ADVERTISEMENT

ವೈವಿಧ್ಯಮಯ ಸಂಸ್ಕೃತಿ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 20:26 IST
Last Updated 10 ಮಾರ್ಚ್ 2017, 20:26 IST

ಸುಹಾನಾ ಎಂಬ ಹೆಣ್ಣು ಮಗಳು ಭಕ್ತಿ ಗೀತೆಯನ್ನು ಹಾಡಿರುವುದಕ್ಕೆ  ಜಾಲತಾಣಗಳಲ್ಲಿ ‘ಮಂಗಳೂರಿನ ಮುಸ್ಲಿಂ’ ಎಂಬ ಹೆಸರಿನಲ್ಲಿ ಟೀಕಿಸಿರುವುದನ್ನು  ಓದಿ (ಪ್ರ.ವಾ., ಮಾರ್ಚ್‌ 9) ಆಶ್ಚರ್ಯವಾಯಿತು. ಇದನ್ನು ಓದುತ್ತಿದ್ದಂತೆ ನನಗೆ ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನೌಷಾದ್‌ ಅವರ ಮಾತುಗಳು ನೆನಪಾದವು. ‘ಬೇಜು ಬಾವ್ರ’ ಎಂಬ ಚಲನಚಿತ್ರದ ಹಾಡು ‘ಮನ್ ತಡಪತ್ ಹರಿ ದರುಶನುಕೊ ಆಜ್’ ಭಕ್ತಿಗೀತೆಯಾಗಿ ಜನಪ್ರಿಯವಾಗಿ ಜನರು ಇಂದಿಗೂ ದೇವಾಲಯಗಳಲ್ಲಿ ಹಾಡುವುದಿದೆ, ಭಕ್ತಿ ಪರವಶವಾಗಿ ಕೇಳುವುದಿದೆ. ಈ ಹಾಡನ್ನು ಹಾಡಿದವರು ಮೊಹಮ್ಮದ್ ರಫಿ, ಬರೆದವರು ಮೊಹಮ್ಮದ್ ಶಕೀಲ್ ಬದಾಯುನಿ, ಸಂಗೀತಕಾರರು ನೌಷಾದ್ ಅಲಿ. ಇದು ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪದ ಪ್ರತಿರೂಪವೆನಿಸಿದೆ.

ಹಿಂದೂಸ್ತಾನದ ಇತಿಹಾಸದಲ್ಲಿ ಘಟಾನುಘಟಿ ಸಂಗೀತಗಾರರು ಬಡೇಗುಲಾಮ್ ಅಲಿ ಖಾನ್, ಇಂದಿನ ಪರ್ವೀನ್ ಸುಲ್ತಾನಾ ಮುಂತಾದವರು ಭಕ್ತಿಗೀತೆಗಳನ್ನು ಹಾಡಿರುವುದನ್ನು ಮತ್ತು ಬಿಸ್ಮಿಲ್ಲಾ ಖಾನರಂತಹ ಸಂಗೀತಕಾರರು ದೇವಸ್ಥಾನದಲ್ಲಿ ಶಹನಾಯಿ ವಾದ್ಯವನ್ನು ನುಡಿಸಿರುವುದನ್ನು ನೆನೆಯಬಹುದು.

ಹಿಂದೂಸ್ತಾನಿ ಸಂಗೀತಕ್ಕೆ ಮುಸ್ಲಿಮರ ಕೊಡುಗೆ ಅಪೂರ್ವವಾದದ್ದು. ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಮೂಲದಲ್ಲಿ ಬಪ್ಪಬ್ಯಾರಿ ಕಟ್ಟಿಸಿದ್ದು ಭಾರತೀಯ ಸಂಸ್ಕೃತಿಯ ಪ್ರಭಾವದ ಪ್ರತೀಕವಾಗಿದೆ. ಇವರೆಲ್ಲರೂ ಮುಸ್ಲಿಮರೆಂದು ತಮ್ಮನ್ನು ಗುರುತಿಸಿಕೊಂಡವರು. ಅಲ್ಲಾಹನನ್ನು ಸ್ತುತಿಸುವವರು ಕೂಡ. ಅವರ ನಂಬಿಕೆಯ ಇಸ್ಲಾಮ್, ಕುರಾನ್‌ನ ‘ಲೆಕುಂ ದೀನುಕುಂ ವಲ್‌ಯೆದೀನ್’ ಎಂಬ ತತ್ವಕ್ಕೆ ಬದ್ಧರಾದವರು. ಯೇಸುದಾಸ್‌ ಅವರು ಮುಸ್ಲಿಮ್ ಮಾಪ್ಳ ಪಾಟ್ಟುಗಳನ್ನು, ಅರಬ್ಬಿ ಭಾಷೆಯಲ್ಲಿರುವ ಮತ್ತು ಮಲಯಾಳಂನಲ್ಲಿರುವ ಭಕ್ತಿಯ ಹಾಡುಗಳನ್ನು ಹಾಡುವಾಗ ಎಲ್ಲ ಮುಸ್ಲಿಮರೂ ತಲೆದೂಗುವಂತೆ ಅರಬ್ಬಿ ಪದಗಳನ್ನು ಉಚ್ಚರಿಸುತ್ತಾರೆ. ಕನ್ನಡಕ್ಕೆ ಮುಸ್ಲಿಮ್ ಹಾಡುಗಾರರು ಕಮ್ಮಿಯಾಗಿದ್ದರೂ ಮಲಯಾಳಂ ಟಿ.ವಿ. ಚಾನೆಲ್‌ಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಎಲ್ಲ ಪ್ರಕಾರಗಳ ಹಾಡುಗಳನ್ನು ಹಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ADVERTISEMENT

ಕಲಾವಿದರು, ಸಂಗೀತಕಾರರು, ಚಿತ್ರಕಾರರು, ಶಿಲ್ಪಕಲಾಕಾರರು ಭಾರತದಲ್ಲಿ ವೈಯಕ್ತಿಕವಾಗಿ ತಮ್ಮ ನಂಬಿಕೆಗೆ ಬದ್ಧರಾಗಿದ್ದು, ಜಾತ್ಯತೀತ ಭಾರತದ ಜಾತ್ಯತೀತ ಮೌಲ್ಯಗಳ ಪ್ರತಿಪಾದಕರಾಗಿ, ವೈವಿಧ್ಯಮಯ ಸಂಸ್ಕೃತಿಯ ಪ್ರತಿರೂಪವಾಗಿ ಇರುವುದನ್ನು ಇಂದಿಗೂ ಈ ದೇಶದಲ್ಲಿ ವ್ಯಾಪಕವಾಗಿ ಕಾಣಬಹುದು. ಕಲಾವಿದರನ್ನು ಒಂದು ಧರ್ಮಕ್ಕೆ ಕಟ್ಟಿಹಾಕಿ ಅವರ ಸ್ವಾತಂತ್ರ್ಯ ಹರಣ ಮಾಡುವುದು ತಪ್ಪು. ಇಂತಹ ಟೀಕೆಗಳನ್ನು ಹಲವು ಬಾರಿ ಈ ಕಲಾವಿದರು ಎದುರಿಸಿದ್ದೂ ಇದೆ. ಆಗೆಲ್ಲ ಮುಸ್ಲಿಮ್ ಸಾಮಾನ್ಯ ಜನಸಮುದಾಯ ಇವರ ಪರವಾಗಿಯೇ ನಿಂತಿರುವುದು ಕಂಡುಬರುತ್ತದೆ.

ಸುಹಾನಾ ಕನ್ನಡದ ಒಬ್ಬ ಗಾಯಕಿಯಾಗಿ ಬೆಳೆಯಬೇಕು. ಅದಕ್ಕೆ ಅವಕಾಶ ಮಾಡಿಕೊಟ್ಟು ಅವಳ ಪ್ರತಿಭೆಯನ್ನು ಬೆಳೆಸುವ ಕರ್ತವ್ಯ ಎಲ್ಲರದ್ದಾಗಿದೆ.
-ಫಕೀರ್‌ ಮುಹಮ್ಮದ್‌ ಕಟ್ಪಾಡಿ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.