ADVERTISEMENT

ಬೇಜವಾಬ್ದಾರಿ

ಡಾ.ಸಿಬಂತಿ ಪದ್ಮನಾಭ ಕೆ.ವಿ.
Published 9 ಅಕ್ಟೋಬರ್ 2015, 19:30 IST
Last Updated 9 ಅಕ್ಟೋಬರ್ 2015, 19:30 IST

ಕೆಎಸ್‌ಆರ್‌ಟಿಸಿ ಬಸ್ಸನ್ನು ನಂಬಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಕಥೆಯಿದು. ಈ ತಿಂಗಳ 8ರಂದು  ಮಂಗಳೂರಿನಿಂದ ತುಮಕೂರಿಗೆ ಪ್ರಯಾಣಿಸಲು ನಾನು ಹಾಗೂ ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ಸೀಟು ಕಾದಿರಿಸಿದ್ದೆವು (ಪಿಎನ್‌ಆರ್ ಸಂಖ್ಯೆ: ಜೆ53208340). ರಾತ್ರಿ 8ಕ್ಕೆ ಮಂಗಳೂರಿನಿಂದ ಹೊರಡಬೇಕಿದ್ದ ಬಸ್ಸು ಎಂಟೂವರೆ ಆದರೂ ಬಸ್‌ ಸ್ಟ್ಯಾಂಡಿಗೆ ಬಂದಿರಲಿಲ್ಲ. ಕೊನೆಗೆ ಕೆಎ-13-ಎಫ್-2176 ಬಸ್ ಹತ್ತುವಂತೆ ನಮಗೆ ಸೂಚಿಸಲಾಯಿತು.

ಟಿಕೆಟ್ ಪರಿಶೀಲಿಸಿದ ಕಂಡಕ್ಟರ್, “ಈ ಬಸ್ ನೇರವಾಗಿ ಬೆಂಗಳೂರಿಗೆ ಹೋಗುತ್ತೆ. ನೀವು ಹಾಸನದಲ್ಲಿ ಇಳಿದುಕೊಂಡು ಧರ್ಮಸ್ಥಳದಿಂದ ಬರುವ ಪಾವಗಡ ಬಸ್‌ನಲ್ಲಿ ಹೋಗಬೇಕಾಗುತ್ತೆ. ತುಮಕೂರಿಗೆ ಹೋಗಬೇಕಿದ್ದ ಬಸ್ ಇವತ್ತು ರದ್ದಾಗಿರೋದರಿಂದ ಈ ವ್ಯವಸ್ಥೆ ಮಾಡಿದ್ದಾರೆ” ಎಂದು ವಿವರಿಸಿದರು. ಮತ್ತೆ ಬಸ್ ಇಳಿದು ವಿಚಾರಣಾ ವಿಭಾಗಕ್ಕೆ ಹೋಗಿ ಈ ಬದಲಿ ವ್ಯವಸ್ಥೆಯನ್ನು ಖಚಿತಪಡಿಸಿಕೊಂಡೆವು. ರಜಾ ದಿನ ಅಲ್ಲವಾಗಿರುವುದರಿಂದ ಹಾಸನದಿಂದಲೂ ಸೀಟ್ ಸಿಗುವುದಕ್ಕೆ ತೊಂದರೆಯಾಗದು ಎಂದು ಅವರು ಭರವಸೆಯನ್ನೂ ನೀಡಿದರು.

ಆದರೆ ನಂತರ ನಡೆದದ್ದೇ ಬೇರೆ. ನಾವು ಹಾಸನ ತಲುಪಿದಾಗ ಧರ್ಮಸ್ಥಳ-ಪಾವಗಡ ಬಸ್ ಅದಾಗಲೇ ಬಸ್‌ ಸ್ಟ್ಯಾಂಡಿಗೆ ಬಂದು ಹೊರಟುಹೋಗಿತ್ತು. ‘ಬಸ್ ಆಗ್ಲೇ ಹೊರಟೋಗಿದೆ, ಸಾರ್’ ಎಂದು ಕಂಡಕ್ಟರ್ ಕೈಚೆಲ್ಲಿದರೆ, ಟಿ.ಸಿ. ಈ ವ್ಯವಸ್ಥೆ ಬಗ್ಗೆ ತಮಗೇನೂ ಮಾಹಿತಿ ಇಲ್ಲವೆಂದು ಗೊಣಗಾಡಿದರು. ಆಗಿನ್ನೂ ರಾತ್ರಿ ಒಂದು ಗಂಟೆ. ರಾತ್ರಿ ತುಮಕೂರು ಕಡೆಗೆ ಇದ್ದುದೇ ಅದೊಂದು ಬಸ್ಸು. ಇನ್ನು ಬೇರೆ ಬಸ್ ಸಿಗಬೇಕಾದರೆ ಬೆಳಗಿನತನಕ ಕಾಯಬೇಕು. ಜತೆಗೆ ಮಹಿಳಾ ಸಹೋದ್ಯೋಗಿ ಬೇರೆ ಇದ್ದಾರೆ.  ಕಂಡಕ್ಟರ್ ಜತೆಗೋ ಟಿ.ಸಿ. ಜತೆಗೋ ಆ ನಡುರಾತ್ರಿಯಲ್ಲಿ ಜಗಳವಾಡುವುದು ಪರಿಹಾರದ ಮಾರ್ಗ ಆಗಿರಲಿಲ್ಲ.

ಕೊನೆಗೆ ಅದೇ ಬಸ್‌ನಲ್ಲಿ ಹೆಚ್ಚುವರಿ ಟಿಕೆಟ್ ಪಡೆದುಕೊಂಡು ಬೆಂಗಳೂರಿಗೆ ಹೋಗಿ, ಅಲ್ಲಿಂದ ಮತ್ತೊಂದು ಬಸ್ ಹಿಡಿದು ತುಮಕೂರು ಸೇರಿದ್ದಾಯಿತು. ಒಂದು ಫೋನ್ ಕಾಲ್ ಮೂಲಕ ಮಾಡಬಹುದಾಗಿದ್ದ ವ್ಯವಸ್ಥೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಕೆಎಸ್‌ಆರ್‌ಟಿಸಿಯಿಂದಾಗಿ ನಾವು ಏನಿಲ್ಲವೆಂದರೂ ನೂರೈವತ್ತು ಕಿ.ಮೀ. ಹೆಚ್ಚುವರಿ ಪ್ರಯಾಣ ಮಾಡಿ, ಅನಗತ್ಯ ಹಣ ವ್ಯಯಿಸುವಂತಾಯಿತು. ಅನಗತ್ಯ ಪ್ರಯಾಣ, ವೆಚ್ಚದ ವಿಷಯ ಹಾಗಿರಲಿ, ತನ್ನ ಗ್ರಾಹಕರ ವಿಷಯದಲ್ಲಿ ಕೆಎಸ್‌ಆರ್‌ಟಿಸಿ ಇಷ್ಟೊಂದು ಬೇಜವಾಬ್ದಾರಿತನ ತೋರಿದರೆ ಹೇಗೆ? ಮಹಿಳಾ ಪ್ರಯಾಣಿಕರೇನಾದರೂ ಒಬ್ಬೊಬ್ಬರೇ ಪ್ರಯಾಣಿಸುವಾಗ ಇಂತಹ ಪರಿಸ್ಥಿತಿ ತಂದಿಟ್ಟರೆ ಏನು ಗತಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.