ADVERTISEMENT

ಲಿಂಗಾಯತ ಧರ್ಮ: ‘ಅರಿವಿನ’ ಹನಿಯಾಗಲಿ...

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST
ಲಿಂಗಾಯತ ಧರ್ಮ: ‘ಅರಿವಿನ’ ಹನಿಯಾಗಲಿ...
ಲಿಂಗಾಯತ ಧರ್ಮ: ‘ಅರಿವಿನ’ ಹನಿಯಾಗಲಿ...   

ಜಗತ್ತಿನ ಶ್ರೇಷ್ಠ ಸಮತಾವಾದಿ, ಸಮಾಜವಾದದ ಹರಿಕಾರ, ಕ್ರಾಂತಿಪುರುಷ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಇಂದು ಜಾತಿ ಕರ್ಮಠರು, ರಾಜಕಾರಣಿಗಳು ಮತ್ತು ಮಠಾಧೀಶರ ಕೈಯಲ್ಲಿ ಸಿಕ್ಕು ನಲುಗಿದೆ.

ಯಾವ ವೈದಿಕ, ಪುರೋಹಿತಶಾಹಿ ಮೌಲ್ಯಗಳ ವಿರುದ್ಧ ಬಸವಣ್ಣ ಚಳವಳಿಯನ್ನು ಮಾಡಿದನೋ, ಅವರನ್ನೇ ನಾವಿಂದು ‘ಬುದ್ಧಿ’, ‘ಪರಮಪೂಜ್ಯರು’, ‘ದೇವರು’ ಎಂದೆಲ್ಲ ಸಂಬೋಧಿಸಿ ಮತ್ತೆ ಶ್ರೇಣೀಕೃತ ವ್ಯವಸ್ಥೆಗೆ ಹಾದಿ ಮಾಡಿ ಕೊಡುತ್ತಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಲಿಂಗಾಯತ ಚಳವಳಿಯಿಂದ ದೂರವಿದ್ದ ಮಠಾಧಿಪತಿಗಳು ಇಂದು ಒಮ್ಮೆಲೇ ಎರಡು ಗುಂಪಿನಲ್ಲಿ ಗುರು– ವಿರಕ್ತ, ವೀರಶೈವ– ಲಿಂಗಾಯತ ವಾದವನ್ನು ಹುಟ್ಟುಹಾಕಿ ಬೀದಿ ರಂಪ ಮಾಡುತ್ತಿರುವುದು ಶೋಚನೀಯವಾಗಿದೆ.

ಆಗಸ್ಟ್ 10ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭವು ಮಠಾಧೀಶರಿಗೇ ಮೀಸಲಾಗಿತ್ತು. ವೇದಿಕೆ ಇಡೀ ಕೇಸರೀಕರಣಗೊಂಡಿತ್ತು. ಎಸ್‌.ಎಂ. ಜಾಮದಾರ ಅವರು ಸುದೀರ್ಘವಾಗಿ ಮಾತನಾಡಿದ ಬಳಿಕ ಉಳಿದವರು ಹೋರಾಟದ ರೂಪುರೇಷೆ ಬಗ್ಗೆ ಮಾತನಾಡುವುದನ್ನು ಬಿಟ್ಟು, ಪಂಚಪೀಠದವರನ್ನು ಗುರಿಯಾಗಿಸಿಕೊಂಡು  ಮಾತನಾಡಿದರು. ಸಮಾಲೋಚನೆ ಸಭೆ ಹೋಗಿ ಅದು ಶ್ರಾವಣ ಮಾಸದ ಪ್ರವಚನವಾಗಿತ್ತು.

ADVERTISEMENT

ಕಾವಿಧಾರಿಗಳಿಂದ ಈ ದೇಶದಲ್ಲಿ ಎಂದಿಗೂ ಪರಿವರ್ತನೆಯಾಗಿಲ್ಲ. ಮೇಲಾಗಿ ಲಿಂಗಾಯತ ಧರ್ಮದಲ್ಲಿ ಮಠಗಳ ಸಂಸ್ಕೃತಿ ಬಂದಿದ್ದೇ 17-18ನೇ ಶತಮಾನದಲ್ಲಿ. ಒಬ್ಬ ವ್ಯಕ್ತಿಗೆ, ಸಂಸ್ಥೆಗೆ ಜೋತು ಬೀಳುವುದರಿಂದ ಸಾಂಘಿಕ ಹೋರಾಟ ಸೀಮಿತಗೊಳ್ಳುತ್ತದೆ. ಲಿಂಗಾಯತ ಧರ್ಮದ ಬೇಡಿಕೆಯು ಬಡವರ, ಅಸ್ಪೃಶ್ಯರ, ದಲಿತರ, ಶೋಷಿತರ, ಕಾರ್ಮಿಕರ, ದಮನಿತರ, ಮಹಿಳೆಯರ ಚಳವಳಿಯಾಗಲಿ. ಜನಾಂದೋಲನವು ಅರಿವು, ತತ್ವನಿಷ್ಠೆ‌ಯ ಮೇಲೆ ರೂಪುಗೊಳ್ಳಲಿ. ರಾಜಕೀಯ ಸಮಾವೇಶದಂತೆ ಜನರನ್ನು ಕೂಡಿಸಿ ಯಾವುದನ್ನೂ ಪಡೆಯದೆ ನಿರಾಶರಾಗುವುದು ಬೇಡ. ಲಿಂಗಾಯತ ಚಳವಳಿ ಅರಿವಿನ ಹನಿ ನೀರಾವರಿಯಾಗಬೇಕೇ ಹೊರತು ಶಕ್ತಿ ಪ್ರದರ್ಶನದ ಸುನಾಮಿಯಲ್ಲ.

–ಡಾ.ಶಶಿಕಾಂತ ಪಟ್ಟಣ, ಪುಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.