ADVERTISEMENT

ಕೀಳರಿಮೆ ಬಿತ್ತಬೇಡಿ!

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಸಹನಾ ಕಾಂತಬೈಲು ಅವರ ಪತ್ರ ‘ಎಷ್ಟು ಸರಿ?’ (ವಾ.ವಾ., ಅ.12) ನೋಡಿದೆ. ಬೇರೆಯವರು ಉಂಡು ಬಿಟ್ಟ ಪದಾರ್ಥಗಳನ್ನು ಕೈಯಿಂದ ಬರಗಿ ಬಕೆಟ್‌ಗೆ ಹಾಕುತ್ತಿದ್ದ ಯುವಕರನ್ನು ನೋಡಿ, ‘ಏನೋ ಆಗಬಾರದ್ದು ಆಗಿ ಹೋಯಿತು’ ಎಂಬಂತೆ ಅಲವತ್ತುಕೊಂಡಿದ್ದಾರೆ.

ನಿಜವೆಂದರೆ, ಯಾವ ಕೆಲಸವೂ ಕೀಳೆನ್ನದೆ ತಿಳಿದು ಸಮರ್ಪಣೆ–ಸೇವಾ ಭಾವದಿಂದ ಕಾಯಕನಿಷ್ಠೆ ಮೆರೆಯುತ್ತಿರುವ ಆ ಯುವಕರಿಗೆ, ಅವರು ನಮ್ಮ ಮಕ್ಕಳೇ ಆದರೂ, ‘ಶಹಬ್ಬಾಸ್‌’ ಎನ್ನಬೇಕು, ಅವರಿಗೆ ಕಾಯಕ ಅಭಿಮಾನ ಮೂಡುವಂತೆ ಮಾಡಬೇಕು, ಕೀಳರಿಮೆ ಅಲ್ಲ. ತ್ಯಾಜ್ಯ ಆಹಾರವನ್ನು ಬಿಸಾಕದೆ, ಸಂಗ್ರಹಿಸಿ ಮೂಕಪ್ರಾಣಿಗಳಿಗೆ ಉಪಯೋಗಿಸಬಹುದು, ಅದು ಪುಣ್ಯ ಕಾರ್ಯವೇ.

ಈ ಕೆಲಸ ಒಂದು ವೇಳೆ ಯುವಕರು ಮಾಡದಿದ್ದರೆ, ಪಾತ್ರೆ ತೊಳೆಯುವವರಾದರೂ ಮಾಡಲೇಬೇಕಲ್ಲವೇ? ಅವರೂ ಮನುಷ್ಯರೇ ಅಲ್ಲವೇ? ಅವರಿಗೆ ಏನು ಹೇಳುತ್ತೀರಿ? ಈ ರೀತಿಯ ಕೀಳರಿಮೆ ಭಾವದಿಂದಾಗಿಯೇ ಇಂದು ಕೈಕೆಸರಾಗುವ ಕೃಷಿ ಕೆಲಸಕ್ಕೆ ಆಳುಗಳೇ ಸಿಗುತ್ತಿಲ್ಲ, ಎಲ್ಲರಿಗೂ ಶಹರವೇ ಬೇಕು– ಕೆಳ ದರ್ಜೆ ಕೆಲಸವೋ, ಕಳ್ಳತನವೋ, ಹೇಗಾದರೂ ಸರಿ!

ADVERTISEMENT

ಇನ್ನು, ಆಹಾರ ಬಿಸಾಕುವವರ, ಅದನ್ನು ಪ್ರತ್ಯೇಕ ಬಕೆಟ್‌ಗೆ ಹಾಕದವರ ಬಗ್ಗೆ– ಈ ಅನಾಗರಿಕ, ಬೇಜವಾಬ್ದಾರಿ ವರ್ತನೆ ನಮ್ಮ ಭಾರತೀಯರಲ್ಲಿ ಹಾಸುಹೊಕ್ಕಾಗಿದೆ, ಎಲ್ಲಾ ಕ್ಷೇತ್ರಗಳಲ್ಲೂ! ಸುಧಾರಿಸಲಾಗದು. ಅವರ ಬಗ್ಗೆ ಬೇಕಾದರೆ ಅಲವತ್ತುಕೊಳ್ಳಬಹುದು!

ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.