ADVERTISEMENT

ಸಮೀಕ್ಷೆಗೆ ಸಿದ್ಧತೆ

ಎಚ್‌.ಗುಂಡೂರಾವ್‌, ಬೆಂಗಳೂರು
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಈ ಕೆಲವು ದಿನಗಳಲ್ಲಿ  ಜಾತಿ ಸಮೀಕ್ಷೆಗಾಗಿ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಈ ಸಮೀಕ್ಷೆಯ ರಾಜಕೀಯ ಸಾಧಕ–ಭಾದಕಗಳ ಚಿಂತೆ ನಮಗೆ ಬೇಡ. ಗಣತಿದಾರರು ಒಂದು ದಿನಕ್ಕೆ ಸುಮಾರು 8 ರಿಂದ 10 ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ದಾಖಲಿಸಬೇಕಾಗಿದೆ.  ಕಾಲಮಿತಿಯೊಳಗೆ ಇದನ್ನು ಪೂರೈಸುವುದು ಸ್ವಲ್ಪ ಕಷ್ಟವೇ ಸರಿ. ಗಣತಿದಾರರೂ ನಮ್ಮ ಹಾಗೆ ಸಾಧಾರಣ ಪ್ರಜೆಗಳು. ಸಮೀಕ್ಷೆ ಸಮಯದಲ್ಲಿ ಅವರಿಗೆ ನಮ್ಮ ಸಹಕಾರ ಅತ್ಯಗತ್ಯ. ಅವರಿಗೆ ಈ ರೀತಿ ಸಹಕರಿಸಬಹುದಾಗಿದೆ.

ಈ ಸಮೀಕ್ಷೆಯಲ್ಲಿ ಗಣತಿದಾರರಿಗೆ ಮಾಹಿತಿ ಒದಗಿಸಬೇಕಾಗಿರುವ ಅಂಶಗಳನ್ನು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ರಾಜ್ಯ ಸರ್ಕಾರ ಈಗಾಗಲೇಪ್ರಕಟಿಸಿದೆ. ಅದರಂತೆ, ಪ್ರತಿ ಕುಟುಂಬದವರೂ, ಮನೆಯ ಮುಖ್ಯಸ್ಥನ ಸಹಿತ ಕುಟುಂಬದ ಎಲ್ಲಾ ಸದಸ್ಯರ
ಬಗ್ಗೆ ಪ್ರತ್ಯೇಕವಾಗಿ ವಿವರಗಳನ್ನು ಸಿದ್ಧವಾಗಿ ಇರಿಸಿಕೊಂಡು, ಗಣತಿದಾರರು ಮನೆಗೆ ಬಂದಾಗ ಅವರಿಗೆ ಒದಗಿಸಿದಲ್ಲಿ, ನಮ್ಮ ಹಾಗೂ ಅವರ ಅಮೂಲ್ಯ ಸಮಯ ಉಳಿಯುತ್ತದೆ.

ಅಷ್ಟೇ ಅಲ್ಲ, ಕೆಲವು ವೇಳೆ ಅವರು ಕೇಳುವ ಪ್ರಶ್ನಾವಳಿಗೆ ಉತ್ತರ ಕೊಡುವ ತಾಳ್ಮೆ ನಮಗೆ ಇರುವುದಿಲ್ಲ. ಆ ಸಮಯದಲ್ಲಿ ಆಗಬಹುದಾದ ಸಣ್ಣ ಪುಟ್ಟ ಮಾತಿನ ಚಕಮಕಿಯನ್ನು ಸಹ ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.