ADVERTISEMENT

ಸಹಕಾರ ಇರಲಿ

ಗಣೇಶ್‌, ಹಾಸನ
Published 30 ಡಿಸೆಂಬರ್ 2015, 19:30 IST
Last Updated 30 ಡಿಸೆಂಬರ್ 2015, 19:30 IST

ಬಾಳೆ ಬೆಲೆ ಕುಸಿತ ತಡೆಗೆ ಅನೇಕ ಸಲಹೆಗಳು ಬರುತ್ತಿವೆ. ಅದರಲ್ಲಿ ಮೌಲ್ಯವರ್ಧನೆಯೂ ಒಂದು. ಇದೇ ಸರಿ ಎನಿಸುತ್ತದೆ. ಆದರೆ ಕಾರ್ಮಿಕರ ಕೊರತೆಯ ಈ ದಿನಗಳಲ್ಲಿ, ತನ್ನ ತೋಟದಿಂದ ವ್ಯಾಪಾರಿಗಳೇ ಫಸಲನ್ನು ತೆಗೆದುಕೊಂಡು ಹೋಗಲಿ ಎಂದು ಕಾಯುತ್ತಿರುವ ರೈತ ಮೌಲ್ಯವರ್ಧನೆಯ ಸಾಹಸಕ್ಕೆ ಹೋಗುವನೆ? ಇದಕ್ಕೆ ಪರಿಹಾರವೆಂದರೆ ಸಹಕಾರಿ ಸಂಘಗಳು.

ದಿನಪತ್ರಿಕೆಯೊಂದು ಶಿರಸಿಯ ಕದಂಬ ಮಾರ್ಕೆಟಿಂಗ್‌ ಸಹಕಾರಿ ಸಂಸ್ಥೆಯ ಬಗ್ಗೆ ಲೇಖನ ಪ್ರಕಟಿಸಿತ್ತು. ಅಂತಹ ಸಂಸ್ಥೆಗಳು ಎಲ್ಲೆಡೆ ಹುಟ್ಟಿಕೊಂಡರೆ ರೈತರು ಉದ್ಧಾರವಾಗಬಹುದು. ನಮ್ಮಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಬೈಫ್‌ ಸಂಸ್ಥೆಗಳಿಗೆ ಈ ಸಾಮರ್ಥ್ಯ ಇದೆಯೆಂದು ನನ್ನ ಅನಿಸಿಕೆ.

ಕಳೆದ ವರ್ಷ ‘ಪ್ರಜಾವಾಣಿ’ಯಲ್ಲಿ ತಮಿಳುನಾಡಿನ ವರದರಾಜಪುರಂ ಎಂಬಲ್ಲಿ ರೈತರು ಸಹಕಾರ ಸಂಘ ಕಟ್ಟಿಕೊಂಡು ಸೋಲಾರ್‌ ಡ್ರೈಯರ್‌ ಮುಖಾಂತರ ಬಾಳೆ ಚಾಕೊಲೇಟ್‌ ತಯಾರಿಸುವ ಬಗ್ಗೆ ಲೇಖನ ಬಂದಿತ್ತು.

ಸ್ನೇಹಿತರೊಬ್ಬರ ಪ್ರಕಾರ (ಅವರು ರೈತರಲ್ಲ), ಬೆಲೆ ಸಿಗಲಿಲ್ಲ ಎಂದು ಬೆಳೆ ನಾಶಪಡಿಸುವುದು ಹತಾಶೆಯ ನಿರ್ಧಾರ. ಇಂದಿನ ದಿನಗಳಲ್ಲಿ ಕುಳಿತಲ್ಲೇ ಯಾವ ಮಾರುಕಟ್ಟೆಯಲ್ಲಿ ಯಾವ ಹಣ್ಣಿಗೆ ಎಷ್ಟು ಬೆಲೆಯೆಂದು ತಿಳಿಯಬಹುದು. ಮೂಡಿಗೆರೆಯ ಬೆಳೆಗಾರರು ಬೆಳೆಯನ್ನು ರಸ್ತೆಗೆ ತಂದು ಸುರಿಯುವ ಬದಲು ಲಾರಿಯಲ್ಲಿ ತುಂಬಿ ಪಕ್ಕದ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಕೊಂಡೊಯ್ಯಬಹುದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.