ADVERTISEMENT

ಪೋಷಕರಿಗೆ ‘ಪ್ರಾಜೆಕ್ಟ್‌’ ಹೊರೆ

ಎಸ್.ತಾರಾನಾಥ್ ಭದ್ರಾವತಿ ಕುಣಿಗಲ್
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂ­ಕಿನ ಬಹುತೇಕ ಖಾಸಗಿ ಶಾಲೆಗಳಲ್ಲಿ   ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕ ‘ಪ್ರಾಜೆಕ್ಟ್‌’ ಹೆಸರಿನಲ್ಲಿ ಶಿಕ್ಷಕರು, ಪೋಷಕರಿಗೆ ಹೋಂ ವರ್ಕ್ ಕೊಡಲು ಶುರುಮಾಡಿದ್ದಾರೆ!

ಮೂರು–ನಾಲ್ಕನೇ ತರಗತಿಯ ಮಕ್ಕಳಿಗೆ ಹುಲಿ, ಮರ, ನವಿಲು ಮುಂತಾದವುಗಳನ್ನು ಬರೆದು­ಕೊಂಡು ಬನ್ನಿ ಎಂದೇನೋ ಶಿಕ್ಷಕರು ಹೇಳಿ­ಬಿಡು­ತ್ತಾರೆ. ಆದರೆ  ಆ ವಯಸ್ಸಿನ ಮಕ್ಕಳಿಗೆ ಹುಲಿ, ಸಿಂಹವನ್ನು ಬರೆಯುವ ಸಾಮರ್ಥ್ಯವಿದೆಯೇ ಎಂದು ಯೋಚಿಸುವುದಿಲ್ಲ. ಮಕ್ಕಳು ಮನೆಗೆ ಬಂದು ತನ್ನ ಅಪ್ಪ–ಅಮ್ಮನಿಗೆ ಚಿತ್ರ ಬರೆದು­ಕೊಡುವಂತೆ ದುಂಬಾಲು ಬೀಳು­ತ್ತಾರೆ. ಪಾಪ ಅಪ್ಪ-–ಅಮ್ಮ ಹೊರಗೆ ಹೋಗಿ ದುಡಿದು ಬಂದವರು ಏನು ಮಾಡಬೇಕು? ಸಂಜೆ ಅಡುಗೆ ಸಹ ಮಾಡಬೇಕಿರುತ್ತದೆ.

ಆದರೆ ಮಕ್ಕಳು ಶಿಕ್ಷಕರ ಮಾತನ್ನು ಮೀರು­ವು­ದುಂಟೆ? ಹಾಗಾಗಿ ಅವರು ಪೋಷಕ­ರನ್ನು  ಪೀಡಿಸಲು ಆರಂಭಿಸುತ್ತಾರೆ. ಆಗ ಪೋಷಕರು ಅಕ್ಕ-ಪಕ್ಕ, ಪಕ್ಕದ ಬೀದಿಯಲ್ಲಿ ಯಾರಾದರೂ ಚಿತ್ರ ಬರೆಯುವಂತಹವರನ್ನು ಹುಡುಕಿ ಸ್ವಲ್ಪ ಹಣ ಕೊಟ್ಟು ಮಕ್ಕಳ ಒತ್ತಾಯಕ್ಕೆ ಚಿತ್ರ ಬರೆಸಿಕೊಂಡು ಬರುತ್ತಾರೆ.

ಇದಲ್ಲದೆ ಶಿಕ್ಷಕರು ಇಂಥದ್ದೇ ಬಣ್ಣದ ಪೆನ್ನಿನಲ್ಲಿ ಬರೆದುಕೊಂಡು ಬನ್ನಿ ಎಂದು ಅಪ್ಪಣೆ ಮಾಡಿರುತ್ತಾರೆ. ಮಕ್ಕಳೂ ಅದನ್ನೇ ಹಿಡಿದು ಹಟ ಮಾಡುತ್ತಾರೆ. ಅವರು ಕೊಡುವ ಎಷ್ಟೋ ಪ್ರಾಜೆಕ್ಟ್‌ ಮಾಡಬೇಕೆಂದರೆ ಮನೆಯಲ್ಲಿ ಕಂಪ್ಯೂಟರ್ ಇರಬೇಕು. ಎಲ್ಲರಿಗೂ ಆ ಸಾಮರ್ಥ್ಯ ಇರುವುದಿಲ್ಲ. ಅಥವಾ  ಬ್ರೌಸಿಂಗ್ ಸೆಂಟರ್‌ನವರಿಗೆ  ಪ್ರತಿದಿನ ₨ 20–30 ತೆರಬೇಕು, ಅಲ್ಲಿಂದ ಚಿತ್ರಗಳನ್ನು ತರಬೇಕು. ವಿದ್ಯಾರ್ಥಿಗಳು  ಶಾಲೆಯಲ್ಲಿ ಕೊಡುವ ಇತರ ಮನೆಗೆಲಸದ ಜತೆ ಪ್ರತಿದಿನವೂ ಪ್ರಾಜೆಕ್ಟ್‌ಗಳನ್ನೇ ಮಾಡುತ್ತಾ ಕುಳಿತರೆ ಉಳಿದ ವಿಷಯಗಳನ್ನು ಓದುವುದು ಯಾವಾಗ? ಪ್ರಾಜೆಕ್ಟ್ ಕೊಡಲಿ ಆದರೆ ಮಕ್ಕಳ ಸಾಮರ್ಥ್ಯಕ್ಕೆ ಆಗುವಷ್ಟು ಕೊಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.