ADVERTISEMENT

ದೇವರೇ ಗತಿ!

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಕೆತ್ತನೆಯಿರುವ ವಿಧಾನಸೌಧದ ಮುಂಭಾಗದಲ್ಲಿ ಇತ್ತೀಚೆಗೆ ನಡೆದ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ದ ಉದ್ಘಾಟನಾ ಸಮಾರಂಭ ನೋಡಿ, ಜನರ ಹಣದಲ್ಲಿ ಈ ಬಗೆಯಲ್ಲಿ ಕೆಲಸ ನಡೆದರೆ ‘ದೇವರೇ ಗತಿ’ ಎಂದುಕೊಂಡೆ.

ಸಮಾರಂಭ ಸಂಜೆ 6ಕ್ಕೆ ಆರಂಭವಾಗಬೇಕಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು ಸ್ವಾಗತ ಹೇಳಲಾರಂಭಿಸಿದಾಗ 6.55. ಮುಖ್ಯ ಅತಿಥಿಗಳೇ ಬರಲಿಲ್ಲ. ವಿದೇಶಿ ನಿರ್ದೇಶಕಿಯನ್ನು ತಡವಾಗಿ ವೇದಿಕೆಗೆ ಕರೆದರು. ಕಲಾತ್ಮಕ ನಿರ್ದೇಶಕರನ್ನು ಹೆಸರಿಗೆ ಎಂಬಂತೆ ಕೂಡಿಸಿದ್ದರು.

ಚಲನಚಿತ್ರದ ಇತಿಹಾಸಕ್ಕಿಂತ ಬೆಳಕು, ಶಬ್ದಗಳ ಮ್ಯಾಜಿಕ್ ಹೆಚ್ಚಿರುವ ವಿಡಿಯೊ  ಮ್ಯಾಪಿಂಗ್ ಮೊದಲು, ದೀಪ ಹಚ್ಚಿದ್ದು ಕೊನೆಗೆ. ಮುಖ್ಯಮಂತ್ರಿಯೇನೋ ಸಾಂದರ್ಭಿಕವಾಗಿ, ಸಹಜವಾಗಿ ಮಾತನಾಡಿದರು. ಆದರೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ  ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಸಿದ್ದರಾಮಯ್ಯನವರನ್ನು ವಾಚಾಮಗೋಚರವಾಗಿ ಹೊಗಳಿದರು. ಪ್ರತಿವರ್ಷ ಬಿಡುಗಡೆಯಾಗುವ ನೂರಾರು ಚಲನಚಿತ್ರಗಳ ಪೈಕಿ ಸದಭಿರುಚಿಯ ಚಿತ್ರಗಳು ಎಷ್ಟು ಎಂದು ಅವರಿಬ್ಬರೂ ತಲೆಕೆಡಿಸಿಕೊಂಡಂತಿಲ್ಲ. 

ಉದ್ಘಾಟನಾ ಚಿತ್ರವೇ ಒಂದು ಗಂಟೆ ತಡವಾಗಿ ಆರಂಭವಾಗಿದ್ದು ಇನ್ನೊಂದು ಸಾಧನೆ. ಅಕಾಡೆಮಿಯು ಮಂಡಳಿ ಹಾಗೂ ವಾರ್ತಾ ಇಲಾಖೆಯ ವಿಸ್ತರಣಾ ಕೌಂಟರ್ ಆಗಿದೆ. ಅಧಿಕಾರಿಗಳು ಹಾಗೂ ಚಿತ್ರೋದ್ಯಮದ ಕೆಲವರನ್ನು ಒಳಗೊಂಡ ಒಂದು ಕೂಟ ತಲೆಎತ್ತಿದೆ. ಕೆಲವು ಗಂಭೀರ ಚಲನಚಿತ್ರಾಸಕ್ತರೂ ಅದರಲ್ಲಿದ್ದಾರೆ. ಹಲವು ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿರುವ ನನಗೆ ಇದನ್ನೆಲ್ಲ ನೋಡಿ ‘ನಗೆಯು ಬರುತಿದೆ’.
ಎಚ್‌.ಎಸ್‌.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.