ADVERTISEMENT

ಕೆಲಸದ ವೈಖರಿ!

ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ
Published 29 ಮೇ 2016, 19:30 IST
Last Updated 29 ಮೇ 2016, 19:30 IST

‘ಜೆಸಿಬಿಗಲ್ಲ, ಜನರ ಕೈಗೆ ಕೆಲಸ ಕೊಡಿ’ (ಪ್ರ.ವಾ., ಮೇ 18) ಶೀರ್ಷಿಕೆಯಡಿ  ಶಾರದಾ ಗೋಪಾಲ ಅವರು ಮಾಡಿರುವ ವಿಶ್ಲೇಷಣೆಗೆ ನನ್ನ ಪ್ರತಿಕ್ರಿಯೆ. ನಾನು ಹತ್ತಿರದಿಂದ ಕಂಡ ಎರಡು ಪ್ರಸಂಗಗಳೊಂದಿಗೆ ವಿವರಿಸುತ್ತೇನೆ.

ಕೆರೆಯ ಹೂಳೆತ್ತುವ ಕೆಲಸವನ್ನು ಪಡೆದ ಗುತ್ತಿಗೆದಾರನಿಗೆ, ಕೂಲಿ ಕಾರ್ಮಿಕರನ್ನೇ ಕೆಲಸಕ್ಕೆ ಹಚ್ಚಲು, ಅಧಿಕಾರಿಗಳು ಒತ್ತಾಯ ಮಾಡಿದ್ದರಿಂದ ಗುತ್ತಿಗೆದಾರನು ಜೆಸಿಬಿಗಳ ಬಳಕೆಯನ್ನು ಕೈ ಬಿಟ್ಟನು. ಹತ್ತಿರದ ಹಳ್ಳಿಗಳಿಂದ ಸುಮಾರು 200 ಪುರುಷ ಹಾಗೂ ಮಹಿಳಾ ಕಾರ್ಮಿಕರನ್ನು ಕೆಲಸಕ್ಕೆ ಹಚ್ಚಿದನು. ಮೂರ್ನಾಲ್ಕು ಕಿ.ಮೀ. ನಡೆದು ಬಂದು ಕೆಲಸ ಆರಂಭಿಸಿದಾಗ ಹತ್ತು ಗಂಟೆ ಮೀರಿರುತ್ತಿತ್ತು!

ಇವರಿಗೆಲ್ಲ ಹಾರೆ, ಪಿಕಾಸಿ, ಸಲಿಕೆ, ಪುಟ್ಟಿಗಳನ್ನು ಗುತ್ತಿಗೆದಾರನೇ ಪೂರೈಸಿದ. ಮೂರ್ನಾಲ್ಕು ದಿನಗಳಲ್ಲಿ ಪುಟ್ಟಿಗಳು ನಿರುಪಯುಕ್ತವಾಗುತ್ತಿದ್ದವು. ಅಸ್ತವ್ಯಸ್ತ ಕೆಲಸ. ಅರ್ಧ ಗಂಟೆಗೊಂದು ಟ್ರ್ಯಾಕ್ಟರ್‌ ಲೋಡ್‌ ಆಗುತ್ತಿತ್ತು! ತಿಂಗಳು ಕಳೆದರೂ, ಕೆರೆಯಲ್ಲಿ ಮೂರಡಿಗಿಂತ ಹೆಚ್ಚು ಆಳಕ್ಕೆ ಹೂಳು ತೆಗೆಯಲಾಗಲಿಲ್ಲ.

ಕೆಲಸದ ಮಧ್ಯೆ ಮೂತ್ರಕ್ಕೆ, ಎರಡಕ್ಕೆ ಅಂತಾ ನೆಪ ಹೇಳಿ,  ಗಿಡದ ನೆರಳಲ್ಲಿ ಅರ್ಧ ಗಂಟೆಯಷ್ಟು, ಮಧ್ಯಾಹ್ನ ಊಟಕ್ಕೆ ಒಂದು ಗಂಟೆ ಸಮಯ ಕಳೆಯುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿದ್ದ ಕಾರ್ಮಿಕರನ್ನು ನಿಯಂತ್ರಿಸಲು ಶಕ್ಯವಿರಲಿಲ್ಲ! ಕಾಲು ಭಾಗದಷ್ಟೂ ಕೆಲಸವಾಗಿರಲಿಲ್ಲ. ಏತನ್ಮಧ್ಯೆ ಚೆನ್ನಾಗಿ ಮಳೆ ಸುರಿಯಿತು. ಕೆರೆಯಲ್ಲಿ ನೀರು ತುಂಬಿತು.

ಕೆಲಸ ಅಲ್ಲಿಗೆ ನಿಂತು ಹೋಯಿತು! ಮುದ್ದೇಬಿಹಾಳ ಪಟ್ಟಣದ ಕೆರೆಯಲ್ಲಿ, ಹೂಳು ತೆಗೆಯಲು ಜೆಸಿಬಿ ಹಾಗೂ ಅನೇಕ ಟ್ರ್ಯಾಕ್ಟರುಗಳನ್ನು ಬಳಸಲಾಯಿತು. ಯಶಸ್ವಿಯಾಗಿ ಒಂದೇ ತಿಂಗಳಿನಲ್ಲಿ ಹೂಳು ತೆಗೆಯಲಾಯಿತು! ನೀರಿನ ಶೇಖರಣೆಗೆ ಆಳವುಳ್ಳ ತಳಮಟ್ಟವಿಲ್ಲದೆ, ಈ ಹಿಂದೆ ಬೇಸಿಗೆಯಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿ ಹೋಗುತ್ತಿತ್ತು.

ಹೂಳನ್ನು ಆಳಕ್ಕೆ ತೆಗೆದಿರುವುದರಿಂದ, ಕಡು ಬೇಸಿಗೆಯಲ್ಲೂ ಒಮ್ಮೆಯೂ  ಕೆರೆ ಬತ್ತಿಲ್ಲ! ಬೃಹತ್‌ ಪ್ರಮಾಣದಲ್ಲಿ ಹೂಳು ತೆಗೆಯುವಲ್ಲಿ ಕಾರ್ಮಿಕರ ಹಾಗೂ ಜೆಸಿಬಿಗಳ ಕಾರ್ಯವೈಖರಿಯನ್ನು ಪ್ರಜ್ಞಾವಂತರು ತುಲನೆ ಮಾಡಬೇಕಾದ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.