ADVERTISEMENT

ನೆಲೆ ನಿರ್ಧರಿಸಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST

ಶಾಸ್ತ್ರೀಯ ಕನ್ನಡದ ಕೇಂದ್ರವನ್ನು ಸ್ಥಾಪಿಸುವ ಸಲುವಾಗಿ ಈಗ ಸಾಹಿತಿಗಳ ನಡುವೆ ಹಗ್ಗಜಗ್ಗಾಟವಾಗುತ್ತಿರುವುದನ್ನು ಕಂಡು ಚಂದ್ರಶೇಖರ ದಾಮ್ಲೆಯವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ (ಸಂಗತ, ಜ. 9). ಕೇಂದ್ರವನ್ನು ಎಲ್ಲಿ ಸ್ಥಾಪಿಸಬೇಕು ಎಂಬುದರ ಬಗ್ಗೆ ಈಗಾಗಲೇ ವಿಸ್ತೃತ ಚರ್ಚೆ ನಡೆದಿದೆ. ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ  ನಿರ್ಧಾರ ತೆಗೆದುಕೊಳ್ಳಬೇಕಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬಂದು (2008) ಇಷ್ಟು ವರ್ಷಗಳಾದರೂ ಅದಕ್ಕೆ ಕಾಯಂ ನೆಲೆ ಕಲ್ಪಿಸಲು  ನಮಗೆ ಆಗಿಲ್ಲ. ಈ ನಡುವೆ ತಮಿಳಿಗರು ಈಗಾಗಲೇ ₹ 70 ಕೋಟಿ ಅನುದಾನ ಪಡೆದುಕೊಂಡು ತಮಿಳಿನ ಅಭಿವೃದ್ಧಿ ಕೆಲಸ ಮಾಡುತ್ತಿರುವುದು ಜಾಣ್ಮೆಯೇ ಸರಿ. ಆದರೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹಲವು ನಿಯೋಗ, ಹೋರಾಟಗಳು ನಡೆದಾಗ ತೋರಿದಷ್ಟು ಹುಮ್ಮಸ್ಸು ಕಡಿಮೆ ಆಗಿರುವುದಕ್ಕೆ ಯಾವ ತಾಂತ್ರಿಕ ಕಾರಣವೋ, ಅಥವಾ ಸರ್ಕಾರದ ನಿರಾಸಕ್ತಿಯೋ ಗೊತ್ತಿಲ್ಲ.

ಶಾಸ್ತ್ರೀಯ ಸ್ಥಾನಮಾನ ಬಂದ ಗೆಲುವಿನಲ್ಲಿ ಅಲ್ಲಲ್ಲಿ ವಿಚಾರ ಸಂಕಿರಣಗಳು, ಸಮಾವೇಶಗಳು ನಡೆದುದು ಬಿಟ್ಟರೆ ಗಂಭೀರವಾಗಿ ನಾವು ಕೆಲಸ ಮಾಡಿದಂತಿಲ್ಲ. 2011ರ ಸಾಲಿನ ಮೊದಲ ₹ 6 ಕೋಟಿ ಅನುದಾನವು ಖರ್ಚಾಗದೇ ಉಳಿದಿರುವುದಕ್ಕೆ ಸರ್ಕಾರ ವಿವರಣೆ ನೀಡಬೇಕಾಗಿದೆ.

ಶಾಸ್ತ್ರೀಯ ಕನ್ನಡದ ಕೇಂದ್ರವನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಬೇಕೆಂಬ ಕೂಗು ಎದ್ದಿದೆ. ಮೈಸೂರಿನಲ್ಲಿ ಎಲ್ಲಾ ಅನುಕೂಲಗಳಿದ್ದಾಗ್ಯೂ ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚು ಸೌಕರ್ಯಗಳಿರುವಾಗ ಸ್ಥಳಾಂತರ ಮಾಡಲು ಕೆಲವು ಸಕಾರಣಗಳನ್ನು ಪಟ್ಟಿಮಾಡಬಹುದು.

ವಿಮಾನದ ಸೌಕರ್ಯವಿರುವುದರಿಂದ ವಿದೇಶಿಯರಿಗೆ ಮತ್ತು ಸಂಶೋಧಕರಿಗೆ ಬರಲು ಅನುಕೂಲವಾಗುವ ಸಾಧ್ಯತೆ ಹಾಗೂ ವಿದೇಶಿಯರ ಜೊತೆಯಲ್ಲಿ ಸಂವಾದ, ಕಾರ್ಯಾಗಾರಗಳಂಥವು ಏರ್ಪಡಿಸಲು ನೆರವಾಗಲಿದೆ. ಕನ್ನಡಕ್ಕೆ ಸಂಬಂಧಿಸಿದ ಅನೇಕ ಸಂಶೋಧನೆ, ಯೋಜನೆಗಳನ್ನು ಕೈಗೊಳ್ಳಲು ಸಹಕಾರಿಯಾಗುವುದು.

ಕನ್ನಡದ ಬಗ್ಗೆ ಸಂಶೋಧನೆ ಕೈಗೊಳ್ಳುವ ಸಂಶೋಧಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾದ ಆಕರ ಗ್ರಂಥಾಲಯಗಳಿರುವುದು ಬೆಂಗಳೂರಿನಲ್ಲಿ. ಹಲವಾರು ಗ್ರಂಥಾಲಯಗಳು ಹಾಗೂ ಬಂದು ಹೋಗಲು ಎಲ್ಲ ಬಗೆಯ ಅನುಕೂಲ ಇದೆ. ಇವೆಲ್ಲವನ್ನೂ ಪರಿಗಣಿಸಿ ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು.
-ಡಾ. ಶಿವರಾಜ್ ಬ್ಯಾಡರಹಳ್ಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT