ADVERTISEMENT

ವಜಾ ಸರಿಯೇ?

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 19:30 IST
Last Updated 11 ಸೆಪ್ಟೆಂಬರ್ 2017, 19:30 IST

1985ರ ವರೆಗೂ ಪ.ಜಾ./ಪ.ಪಂಗಡದ ಅಭ್ಯರ್ಥಿಗಳು ಟಿ.ಸಿ.ಎಚ್. ತರಬೇತಿ ಹೊಂದದಿದ್ದರೂ ಸಹ ಶಿಕ್ಷಕರ ಹುದ್ದೆಗೆ ಸೇರಲು ನಿಯಮವಿತ್ತು. ದ್ವಿತೀಯ ದರ್ಜೆ ಸಹಾಯಕರ ವೇತನ ಮತ್ತು ವೇತನ ಶ್ರೇಣಿಯಲ್ಲಿ ನೇಮಕ ಮಾಡಲಾಗಿದೆ. ತರಬೇತಿ ಹೊಂದಿದವರ ವೇತನವಾಗಲೀ, ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದುವ ಅವಕಾಶವಾಗಲೀ ಈ ನಿಯಮದ ಅನ್ವಯ ನೇಮಕವಾದವರಿಗೆ ಇರುವುದಿಲ್ಲ.

ಆದರೆ ಈಗ ಎನ್.ಸಿ.ಟಿ.ಇ. ನಿಯಮಾನುಸಾರ ಆರ್.ಟಿ.ಸಿ. ಕಾಯ್ದೆ ಸೆಕ್ಷನ್ 23 (2) ರಂತೆ ವೃತ್ತಿ ಸಂಬಂಧಿತ ವಿದ್ಯಾರ್ಹತೆಯನ್ನು ಹೊಂದದೇ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅಗತ್ಯ ವಿದ್ಯಾರ್ಹತೆಗಳನ್ನು ಹೊಂದಲು ಎನ್.ಐ.ಒ.ಎಸ್. ವತಿಯಿಂದ ನಡೆಸಲಿರುವ ಡಿ.ಇಐ.ಇಡಿ. ಕೋರ್ಸ್ ಪೂರ್ಣಗೊಳಿಸಬೇಕಿದೆ. ಅಲ್ಲದೆ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ 50 ಅಂಕಗಳನ್ನು ಕಡ್ಡಾಯವಾಗಿ ಪಡೆಯುವಂತೆ ತಿಳಿಸಲಾಗಿದೆ. ಈ ವೃತ್ತಿ ತರಬೇತಿ ಹಾಗೂ ಪಿ.ಯು.ಸಿ.ಯನ್ನು ಏಕ ಕಾಲದಲ್ಲಿ ದಿನಾಂಕ: 31–03–2019ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕೆಂದೂ, ಇದು ಕೊನೆಯ ಅವಕಾಶವೆಂದು ತಿಳಿಸಿ, ವೃತ್ತಿ ತರಬೇತಿ ಪಡೆಯದವರನ್ನು ವಜಾಗೊಳಿಸಲಾಗುವುದೆಂದು ತಿಳಿಸಲಾಗಿದೆ. ಇದು ಯಾವ ನ್ಯಾಯ? ಸೇವೆಗೆ ಸೇರಿದ ಸಂದರ್ಭದಲ್ಲಿ ವೃತ್ತಿ ತರಬೇತಿ ಕಡ್ಡಾಯವೆಂದು ಯಾವ ಷರತ್ತನ್ನು ಸಹ ವಿಧಿಸಿರಲಿಲ್ಲ. ನಮ್ಮ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಟಿ.ಸಿ.ಹೆಚ್. ತರಬೇತಿ ಹೊಂದದ ಶಿಕ್ಷಕರು ಸುಮಾರು 759 ಮಂದಿ ಇದ್ದು, ಎಲ್ಲರೂ ಪ.ಜಾ./ಪ. ಪಂಗಡಗಳಿಗೆ ಸೇರಿದವರಾಗಿರುತ್ತಾರೆ. ಎಲ್ಲರೂ ನಿವೃತ್ತಿಯ ಅಂಚಿನಲ್ಲಿದ್ದು 2022ರ ವೇಳೆಗೆ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ.

ಆದ್ದರಿಂದ ಇನ್ನು ಮುಂದೆ ಶಿಕ್ಷಕ ವೃತ್ತಿಗೆ ಸೇರುವವರಿಗೆ ಮೇಲ್ಕಂಡ ನಿಯಮ ಅಥವಾ ವಿದ್ಯಾರ್ಹತೆಯನ್ನು ನಿಗದಿಪಡಿಸಲಿ. ಈಗಾಗಲೇ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವಿನಾಯಿತಿ ನೀಡಲಿ. ಇಲ್ಲದಿದ್ದಲ್ಲಿ ಸಮಾನಾಂತರ ಹುದ್ದೆಯಾದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಾಗಲೀ ಪರಿವರ್ತಿಸಲಿ. ಈ ಸಂಬಂಧ ಶಿಕ್ಷಣ ಇಲಾಖೆಯ ಸಚಿವರು, ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಸಂಘಟನೆಗಳ ಪದಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ.
–ಎಚ್.ಕೆ. ಆನಂದ ಕುಮಾರ್, ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.