ADVERTISEMENT

ಶಾಸಕರ ನಿಲುವು ಸ್ವಾಗತಾರ್ಹ!

ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

‘ಉರ್ದು ಸಾಕು, ಕನ್ನಡ ಬೇಕು’ (ಪ್ರ.ವಾ. ಜುಲೈ 17) ಎಂದು ಮುಸ್ಲಿಂ ಸಮುದಾಯದ ಶಾಸಕರು, ಶಿಕ್ಷಣ ಸಚಿವರಿಗೆ ಮನವಿ ಮಾಡಿರುವ ಬಗ್ಗೆ ಓದಿ ಸಂತಸವಾಯಿತು. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿರುವ ಅಂಶಗಳನ್ನು ಗುರುತಿಸಿ, ಅದಕ್ಕೆ ಪೂರಕ ಪರಿಹಾರವನ್ನು ಶಾಸಕರು ಸೂಚಿಸಿರುವುದು ಒಳ್ಳೆಯ ಬೆಳವಣಿಗೆ.

ನಾನು ಗಮನಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 1 ರಿಂದ 5ನೇ ತರಗತಿವರೆಗೆ ಮಾತ್ರ ಉರ್ದು ಶಾಲೆಗಳಿವೆ. ಮಾಧ್ಯಮಿಕ ಉರ್ದು ಶಾಲೆಗಳು ಜನಸಂಖ್ಯೆ ಹೆಚ್ಚಿರುವ ಮತ್ತು ನಗರ ಪ್ರದೇಶಗಳಲ್ಲಿವೆ. ಪ್ರೌಢಶಾಲೆಗಳೂ ಅಷ್ಟೆ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿಗಳು ಭಾಷೆಯ ತೊಡಕಿನ ಕಾರಣದಿಂದ ಅರ್ಧಕ್ಕೆ ಶಿಕ್ಷಣ ನಿಲ್ಲಿಸುತ್ತಿರುವುದನ್ನು ಎಲ್ಲ ಅಧ್ಯಯನ ಸಮಿತಿಗಳು ವರದಿ ಮಾಡಿವೆ. ಹೀಗಾಗಿ ಮುಸ್ಲಿಮರ ಪ್ರಗತಿಗೆ ನಾಡಿನ ಭಾಷೆ ಬದುಕಿನ ಭಾಷೆಯಾಗುವ ಅಗತ್ಯವಿದೆ. ಮುಸ್ಲಿಮರು ಉರ್ದು ಭಾಷೆಯನ್ನು ಒಂದು ಭಾಷೆಯಾಗಿ ಕಲಿಯಲು ಅಭ್ಯಂತರವಿಲ್ಲ.

ಉರ್ದು ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ ಎಂಬ ಅಂಶ ನಿಜಕ್ಕೂ ಆತಂಕಪಡುವ ಸಂಗತಿಯಾಗಿದೆ.
ಮುಸ್ಲಿಂ ಸಮುದಾಯದ ಶಾಸಕರ ಮನವಿಯಂತೆ ಉರ್ದು ಶಾಲೆಗಳನ್ನು ಕನ್ನಡ ಶಾಲೆಗಳನ್ನಾಗಿಸಿ, ಉರ್ದು ಭಾಷೆಯನ್ನು ಒಂದು ಭಾಷೆಯಾಗಿ ಕಲಿಸುವುದರ ಮೂಲಕ ಉರ್ದು ಭಾಷೆಯನ್ನು ಉಳಿಸುತ್ತಲೇ, ಮುಸ್ಲಿಮರ ಶೈಕ್ಷಣಿಕ ಪ್ರಗತಿಗೆ ಕಾಯಕಲ್ಪ ನೀಡಲು ರಾಜ್ಯದ ಶಿಕ್ಷಣ  ಇಲಾಖೆ ಮುಂದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.