿದ ನನ್ನ ಗೆಳೆಯ, ತನ್ನ ಆಯ್ಕೆಯ ಪಕ್ಷದ ಭೂತ, ವರ್ತಮಾನ, ಭವಿಷ್ಯತ್‌ಗಳನ್ನು ಬೆರೆಸಿ ಕಲಸುಮೇಲೋಗರಗೊಳಿಸಿ, ದೂರವಾಣಿಯಲ್ಲಿಯೇ ‘ಫೋನ್ ಕಿ ಬಾತ್’ ಆರಂಭಿಸಿದ. ಸುದೀರ್ಘ ಭಾಷಣದಲ್ಲಿ ತನ್ನ ಆಯ್ಕೆಯ ಪಕ್ಷವೇ ಸರ್ವೋತ್ತಮವೆಂದೂ, ನನ್ನ ಆಯ್ಕೆಯ ಪಕ್ಷ ತುಚ್ಛವೆಂದೂ ಉಪಮಾನಗಳೊಂದಿಗೆ ವರ್ಣಿಸಿದ್ದಲ್ಲದೇ ತನ್ನ ಪಕ್ಷಕ್ಕೇ ಮತ ಚಲಾಯಿಸಬೇಕೆಂದು ಪಟ್ಟು ಹಿಡಿದು ಒತ್ತಾಯಿಸಿದ.

ಇದೆಂತಹ ಕಿರಿಕಿರಿ? ಪ್ರತಿಯೊಬ್ಬರ ವಿಚಾರ– ನಂಬಿಕೆಗಳು ಬೇರೆ ಬೇರೆಯಾಗಿರುತ್ತವೆ. ಅವರು ಆಯ್ದುಕೊಂಡ ಪಕ್ಷ ಮತ್ತು ನಾಯಕರ ಬಗ್ಗೆ ಅವರದೇ ಆದ ಮುನ್ನೋಟವೂ ಇರುತ್ತದೆ. ಇದನ್ನು ಸಾರಾಸಗಟಾಗಿ ತಪ್ಪು ಎನ್ನಲು ಸಾಧ್ಯವಿಲ್ಲ. ಹೆಚ್ಚೆಂದರೆ ವಿವಿಧ ಪಕ್ಷಗಳ, ನಾಯಕರ ಪ್ರಣಾಳಿಕೆ, ಮೌಲ್ಯಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಯಾವ ಪಕ್ಷಕ್ಕೆ ಮತ ನೀಡಿದರೆ ಉತ್ತಮ ಎನ್ನುವ ನಿರ್ಧಾರವನ್ನು ಅವರವರಿಗೆ ಬಿಡುವುದು ಸೂಕ್ತವಲ್ಲವೇ? ಈ ಸೂಕ್ಷ್ಮತೆ ಎಲ್ಲರಿಗೂ ಅರ್ಥವಾದರೆ ಇಂತಹ ಕಿರಿಕಿರಿಗಳಿಗೆ ಮುಕ್ತಿ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT