ADVERTISEMENT

ಧ್ವಜಕ್ಕಿಂತ ಏಕತೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST

‘ನಾಡಧ್ವಜ: ರಾಜ್ಯ ಅಸ್ಮಿತೆಯ ಸಂಕೇತ- ವಿರೋಧ ಏಕೆ?’  ಶೀರ್ಷಿಕೆಯ ಸಂಪಾದಕೀಯಕ್ಕೆ (ಪ್ರ.ವಾ., ಜುಲೈ 20) ಪ್ರತಿಕ್ರಿಯೆ. ಹಿಂದಿ ವಿರೋಧಿ ಹೋರಾಟವಾಗಲೀ, ಧ್ವಜ ರಚನೆಗೆ ಸಮಿತಿ ರಚನೆಯಾಗಲೀ ಅಪ್ಪಟ ರಾಜಕೀಯ ಹುನ್ನಾರದ ನಡೆಗಳು. ಇದರಲ್ಲಿ ಅಸ್ಮಿತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕು. ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಬಿಟ್ಟರೆ, ಉಳಿದ ಜಿಲ್ಲೆಗಳಲ್ಲಿ ಅಪ್ಪಟ ಕನ್ನಡಿಗರು ಇಲ್ಲ. ಉದಾಹರಣೆಗೆ ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು, ಕೊಂಕಣಿ, ಬ್ಯಾರಿ, ಕುಡುಬಿ ಭಾಷೆಗಳೇ ಮಾತೃಭಾಷೆಗಳು.

ಕಾರವಾರ ಸುತ್ತಮುತ್ತ ಕೊಂಕಣಿ, ನವಾಯಿತ ಭಾಷೆ, ಬೆಳಗಾವಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಮರಾಠಿ ಮತ್ತು ಕೊಂಕಣಿ ಮಾತನಾಡುವ ಸಾಕಷ್ಟು ಜನ ಇದ್ದಾರೆ. ಬೀದರ್, ವಿಜಯಪುರ, ಕಲಬುರ್ಗಿ ಜಿಲ್ಲೆಗಳಲ್ಲಿ ಉರ್ದು, ಮರಾಠಿ ಪ್ರಭಾವ ದಟ್ಟವಾಗಿದೆ. ರಾಯಚೂರು, ಯಾದಗಿರಿ, ಬಳ್ಳಾರಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಅಧಿಕ. ಇವರಲ್ಲಿ ಮನೆಮಾತು ಕನ್ನಡವಲ್ಲದ ಯಾವುದೋ ಒಂದು ಭಾಷೆ ಇರುತ್ತದೆ. ಕನ್ನಡ ವ್ಯಾವಹಾರಿಕ ಭಾಷೆಯಾಗಿ ಬಳಕೆ ಆಗುತ್ತಿರುತ್ತದೆ. ಲಂಬಾಣಿ ಭಾಷೆ, ಹವ್ಯಕ ಕನ್ನಡ ಸೇರಿದಂತೆ ಇನ್ನೂ ಎಷ್ಟೋ ಸಣ್ಣಪುಟ್ಟ ಸಮುದಾಯಗಳು ಅತ್ಯಂತ ಕಷ್ಟದಲ್ಲಿ ತಮ್ಮ ಭಾಷೆಗಳನ್ನು ಉಳಿಸಿಕೊಂಡು ಬಂದಿವೆ.

ADVERTISEMENT

ಈ ಎಲ್ಲ ಭಾಷಿಗರು ತಮ್ಮ ಮನೆ ಭಾಷೆಗಿಂತ ಕನ್ನಡವನ್ನು ಅಧಿಕವಾಗಿ ಪ್ರೀತಿಸುತ್ತಿದ್ದಾರೆ. ಮಾತೃಭಾಷಾ ದುರಭಿಮಾನಿಗಳೂ ಆಗಿಲ್ಲ. ಕನ್ನಡದ ಶಕ್ತಿ ಅಂತಹದ್ದು. ನೀವು ದಕ್ಷಿಣ ಕನ್ನಡಕ್ಕೆ ಹೋದರೆ ಅಲ್ಲಿ ತುಳು ಭಾಷೆಯನ್ನು ಎಲ್ಲ ಕಡೆಗಳಲ್ಲಿ ಮಾತನಾಡುತ್ತಾರೆ. ಕನ್ನಡ ಮಾತನಾಡಿದರಷ್ಟೇ  ಕನ್ನಡ ಬರುತ್ತದೆ. ಹಳ್ಳಿಗಳಲ್ಲಿ ಎಷ್ಟೋ ಜನರಿಗೆ ಕನ್ನಡದ ಪರಿಚಯ ಇಲ್ಲ ಎಂದರೆ ಅಚ್ಚರಿಪಡಬೇಕಾಗಿಲ್ಲ. ತುಳು, ಕೊಂಕಣಿ, ಬ್ಯಾರಿ ಮತ್ತು ಕುಡುಬಿ ಭಾಷಿಕರ ಮಕ್ಕಳು ಕನ್ನಡ ಶಾಲೆಗೆ ಸೇರಿದಾಗ ಕನ್ನಡ ಅವರಿಗೆ ಪರಕೀಯ ಭಾಷೆ ಎಂದೇ ಅನ್ನಿಸುತ್ತದೆ. ಆದರೆ, ಯಾರೂ ಕನ್ನಡವನ್ನು ಹೇರಿಕೆ ಎಂದು ಭಾವಿಸಿಲ್ಲ. ಪ್ರೀತಿಯಿಂದ ಕಲಿತಿದ್ದಾರೆ. ಕನ್ನಡಿಗರೇ ಆಗಿದ್ದಾರೆ.

ತುಳು ನಾಡಿಗೊಂದು ಬಾವುಟ ಬೇಕು, ತುಳುನಾಡ ಅಸ್ಮಿತೆ ಪುನರ್ ಸ್ಥಾಪಿಸಬೇಕು ಎಂದು ಯಾರೂ ಭಾವಿಸಿಲ್ಲ. ಕೊಡಗಿನಲ್ಲಿ ಹಿಂದೆ ಪ್ರತ್ಯೇಕ ರಾಜ್ಯದ ಕೂಗು ಇತ್ತು. ಅದನ್ನು ಹಳೇ ಮೈಸೂರಿನ ಕೆಲ ಕನ್ನಡಿಗರು ಹೀಯಾಳಿಸಿದ್ದೂ ಇದೆ. ಗೋವಾ- ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಕೊಂಕಣ ಪ್ರದೇಶಕ್ಕೆ ಹೊಂದಿಕೊಂಡ ತಾಲ್ಲೂಕುಗಳಲ್ಲಿರುವ ಕೊಂಕಣಿಗರು ಪ್ರತ್ಯೇಕ ಕೊಂಕಣಿ ನಾಡು ಆಗಬೇಕು ಎಂದೋ, ಪ್ರತ್ಯೇಕ ಧ್ವಜ ಹೊಂದುವ ಮೂಲಕ ಕೊಂಕಣಿ ಅಸ್ಮಿತೆ ಕಾಪಾಡೋಣ ಎಂದೋ ಹೊರಟರೆ ಏನಾದೀತು?

ಆಳುವವರು ಈ ಸೂಕ್ಷ್ಮತೆ ಅರಿತುಕೊಳ್ಳಬೇಕು. ಬೆಂಗಳೂರಿನ ಕನ್ನಡ ಹೋರಾಟಗಾರರು ಕರ್ನಾಟಕ ಬಂದ್‌ಗೆ ಕರೆ ಕೊಟ್ಟರೆ ಸಂಪೂರ್ಣ ಕರ್ನಾಟಕ ಬಂದ್ ಆಗುವುದಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲೇ ಸಿಗುತ್ತದೆ. ಕನ್ನಡವನ್ನು ಪ್ರೀತಿಯಿಂದ ಒಪ್ಪಿ, ಅಪ್ಪಿಕೊಂಡು ನಮ್ಮದಾಗಿಸಿಕೊಂಡಿರುವಾಗ ದಬ್ಬಾಳಿಕೆ ಏತಕ್ಕೆ? ಕರ್ನಾಟಕದಲ್ಲಿರುವ ಇತರ ಸಣ್ಣ ಭಾಷೆಗಳ ಬಗ್ಗೆ ಅದೇ ಅಕ್ಕರೆ, ಅಸ್ಮಿತೆಯ ಕಾಳಜಿ ಏಕಿಲ್ಲ?

ವೀರಪ್ಪ ಮೊಯಿಲಿ ಅವರು ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಗಳಿಗೊಂದು ಮಾನ್ಯತೆ ದಕ್ಕಿಸಿಕೊಟ್ಟರು. ಕರ್ನಾಟಕ ಭಾರತದ ಪಡಿಯಚ್ಚು, ಏಕತೆಯನ್ನು ಜತನದಿಂದ ಕಾಪಾಡಿಕೊಂಡು ಹೋಗಬೇಕು.
ಕುಡ್ತೇರಿ ಮೋಹನ್ ಶೆಣೈ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.