ADVERTISEMENT

ಪಾತಾಳವೇ ಗತಿ?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST

ನೀರಿನ ತೀವ್ರ ಸಂಕಷ್ಟಕ್ಕೆ ಪರಿಹಾರವಾಗಿ, ನೆಲದಡಿಯಲ್ಲಿ ಸ್ವಾಭಾವಿಕವಾಗಿ ಹರಿಯುವ ನೀರನ್ನೂ ಮೇಲೆತ್ತಿ ಬಳಸಲು ಸರ್ಕಾರ ವಿದೇಶಿ ಸಂಸ್ಥೆಯೊಂದರ ಸಹಯೋಗದಲ್ಲಿ ಪಾತಾಳಗಂಗೆ ಯೋಜನೆಗೆ ಮುಂದಾಗಿದೆ (ಪ್ರ.ವಾ., ಏ. 26). ಮುಂದಿನ ಪೀಳಿಗೆಗೆ ಪಾತಾಳವೇ ಗತಿ ಎಂಬುದನ್ನು ಇದು ಸೂಚಿಸುತ್ತಿರಬಹುದೇ?

‘ನಾವು ಬದುಕಿದ್ದರೆ ಸಾಕು. ಮುಂದಿನವರು ನೀರಿಲ್ಲದೆ ಸತ್ತರೆ ನಮಗೇನು? ಈ ಹೊತ್ತಿನ ಕಂತೆ ತೀರಿದರೆ ಸಾಕು’ ಎನ್ನುವಂತಿದೆ ಸರ್ಕಾರದ ಧೋರಣೆ. ಪ್ರತಿಯೊಂದು ವಿಷಯದ ಬಗೆಗೂ ಆಳುವ ಪ್ರಭುತ್ವಕ್ಕೆ ಒಂದು ಒಳ ನೋಟವಿರಬೇಕು. ಆದರೆ ಈ ಯೋಜನೆಯನ್ನು ನೋಡಿದರೆ ಸರ್ಕಾರಕ್ಕೆ ಒಳನೋಟವಿರಲಿ, ತನ್ನ ಹೊರ ಕಣ್ಣುಗಳನ್ನೂ ಅದು ಕಳೆದುಕೊಂಡಂತಿದೆ!

ನಾವು ಮಳೆಯ ನೀರನ್ನೆಲ್ಲಾ ಸಮುದ್ರಕ್ಕೆ ಹರಿಯಬಿಟ್ಟು, ಭೂಮಿ ಮೇಲಿನ ಸಿಹಿನೀರನ್ನೂ ಅಂದಾದುಂದಿ ಖಾಲಿ ಮಾಡಿ, ಅಂತರ್ಜಲವನ್ನೂ ಬಗೆದು ಮುಗಿಸಿಯಾಗಿದೆ. ತಿಜೋರಿಯಲ್ಲಿ ಕಾಪಿಟ್ಟಂತೆ ಜೋಪಾನ ಮಾಡಬೇಕಿದ್ದ, ನೆಲದಾಳದಲ್ಲಿ ಹರಿವ ಜೀವ ಜಲವನ್ನೂ ಈಗ ಬರಿದು ಮಾಡಲು ಹೊರಟಿರುವ ಸರ್ಕಾರದ ಕ್ರೌರ್ಯಕ್ಕೆ ಏನೆನ್ನಬೇಕು? ಭೂಮಿ ಒಂದು ದೇಹವೆಂದುಕೊಂಡರೆ, ಬಗೆಯ ಹೊರಟಿರುವ ಈ ಅಂತರಾಳದ ನೀರು ಹೃದಯವಿದ್ದಂತೆ.

ದಾಹವೆಂದು ಹೃದಯವನ್ನೇ ಕತ್ತರಿಸಿ ಮೊಗೆದು ಕುಡಿದರೆ ಭೂಮಿಯ ಪ್ರಾಣ ಉಳಿದೀತೆ? ನೆಲದಾಳದ ನೀರಿನಂಶ ಆರಿ ಕಾಲಕ್ರಮೇಣ ಮಣ್ಣೆಲ್ಲಾ ಶುಷ್ಕವಾಗಿ ಬರಡಾಗಿ ಹೋದರೆ, ಜೀವಸಂಕುಲ ಉಳಿದೀತೆ?

ಮಳೆ ನೀರಿನ ಸಂಗ್ರಹ ಮತ್ತು ಅದರ ವಿವೇಕಯುತ ಉಪಯೋಗ ಮಾತ್ರ ನಮ್ಮನ್ನು ಉಳಿಸಬಲ್ಲ ದಾರಿಗಳೆಂಬುದನ್ನು ಸರ್ಕಾರಗಳು ಈಗಲಾದರೂ ಅರಿತು ಆ ದಾರಿಯಲ್ಲಿ ಹೆಚ್ಚಿನ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಹೀಗಾಗಿ ವಿನಾಶಕಾರಿಯಾದ ಈ ಕುರುಡು ಯೋಜನೆಯನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
-ದೇವನೂರ ಮಹಾದೇವ, ಎಸ್.ಆರ್.ಹಿರೇಮಠ, ಕೆ.ಎಸ್.ಪುಟ್ಟಣ್ಣಯ್ಯ, ರಾಘವೇಂದ್ರ ಕುಷ್ಟಗಿ, ರೂಪ ಹಾಸನ, ನಂದಿನಿ ಜಯರಾಂ, ಸ್ವರ್ಣಾ ಭಟ್, ಶಾರದಾ ಗೋಪಾಲ್, ಕೆ.ಟಿ.ಗಂಗಾಧರ್, ಸಿ.ಯತಿರಾಜ್, ರವಿಕೃಷ್ಣಾರೆಡ್ಡಿ, ಚಾಮರಸಮಾಲಿ ಪಾಟೀಲ, ಬಡಗಲಪುರ ನಾಗೇಂದ್ರ, ಡಾ.ಕೆ.ವಿ.ವಾಸು, ನೂರ್ ಶ್ರೀಧರ್, ಪುರುಷೋತ್ತಮದಾಸ್,  ಚುಕ್ಕಿ ನಂಜುಂಡಸ್ವಾಮಿ, ದೊಡ್ಡೀಪಾಳ್ಯ ನರಸಿಂಹಮೂರ್ತಿ, ಗುರುಪ್ರಸಾದ್ ಕೆರಗೋಡು, ಪರಶುರಾಮೇಗೌಡ, ಮಲ್ಲಿಗೆ ಸಿರಿಮನೆ, ವಿ.ನಾಗರಾಜ್, ಅನಂತನಾಯಕ್, ಹುಲಿಕುಂಟೆ ಮೂರ್ತಿ, ಶೋಭಾ ಎಸ್, ರಾಮಾಂಜನಪ್ಪ ಆಲ್ದಳ್ಳಿ, ಚಂದ್ರಶೇಖರ್ ಮೇಟಿ, ಕೆ.ಎಲ್.ಅಶೋಕ್, ಮುತ್ತುರಾಜ್, ಕುಮಾರ್ ಸಮತಳ
ಜನಾಂದೋಲನಗಳ ಮಹಾಮೈತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.