ADVERTISEMENT

ಜಾತಿ, ಮಠ, ರಾಜಕಾರಣ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಟ ನಡೆದಿದೆ. ಇದು ಶೋಚನೀಯ. ಇದನ್ನು ನೋಡಿದರೆ ರಾಜ್ಯಗಳನ್ನು ಒಡೆದು ಪ್ರತ್ಯೇಕ ರಾಜ್ಯ ಮಾಡುವಂತೆ ಬರುತ್ತಿರುವ ಬೇಡಿಕೆಯ ನೆನಪಾಗುತ್ತದೆ. ನಾಳೆ ಪ್ರತಿಯೊಂದು ಜಾತಿಯವರು ಪ್ರತ್ಯೇಕ ಧರ್ಮ ಬೇಕೆಂದು ನಿಂತರೆ ಭಾರತದ ಪುರಾತನ ಹಿಂದೂ ಧರ್ಮದ ಕತೆಯೇನು? ನೂರಾರು ಜಾತಿಗಳು ಇರುವಂತೆ ನೂರಾರು ಧರ್ಮಗಳಾಗುವುದರಲ್ಲಿ ಆಶ್ಚರ್ಯವಿಲ್ಲ.

ನಾವು ಉಸಿರಾಡುವ ಗಾಳಿ ಒಂದೇ, ಕುಡಿಯುವ ಜಲ ಒಂದೇ, ನಿಂತಿರುವ ನೆಲ ಒಂದೇ. ಕೆಲವೇ ದಿನ ಇದ್ದು ಹೋಗುವ ನಮಗೆ ಪ್ರತ್ಯೇಕ ಧರ್ಮಗಳ ಅವಶ್ಯಕತೆ ಇದೆಯೇ?

ಅಂತರ್ ಧರ್ಮೀಯ ವಿವಾಹಿತರನ್ನು ನಾವು ನೋಡುತ್ತಿದ್ದೇವೆ. ಅವರಲ್ಲಿ ಎಷ್ಟೋ ಜನ ಚೆನ್ನಾಗಿದ್ದಾರೆ. ಧರ್ಮವೇ ಮುಖ್ಯವಾಗಿದ್ದರೆ ಅಂತರ್ ಧರ್ಮೀಯ ವಿವಾಹಿತರೆಲ್ಲ ಜೀವನದಲ್ಲಿ ಸುಖವಾಗಿ ಇರಬಾರದಿತ್ತಲ್ಲ?

ADVERTISEMENT

ಇಂದು ಪ್ರತಿಯೊಂದಕ್ಕೂ ಜಾತಿ–ಧರ್ಮ ಎಂದು ಕಿತ್ತಾಡುತ್ತಿದ್ದೇವೆ. ಹೀಗಿರುವಾಗ ರಕ್ತಕ್ಕೆ ಏನಾದರೂ ಜಾತಿ ಇದೆಯೇ? ಅನಾರೋಗ್ಯಕ್ಕೆ ತುತ್ತಾಗಿ, ರಕ್ತದ ಅವಶ್ಯಕತೆ ಉಂಟಾದಾಗ ಜಾತಿ–ಧರ್ಮ ಎಲ್ಲಿರುತ್ತದೆ. ಇದೇಕೆ ನಮಗೆ ಅರಿವಾಗುತ್ತಿಲ್ಲ.

ಶಾಲೆಗಳಲ್ಲಿ ಬಡವ, ಬಲ್ಲಿದ, ಮುಸ್ಲಿಂ, ಹಿಂದೂ, ಕ್ರೈಸ್ತ ಎನ್ನದೆ, ಒಂದೇ ಸಮವಸ್ತ್ರ ಧರಿಸಿ, ಎಲ್ಲಾ ಮಕ್ಕಳು ಸರಿಸಮಾನರೆನ್ನುವ ಭಾವನೆ ಬಿತ್ತುವ ಈ ನಮ್ಮ ಸಮಾಜದಲ್ಲಿ, ಪ್ರೌಢಾವಸ್ಥೆಗೆ ಬಂದಾಗ ನಮ್ಮ ನಮ್ಮಲ್ಲೇ ಕಂದಕಗಳನ್ನು ಸೃಷ್ಟಿಸಿಕೊಳ್ಳುವುದೇಕೆ? ಪ್ರಾಣಿ–ಪಕ್ಷಿಗಳಲ್ಲಿ ಇರುವಂಥ ಸಹಬಾಳ್ವೆ, ಸಹಜೀವನ ನಮಗೆ ಮಾದರಿಯಾಗಬೇಕು. ಮನುಷ್ಯ ಮಾತ್ರ ಜಾತಿ, ಧರ್ಮ ಎಂಬ ಬೇಲಿಯನ್ನು ಗಟ್ಟಿಗೊಳಿಸಲೆತ್ನಿಸುತ್ತಿರುವುದು ಆಘಾತಕಾರಿ. ಮಠಾಧಿಪತಿಗಳು ಇತ್ತೀಚೆಗೆ ಆಯಾ ವರ್ಗಕ್ಕೆ ಸೀಮಿತವಾಗಿರುವುದೇ ಇಂದಿನ ಸಮಸ್ಯೆಗೆ ಮೂಲ ಕಾರಣ. ಜಾತಿ, ಉಪಜಾತಿಗೊಂದರಂತೆ ಮಠಗಳು ಸ್ಥಾಪನೆಯಾಗುತ್ತಿವೆ. ರಕ್ಷಣೆಗೆಂದು ಇವು ತಮ್ಮ ಜಾತಿಯ ರಾಜಕೀಯ ನಾಯಕರನ್ನು ಹುಟ್ಟಿ ಹಾಕುತ್ತಿವೆ. ಇಂದು ರಾಜಕಾರಣಿಗಳು ಮತ್ತು ಮಠಗಳ ನಡುವೆ ಅವಿನಾಭಾವ ಸಂಬಂಧವಿದೆ. ಮಠಗಳ ರಕ್ಷಣೆಗೆ ರಾಜಕಾರಣಿಗಳಿದ್ದಾರೆ, ರಾಜಕಾರಣಿಗಳಿಗೆ ಮಠಗಳು ಮತಬ್ಯಾಂಕುಗಳಾಗಿವೆ.

ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಇದ್ದ ಅಸ್ಪೃಶ್ಯತೆ, ಜಾತಿಗಳ ನಡುವಣ ಕಿತ್ತಾಟವು ಇಂದು ನಗರಗಳಲ್ಲಿ ಸಂಘ ಪರಿವಾರದ ಮುಖಾಂತರ ಬಲಗೊಳ್ಳುತ್ತಿದೆ. ಇದರ ಹಿಂದೆ ರಾಜಕಾರಣಿಗಳು ಇದ್ದಾರೆ. ಸಂಕುಚಿತ ಮನೋಭಾವವನ್ನು ಬೆಳೆಸುತ್ತಿದ್ದಾರೆ.

ಪ್ರತ್ಯೇಕ ಧರ್ಮ ಬಯಸುವವರಲ್ಲಿ ಒಂದು ಮನವಿ. ನಿಮ್ಮ ಮನೆಯ ನಲ್ಲಿಯಲ್ಲಿ ಬರುವ ನೀರು ನಿಮ್ಮದೇ ಧರ್ಮದ ನೀರಾಗಿದ್ದರೆ; ನೀವು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ನಿಮಗೆ ನೀಡಿದ ರಕ್ತ ನಿಮ್ಮದೇ ಧರ್ಮದವರದ್ದಾಗಿದ್ದರೆ ದಯವಿಟ್ಟು ತಿಳಿಸಿ. ಆಗ, ಪ್ರತ್ಯೇಕ ಧರ್ಮಕ್ಕಾಗಿ ನಿಮ್ಮೊಡನೆ ಹೋರಾಡಲು ನಾನೂ ಸಿದ್ಧ.

ಕಿಕ್ಕೇರಿ ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.