ADVERTISEMENT

ವಯೋವೃದ್ಧರ ಪಾಲನೆ ಮಕ್ಕಳ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST

ಮುಪ್ಪಿನ ಸಮಯದಲ್ಲಿ ತಂದೆ,- ತಾಯಿ ಬಯಸುವುದೇ ಮಕ್ಕಳ ಪ್ರೀತಿ. ಹೆತ್ತ ಮಕ್ಕಳಿಂದಲೇ ಆ ಪ್ರೀತಿ ಸಿಗದಿದ್ದರೆ, ಅವರು ಖಿನ್ನತೆಗೆ ಜಾರುತ್ತಾರೆ, ಮಾನಸಿಕವಾಗಿ ದುರ್ಬಲ­ರಾಗುತ್ತಾರೆ.  ಒಂದು ಕಾಲದವರೆಗೆ ಸ್ವಾವ­ಲಂಬಿಯಾಗಿದ್ದವರು ಮುಪ್ಪಿನ ಸಮಯ­ದಲ್ಲಿ ಮಕ್ಕಳ ಮೇಲೆ ಪರಾವಲಂಬಿಯಾಗಬೇ­ಕಾ­ಗುತ್ತದೆ.

ಮಕ್ಕಳು ನೀಡುವ ಹಣಕಾಸಿನ ನೆರವಿ­ಗಿಂತಲೂ ಈ ಮುದಿ ಜೀವಿಗಳು ಹೆಚ್ಚಾಗಿ ಬಯಸುವುದು ಮಕ್ಕಳ ಪ್ರೀತಿಯನ್ನೇ. ಆದರೆ ಆ ಪ್ರೀತಿಯೂ ಸಿಗದೆ, ಆರ್ಥಿಕ ನೆರವು, ಆಶ್ರಯ, ಆರೈಕೆಯೂ ದೊರೆಯದಿದ್ದರೆ, ಅವರು ವೃದ್ಧಾ­ಶ್ರಮ­-­ಗಳತ್ತ ಮುಖ ಮಾಡಬೇಕಾಗುತ್ತದೆ ಅಥವಾ ಕಾನೂನಿನ ಮೊರೆ ಹೋಗಬೇಕಾ ಗುತ್ತದೆ.

ಹಾವೇರಿ ಜಿಲ್ಲೆಯಲ್ಲಿನ ವೃದ್ಧರೊಬ್ಬರ (ಪ್ರ.ವಾ., ಫೆ. 2೭) ಪತ್ನಿ ನಿಧನರಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೂ ಮಕ್ಕಳ ಪ್ರೀತಿ, ಆರೈಕೆಯಿಂದ ಪರಿತ್ಯಕ್ತರಾಗಿ ದೈನಂದಿನ ಖರ್ಚು ವೆಚ್ಚಗಳಿಗೆ ವೃದ್ಧರು ಪಡುತ್ತಿದ್ದ ಬವಣೆ ಹೇಳತೀರ­ದಾಗಿತ್ತು. ಆ ವೃದ್ಧರ ಸಂಕಷ್ಟವನ್ನು ಕಂಡ ವಕೀಲರೊಬ್ಬರು ನೀಡಿದ ದೂರನ್ನು ಸ್ವೀಕ­ರಿಸಿ ವೃದ್ಧರ ನೆರವಿಗೆ ಧಾವಿಸಿ ಬಂದು ಅವರ ಮನೆ­ಯಲ್ಲಿಯೇ ವಿಚಾರಣೆ ನಡೆಸಿ ಮಕ್ಕಳಿಂದ ವೃದ್ಧರಿಗೆ ಮಾಸಾಶನ ದೊರಕುವಂತೆ ಮಾಡಿದ ಉಪ ವಿಭಾಗಾಧಿಕಾರಿ ಹಾಗೂ ಆ ವಕೀಲರು ನಿಜಕ್ಕೂ   ಅಭಿನಂದನಾರ್ಹರು.

ಈ ಘಟನೆ, ವೃದ್ಧ ತಂದೆ,- ತಾಯಿಯನ್ನು ನಿರ್ಲಕ್ಷಿಸಿರುವ ಮಕ್ಕಳಿ­­ಗೊಂದು ಎಚ್ಚರಿಕೆಯ ಗಂಟೆ. ಪ್ರೀತಿ­ಯಿಂದ ಪಡೆಯ  ಲಾಗದಿದ್ದನ್ನು  ಕಾನೂನಿನ ಮೂಲಕ­ವಾಗಿ ಯಾದರೂ ಪಡೆದುಕೊಳ್ಳಲು ‘೨೦೦೭ರ ಪೋಷಕರ ಮತ್ತು ಹಿರಿಯ ನಾಗರಿ­ಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’  ಜಾರಿಗೆ ಬಂದಿರುವುದು ಸ್ವಾಗತಾರ್ಹ. ಇದು ಮಕ್ಕ­ಳಿಂದ ತಿರಸ್ಕೃತರಾದ ವಯೋವೃದ್ಧರ ಪಾಲಿಗೊಂದು ಆಶಾಕಿರಣ ಹಾಗೂ ವರದಾನ.
–ಎಲ್.ಚಿನ್ನಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.