ADVERTISEMENT

ವಾಟರ್‌ ಟ್ಯಾಂಕ್‌ ನಿರ್ಮಾಣ ಮಾಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಬಿಬಿಎಂಪಿ ಲಗ್ಗೆರೆ ವಲಯದ ಸರ್ವೆ ನಂ. 137ರಲ್ಲಿ ಸರ್ಕಾರಿ ವಾಟರ್‌ ಟ್ಯಾಂಕ್‌ ನಿರ್ಮಾಣ ಮಾಡಲು 1 ಎಕರೆ 21 ಗುಂಟೆ ಸರ್ಕಾರಿ ಜಮೀನು ಮೀಸಲು ಇಟ್ಟಿದ್ದು, ಹಿಂದಿನ ಪೀಣ್ಯ ಪಂಚಾಯಿತಿಯವರು ಈ ಜಮೀನಿನಲ್ಲಿ ವಾಟರ್‌ ಟ್ಯಾಂಕ್‌ ನಿರ್ಮಾಣ ಮಾಡುವ ಸಲುವಾಗಿ ನಾಲ್ಕು ಆಧಾರ ಸ್ತಂಭಗಳ ಕಾಮಗಾರಿಯನ್ನು ಮಾತ್ರ ಮಾಡಿದ್ದಾರೆ.

ಆನಂತರ ಆರ್ಥಿಕ ಸಂಪನ್ಮೂಲ ಸಂಗ್ರಹದ ಕೊರತೆಯಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆಮೇಲೆ ಲಗ್ಗೆರೆಯು ದಾಸರಹಳ್ಳಿ ನಗರಸಭೆಯ ವ್ಯಾಪ್ತಿಗೆ ಸೇರಿಕೊಂಡಿದ್ದು, ಆಗ ದಾಸರಹಳ್ಳಿ ನಗರಸಭೆಯವರಿಗೆ ಲಗ್ಗೆರೆ ಸೇರಿದಂತೆ ಹೊಸ ಬಡಾವಣೆಗಳಲ್ಲಿ ನಿವೇಶನದಾರರು ಭೂ–ಅಭಿವೃದ್ಧಿ ಶುಲ್ಕ ಮತ್ತು ಆಸ್ತಿ ತೆರಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾವತಿಸುತ್ತಾ ಬಂದಿದ್ದಾರೆ. ಆದರೂ ದಾಸರಹಳ್ಳಿ ನಗರಸಭೆಯವರು ಸ್ಥಗಿತಗೊಂಡಿರುವ ವಾಟರ್‌ ಟ್ಯಾಂಕ್‌ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿಲ್ಲ.

ಪ್ರಸ್ತುತ ಲಗ್ಗೆರೆಯು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 69ರಲ್ಲಿ ಇದ್ದು, ಇತ್ತೀಚಿಗೆ ಕೆಲವರು ಈ ಸರ್ಕಾರಿ ವಾಟರ್‌ ಟ್ಯಾಂಕ್‌ನ ಜಾಗವನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ಆಧಾರಸ್ತಂಭಗಳ ಜಾಗ ಮಾತ್ರ ಉಳಿದುಕೊಂಡಿದೆ. ಈಗಲಾದರೂ ಬಿಬಿಎಂಪಿ ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿಯ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಲಗ್ಗೆರೆಯಲ್ಲಿ ಸ್ಥಗಿತಗೊಂಡಿರುವ ವಾಟರ್‌ ಟ್ಯಾಂಕ್‌ನ ಕಾಮಗಾರಿಯನ್ನು ಪೂರ್ಣಗೊಳಿಸಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುತ್ತಾರೆಂದು ಆಶಿಸೋಣವೇ?
–ಜಿ. ಸಿದ್ದಗಂಗಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.