ADVERTISEMENT

ಸಾಮಾಜಿಕ ದುರಂತ

ಎಂ.ಅಬ್ದುಲ್ ರೆಹಮಾನ್ ಪಾಷ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ಮಾನಸಿಕ ಅಸ್ವಸ್ಥರನ್ನು ‘ಹುಚ್ಚ’ ಎಂದು ಕರೆಯಬಾರದು ಎಂಬ ಒಂದು ಶಿಸ್ತಿದೆ. ಆದರೆ ತನ್ನನ್ನು ತಾನೇ ‘ಹುಚ್ಚ’ ಎಂದು ಕರೆದುಕೊಳ್ಳುವ ಮತ್ತು ಆತನನ್ನು ಅದೇ ಹೆಸರಿನಿಂದ ಮೆರೆಸುವ ಅಭಿಮಾನಿಗಳಿಗೆ ಈ ಮಾನವೀಯ ಶಿಸ್ತಿನ ಅರಿವೇ ಇಲ್ಲವೆನ್ನಬೇಕಾಗುತ್ತದೆ.

ಹುಚ್ಚ ವೆಂಕಟ್‌ ಅವರನ್ನು ಅವರ ಬೇಜವಾಬ್ದಾರಿ ವರ್ತನೆಗಾಗಿ ಬಂಧಿಸಲಾಗಿತ್ತು. ಅಪರಾಧಕ್ಕೆ ಶಿಕ್ಷೆಯಿದೆ, ಅಪರಾಧಕ್ಕೆ ಪ್ರಜ್ಞಾಪೂರ್ವಕ ಪ್ರಚೋದನೆ ನೀಡುವುದೂ ಅಪರಾಧವೇ. ವೆಂಕಟ್‌ ಅವರ ಅನಿಶ್ಚಿತ ಸ್ವಭಾವವನ್ನು ಚೆನ್ನಾಗಿ ಬಲ್ಲವರೇ ಅವರನ್ನು ‘ಬಿಗ್ ಬಾಸ್’ ಪಂಜರದಲ್ಲಿ ಕೂಡಿಹಾಕಿದ್ದು ಈ ಅಪರಾಧಕ್ಕೆ ನೀಡಿದ ಪ್ರಚೋದನೆ.

ಇಡೀ ಜಗತ್ತಿನ, ಅದರಲ್ಲೂ ಮುಖ್ಯವಾಗಿ ಮಹಿಳೆಯರ ‘ರಕ್ಷಕ’ನೆಂಬ ಭ್ರಮೆಯಲ್ಲಿ ಬದುಕುತ್ತಿರುವ ವೆಂಕಟ್‌ ಅವರನ್ನು ಸುಲಭವಾಗಿ ಪ್ರಚೋದನೆಗೆ ಒಳಗಾಗುವ ಇಂಥ ಸ್ಫೋಟಕ ಪರಿಸರದಲ್ಲಿ ಇರಿಸಿದ್ದೇ ತಪ್ಪು. ಹುಚ್ಚ ವೆಂಕಟ್‌ರಂಥ ಸಮಸ್ಯಾತ್ಮಕ ಮನಸ್ಸಿನ ವ್ಯಕ್ತಿಗಳಿಗೆ ವೈಯಕ್ತಿಕ ಜೀವನ ನಡೆಸಲೂ ಮಾನಸಿಕ ಆಪ್ತಸಲಹೆಯ ಅವಶ್ಯಕತೆ ಇದೆ.

ಅವರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳಬೇಕಾದ ಅಗತ್ಯವಿದೆ; ಇಂಥ ವ್ಯಕ್ತಿಗಳು ಅತ್ಯಂತ ಪ್ರಭಾವಶಾಲಿಯಾದ ಚಲನಚಿತ್ರ ಮಾಧ್ಯಮದಲ್ಲಿ ಇರುವುದು, ತಮ್ಮ ಚಿತ್ರಗಳ ಮೂಲಕ (ವೆಂಕಟ್ ಹಲವು ಬಾರಿ ಹೇಳಿರುವಂತೆ) ಸಮಾಜಕ್ಕೆ ‘ಸಂದೇಶ’ ನೀಡುತ್ತಿರುವುದು ಸಾಮಾಜಿಕ  ದುರಂತವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.