ADVERTISEMENT

ಪಾಪು ಟೀಕೆ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST

ಕುವೆಂಪು, ಮೈಸೂರು ಪೇಟ, ಮೈಸೂರು ಅರಸರ ಆಳ್ವಿಕೆ ಬಗ್ಗೆ ಪಾಟೀಲ ಪುಟ್ಟಪ್ಪನವರು ಟೀಕೆ ಮಾಡಿರುವುದು ಸಮರ್ಥನೀಯವಲ್ಲ.

ಕುವೆಂಪು ಅವರು ಅಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದವರು. ಸಂಪೂರ್ಣ ಸಾಹಿತ್ಯ ರಚನೆಗೆ
ಅರ್ಪಿಸಿಕೊಂಡವರು. ಅವರು ಕರ್ನಾಟಕ ಸುತ್ತಿಕೊಂಡು ಇದ್ದಿದ್ದರೆ ಬಹುಶಃ ಅಷ್ಟು ಕೃತಿ ರಚನೆ ಆಗುತ್ತಿರಲಿಲ್ಲವೇನೋ?

ಆದರೆ ಅವರಿಗೆ ಕರ್ನಾಟಕದ ಇತಿಹಾಸದ ಅರಿವಿತ್ತು. ಕರ್ನಾಟಕ ಏಕೀಕರಣ ಚಳವಳಿಯ ಸಂದರ್ಭದಲ್ಲಿ ಅದಕ್ಕೆ ಹಳೇ ಮೈಸೂರು ಭಾಗದಲ್ಲಿ ವಿರೋಧವಿತ್ತು. ಅಖಂಡ ಕರ್ನಾಟಕ ಆಗಬೇಕು ಎಂದು ಈ ಭಾಗದ ಜನರಿಗೆ ಸ್ಫೂರ್ತಿ ತುಂಬಲು ಕರ್ನಾಟಕ ಇತಿಹಾಸ, ಸಂಸ್ಕೃತಿ, ಪರಂಪರೆಯ ಹಿನ್ನೆಲೆಯನ್ನು ಒಳಗೊಂಡ ‘ಜಯ ಭಾರತ ಜನನಿಯ ತನುಜಾತೆ...’ ಗೀತೆ ರಚಿಸಿದರು. ಈ ಮೂಲಕ ಅವರು ಹಾಗೂ ಕೆಂಗಲ್ ಹನುಮಂತಯ್ಯನವರು ಉತ್ತರ ಕರ್ನಾಟಕದವರ ಬೆಂಬಲಕ್ಕೆ ನಿಲ್ಲಲಿಲ್ಲವೇ?

ADVERTISEMENT

ಮೈಸೂರು ಅರಸರ ಆಳ್ವಿಕೆ ಒಪ್ಪುವುದಿಲ್ಲ ಎಂದಿರುವ ಪಾಪುಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಜಯಚಾಮರಾಜೇಂದ್ರ ಒಡೆಯರ್‌ ಅವರ ಜನಪರ ಆಳ್ವಿಕೆಯ ಇತಿಹಾಸದ ಅರಿವು ಇಲ್ಲ ಎನಿಸುತ್ತದೆ. ಜೊತೆಗೆ ಮೈಸೂರು ಪೇಟದ ಮಹತ್ವವೂ ಗೊತ್ತಿಲ್ಲ. ಅಂದು ಮೈಸೂರು ಸಂಸ್ಥಾನದಲ್ಲಿ ಕನ್ನಡಿಗರೇ ಇದ್ದರು. ಬೆಂಗಳೂರು ಆಡಳಿತ ಕೇಂದ್ರವಾಗಿತ್ತು. ಹಾಗಾಗಿ ಬೆಂಗಳೂರು, ರಾಜಧಾನಿಯ ಯೋಗ ಪಡೆಯಿತು.

ನಾಡಗೀತೆ ಬಗ್ಗೆ ಹೇಳುವುದಾದರೆ, ಏಕೀಕರಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹುಯಿಲಗೋಳ ನಾರಾಯಣರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ರಚಿಸಿದರು. ಕನ್ನಡ ನಾಡು ಉದಯವಾದ ನಂತರ ಅದಕ್ಕಿಂತ ಕುವೆಂಪು ಗೀತೆ ಸೂಕ್ತ ಅನ್ನಿಸಿ, ಅದನ್ನು ನಾಡಗೀತೆಯಾಗಿ ಪರಿಗಣಿಸಿದ್ದಾರೆ. ತಮ್ಮ ಗೀತೆಯನ್ನು ನಾಡಗೀತೆ ಮಾಡಿ ಎಂದು ಕುವೆಂಪು ಅಂಗಲಾಚಿರಲಿಲ್ಲ. ಈ ವಿರೋಧಗಳಿಗೆಲ್ಲಾ ರಾಜಕೀಯವೇ ಕಾರಣ.

ಪಾಪು ಕನ್ನಡದ ಕಟ್ಟಾಳು. ಬೆಳಗಾವಿ ಕರ್ನಾಟಕದ ಉಪ ರಾಜಧಾನಿ. ಕರ್ನಾಟಕದ ಅರ್ಧ ಆಡಳಿತ ಅಲ್ಲಿಂದಲೇ ನಡೆಯುವಂತೆ ಹೋರಾಡಲಿ. ಉತ್ತರ ಕರ್ನಾಟಕ ಭಾಗದ ಸಚಿವರು, ಶಾಸಕರು ಅಲ್ಲಿನ ಅಭಿವೃದ್ಧಿಗೆ ಶ್ರಮಿಸುವಂತೆ ಅವರಿಗೆ ಚಾಟಿ ಏಟು ನೀಡಲಿ.
–ಪ್ರೊ.ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.