ADVERTISEMENT

ನಿರಾಸಕ್ತಿ ಬೇಡ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 19:30 IST
Last Updated 27 ಏಪ್ರಿಲ್ 2015, 19:30 IST

‘ಸಾಂಸ್ಕೃತಿಕ ನೀತಿಗೆ ನಿರಾಸಕ್ತಿ’ ಎಂಬ ಶೀರ್ಷಿಕೆ ಅಡಿ ಪ್ರಕಟವಾಗಿರುವ ವರದಿ ನೋಡಿ (ಪ್ರ.ವಾ., ಏ. 27) ವಿಷಾದವೆನಿಸಿತು. ಬರಗೂರು ರಾಮಚಂದ್ರಪ್ಪ  ಅಧ್ಯಕ್ಷತೆ ಯಲ್ಲಿ ರಚಿತವಾಗಿದ್ದ ಕರ್ನಾಟಕ ಸಾಂಸ್ಕೃತಿಕ ನೀತಿ ನಿರೂ ಪಣಾ ಸಮಿತಿಯು ಕರ್ನಾಟಕ ಸಾಂಸ್ಕೃತಿಕ ನೀತಿಯ ಕರಡು ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿ 10 ತಿಂಗಳಾದರೂ ಅದರ ಬಗ್ಗೆ ಸರ್ಕಾರ ಗಮನಹರಿಸದೇ ಇರುವುದು ದುರದೃಷ್ಟಕರ.

ಸಮಾಜದ ಸಮತೋಲನ, ಸಾಮರಸ್ಯ ಮತ್ತು ಚಲನಶೀಲತೆಗೆ ಪೂರಕವಾದ ನೆಲೆಯಲ್ಲಿ ಒಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಅಗತ್ಯವನ್ನು ಮನಗಾಣಲಾಗಿದ್ದು, 1998–99ರ ಅವಧಿಯಲ್ಲಿ ನಾನು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದಾಗಲೇ ಸುಮಾರು 80 ಪುಟಗಳ ಸಮಗ್ರ ‘ಸಾಂಸ್ಕೃತಿಕ ನೀತಿ’ಯ ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು.

1999ರಲ್ಲಿ ಆರಂಭವಾದ ಈ ಪ್ರಕ್ರಿಯೆಗೆ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಸಮಿತಿಯಿಂದ ಪುನಃ ಚಾಲನೆ ದೊರೆಯಿತು. ಅತ್ಯಂತ ಶ್ರದ್ಧೆ, ಪರಿಶ್ರಮ ಹಾಗೂ ಕಾಳಜಿಯಿಂದ ತಯಾರಿಸಿರುವ ಈ ಕರಡು ಪ್ರಸ್ತಾವದಲ್ಲಿ ಮಾಡಿರುವ ಬಹುತೇಕ ಶಿಫಾರಸುಗಳು ಸ್ವಾಗತಾರ್ಹ ಹಾಗೂ ಅನುಷ್ಠಾನಯೋಗ್ಯ.

ಈ ನೀತಿಯ ಆಶಯ, ವಿವಿಧ  ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವುದೇ ಹೊರತು, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀತಿ ಸಂಹಿತೆ ಅಳವಡಿಸುವುದು ಅಲ್ಲ. ಸರ್ಕಾರ ಇದನ್ನು ಮನಗಂಡು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದು ಸೂಕ್ತ.
ವೈ.ಕೆ. ಮುದ್ದುಕೃಷ್ಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.