ADVERTISEMENT

ಪೋಷಕರ ಭ್ರಮೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
‘ದುಬಾರಿ ವಿದ್ಯೆ ಭ್ರಮನಿರಸನಕ್ಕೆ ದಾರಿ?’ ಎಂಬ ಶೀರ್ಷಿಕೆಯಡಿ ಎಚ್.ಕೆ. ಶರತ್‌ರವರ ಲೇಖನವನ್ನು (ಪ್ರ.ವಾ., ಸಂಗತ, ಮೇ 18) ಓದಿ ನನ್ನ ಅನುಭವವೊಂದನ್ನು ಓದುಗರ ಜೊತೆ ಹಂಚಿಕೊಳ್ಳಬೇಕು ಎನಿಸಿತು.
 
ಕೆಲವು ವರ್ಷಗಳ ಹಿಂದೆ ನನ್ನ ತಂಗಿಯ ಮಗಳೊಬ್ಬಳು ಎಸ್.ಎಸ್.ಎಲ್.ಸಿ.ಯಲ್ಲಿ ಶೇ 97 ಅಂಕ ಪಡೆದು ಪಿ.ಯು.ಸಿ. ಓದಲು  ದಕ್ಷಿಣ ಕನ್ನಡದ ಪ್ರತಿಷ್ಠಿತ ಖಾಸಗಿ ಕಾಲೇಜೊಂದಕ್ಕೆ ಸೇರಿಕೊಂಡಳು. ಅಲ್ಲಿ ಪ್ರಥಮ ಪಿ.ಯು.ಸಿ.ಯಲ್ಲಿ ಅವಳ ಶೇಕಡಾವಾರು ಅಂಕ ಎಂಬತ್ತಕ್ಕೆ ಇಳಿಯಿತು. ಅವಳು ತನಗೆ ಅಲ್ಲಿ ಓದು ಮುಂದುವರಿಸಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದಳು.
 
ಆ ಕಾಲೇಜಿನವರು ಟಿ.ಸಿ. ಕೊಡಲು ಒಪ್ಪದಿದ್ದಾಗ ಉಪನ್ಯಾಸಕರಾಗಿದ್ದ ಅವಳ ತಂದೆ ಯಾರ್‍ಯಾರನ್ನೋ ಹಿಡಿದು ಪ್ರಭಾವ ಬಳಸಿ ಅವಳನ್ನು ಅವರ ಮನೆಯ ಹತ್ತಿರದ ಸರ್ಕಾರಿ ಕಾಲೇಜೊಂದಕ್ಕೆ ದ್ವಿತೀಯ ಪಿ.ಯು.ಸಿ.ಗೆ ಸೇರಿಸಿದರು.
 
ಅಲ್ಲಿ ಅವಳು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ 95 ರಷ್ಟು ಅಂಕ ಪಡೆದು ಸಿ.ಇ.ಟಿ. ಯಲ್ಲಿಯೂ ಉತ್ತಮ ರ್‍ಯಾಂಕ್ ಗಳಿಸಿ, ಮುಂದೆ ಅತ್ಯುನ್ನತ ಶ್ರೇಣಿಯಲ್ಲಿ ಬಿ.ಇ. ಹಾಗೂ ಎಂ.ಟೆಕ್. ಮುಗಿಸಿ ಈಗ ಬೆಂಗಳೂರಿನಲ್ಲಿ ಒಳ್ಳೆಯ ಸಂಬಳ ತರುವ ಉದ್ಯೋಗದಲ್ಲಿದ್ದಾಳೆ.
 
ಓದುವ ಮಕ್ಕಳು ಯಾವ ಶಾಲೆಯಲ್ಲಾದರೂ ಓದುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ಹಣ ಮಾಡುವ ಒಂದು ದಂಧೆಯನ್ನಾಗಿಸಿಕೊಂಡಿರುವ ಕೆಲವು ವ್ಯಕ್ತಿಗಳು ಅಬ್ಬರದ ಪ್ರಚಾರದಿಂದ ಮಕ್ಕಳ ಪೋಷಕರನ್ನು ಆಕರ್ಷಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ.
 
ತಮ್ಮ ಮಕ್ಕಳನ್ನು ಅಂಥ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸಿದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆಯೆನ್ನುವುದು ಪೋಷಕರ ಭ್ರಮೆ ಅಷ್ಟೇ!
ಸುರೇಶ್ ನಾಯಕ್, ಚಾವಲ್ಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.