ADVERTISEMENT

ನಂಜಿನ ಕಿಡಿ ಬಿತ್ತಬೇಡಿ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
‘ಭಾರತಕ್ಕೆ ಹಿಂಸೆ ಬಂದಿದ್ದೇ ಮುಸ್ಲಿಮರಿಂದ’ ಎಂಬ ಎಂ.ಚಿದಾನಂದ ಮೂರ್ತಿಯವರ ಮಾತುಗಳನ್ನು (ಪ್ರ.ವಾ., ಜ. 22) ಓದುತ್ತಿದ್ದಂತೆಯೇ, ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಲಕ್ಷಾಂತರ ಮಂದಿಯ ಸಾವು–ನೋವುಗಳಿಗೆ ಕಾರಣವಾದ ಅಶೋಕ ಚಕ್ರವರ್ತಿಯ ಕಳಿಂಗ ಯುದ್ಧದ ನೆನಪಾಯಿತು. ಆಗ ಮುಸ್ಲಿಮರ ನೆರಳು ಕೂಡ ಭರತಖಂಡದ ಮೇಲೆ ಬಿದ್ದಿರಲಿಲ್ಲವೆಂಬುದು ಐತಿಹಾಸಿಕ ವಾಸ್ತವವಾಗಿದೆ.
 
‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬ ನಾಣ್ಣುಡಿಯೊಂದು ಬಳಕೆಯಲ್ಲಿದೆ. ಈ ಮಾತನ್ನು ನಿಜ ಮಾಡುವಂತೆ ಚಿದಾನಂದ ಮೂರ್ತಿ ಮತ್ತು ಎಸ್.ಎಲ್. ಭೈರಪ್ಪನವರು ತಾವು ಮಾಡುವ ಪ್ರತಿಯೊಂದು ಭಾಷಣದಲ್ಲಿಯೂ ಭರತಖಂಡದ ಎಲ್ಲಾ ಬಗೆಯ ಸಾಮಾಜಿಕ ಕೇಡುಗಳಿಗೆ ಮುಸ್ಲಿಮರತ್ತ ಬೆರಳು ಮಾಡುತ್ತಿರುವುದು ಅತ್ಯಂತ ದುರಂತದ ಸಂಗತಿ.
 
ಏಕೆಂದರೆ ಹಲವಾರು ಧರ್ಮಗಳು ಮತ್ತು ನೂರೆಂಟು ಬಗೆಯ ಜಾತಿಗಳ ಹೆಣಿಗೆಯಿಂದ ಕೂಡಿರುವ ಭಾರತೀಯ ಸಮಾಜದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬಾಳಿ ಉಳಿಯಲು ಜನ ಸಮುದಾಯಗಳ ನಡುವೆ ಪರಸ್ಪರ ಪ್ರೀತಿ, ಗೌರವ, ನಂಬಿಕೆ ಮತ್ತು ಒಡನಾಟ ಇರಲೇಬೇಕು. ಸಾಹಿತ್ಯವಾಗಲಿ, ಸಾಹಿತಿಗಳಾಗಲಿ ಒಡೆದ ಮನಸ್ಸುಗಳನ್ನು ಒಂದು ಮಾಡಲು ಪ್ರಯತ್ನಿಸಬೇಕೇ ಹೊರತು ಜನರ ಮನದಲ್ಲಿ ಜಾತಿ–ಧರ್ಮಗಳ ಬಗ್ಗೆ ನಂಜಿನ ಕಿಡಿಗಳನ್ನು ಬಿತ್ತುತ್ತಾ, ಪರಸ್ಪರ ಅನುಮಾನ ಮತ್ತು ಹಗೆತನದಿಂದ ಗುದ್ದಾಡುತ್ತ ನರಳುವಂತೆ ಮಾಡಬಾರದು.
 
ವಯೋ ವೃದ್ಧರಾಗಿರುವ ಈ ಇಬ್ಬರು ಸಾಹಿತಿಗಳು ನಮ್ಮ ಮುಂದಿನ ಮಕ್ಕಳು, ಮೊಮ್ಮಕ್ಕಳ ಬಾಳಿನ ಒಳಿತಿಗೆ ನೆರವಾಗುವಂತಹ ಮಾತುಗಳನ್ನಾಡಲೆಂದು ಬಯಸುತ್ತೇನೆ.
-ಸಿ.ಪಿ.ನಾಗರಾಜ, ಬೆಂಗಳೂರು 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.