ADVERTISEMENT

ಗೀಜರ್‌: ಎಚ್ಚರ ಇರಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2015, 19:59 IST
Last Updated 8 ಡಿಸೆಂಬರ್ 2015, 19:59 IST

ಗ್ಯಾಸ್ ಗೀಜರ್‌ ಬಳಸಿ ಸ್ನಾನ ಮಾಡುವಾಗ ಬೆಂಗಳೂರಿನಲ್ಲಿ ತಾಯಿ, ಮಗು ಉಸಿರುಗಟ್ಟಿ ಮೃತರಾದ ದಾರುಣ ಘಟನೆ ವರದಿಯಾಗಿದೆ (ಪ್ರ.ವಾ., ಡಿ. 8). ಗ್ಯಾಸ್ ಗೀಜರ್‌ ಬಳಸುವ ಕೊಠಡಿಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಆದರೆ ಸರಿಯಾದ ಮುನ್ನೆಚ್ಚರಿಕೆ ಕ್ರಮ ಇದಲ್ಲ.

ಗ್ಯಾಸ್ ಗೀಜರ್ ಬಳಸುವ ಸ್ನಾನದ ಮನೆಯಲ್ಲಿ ಬೆಳಕನ್ನು ಲೈಟ್ ಹಾಕಿಯೂ ಪಡೆಯಬಹುದು; ಆದರೆ, ಇಲ್ಲಿ ಇರಬೇಕಾದದ್ದು ಚೆನ್ನಾಗಿ ಗಾಳಿಯಾಡುವ ವ್ಯವಸ್ಥೆ. ಕಾರಣ ಇಷ್ಟೆ, ಗೀಜರ್‌ನಲ್ಲಿ ಬಳಸುವ ಗ್ಯಾಸ್ ಬ್ಯೂಟೇನ್ ಮತ್ತು ಪ್ರೊಪೇನ್ ಎಂಬ ಅನಿಲಗಳ ಮಿಶ್ರಣ.

ಗೀಜರ್‌ನಲ್ಲಿ ಸುಟ್ಟಾಗ ಇದು ಇನ್ನೊಂದು ಅನಿಲವನ್ನು ಬಿಡುಗಡೆ ಮಾಡುತ್ತದೆ. ಕೋಣೆಯಲ್ಲಿ ಸಾಕಷ್ಟು ಗಾಳಿ (ಆಮ್ಲಜನಕ) ಇದ್ದರೆ ಕಾರ್ಬನ್ ಡೈ ಆಕ್ಸೈಡ್ ಉಂಟಾಗುತ್ತದೆ; ಗಾಳಿಯ (ಆಮ್ಲಜನಕದ) ಕೊರತೆ ಇದ್ದರೆ ಅರೆಬರೆ ದಹನದಿಂದಾಗಿ ಕಾರ್ಬನ್ ಮಾನಾಕ್ಸೈಡ್ ಉಂಟಾಗುತ್ತದೆ. ಇದು ವಿಷಕಾರಿ ಅನಿಲ.

ಇದಕ್ಕೆ ಬಣ್ಣವಿಲ್ಲ, ವಾಸನೆಯಿಲ್ಲ. ಹೀಗಾಗಿ ಕಿಟಿಕಿ, ಬಾಗಿಲು ಮುಚ್ಚಿದ ಸ್ನಾನದ ಮನೆಯಲ್ಲಿ ಗ್ಯಾಸ್ ಗೀಜರ್ ಆನ್ ಇಟ್ಟುಕೊಂಡೇ ಸ್ನಾನ ಮಾಡಿದರೆ ಉಸಿರುಗಟ್ಟಿ ಮೂರ್ಛೆ ಹೋಗುವ ಅಥವಾ ಹೆಚ್ಚು ಹೊತ್ತು ಉಸಿರಾಡಿದರೆ ಸಾವನ್ನೇ ಅಪ್ಪುವ ಸಾಧ್ಯತೆ ಇರುತ್ತದೆ. ಗ್ಯಾಸ್ ಗೀಜರುಗಳನ್ನು ಬಳಸುವವರು ಇದನ್ನು ಗಮನಿಸಬೇಕು.
-ಎಂ.ಅಬ್ದುಲ್ ರೆಹಮಾನ್ ಪಾಷ,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.