ADVERTISEMENT

ಸಾಹಿತಿಗಳಿಗೆ ಕಿವಿಮಾತು

ಜಿ.ನಾರಾಯಣಮೂರ್ತಿ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ಪ್ರೀತಿಯ ಸಾಹಿತಿಗಳೆ, ನಿಮ್ಮಿಂದಲೇ ಒಂದು ಭಾಷೆಯ ಬೆಳವಣಿಗೆ ಸಾಧ್ಯ. ನಿಮ್ಮಿಂದಲೇ ಹೊಸ ವಿಚಾರಗಳ ಉದ್ಘೋಷಣೆ ಸಾಧ್ಯ. ನಿಮ್ಮಿಂದಲೇ ಹೊಸ ಚಿಂತನೆಗಳು ಬೆಳಕಿಗೆ ಬರಲು ಸಾಧ್ಯ. ನಿಮ್ಮಿಂದಲೇ ಭಾವನೆಯ ಪ್ರಪಂಚದ ಬಾಗಿಲು ತೆರೆಯಲು ಸಾಧ್ಯ.

ನಿಮ್ಮಿಂದಲೇ  ಕಲ್ಪನೆಯ ಆಕಾಶ ವಿಸ್ತಾರವಾಗಲು ಸಾಧ್ಯ. ನಿಮ್ಮ ಕಲ್ಪನೆ,  ಹಾಸ್ಯಲಹರಿ, ಸುಖ–ದುಃಖ ಕುರಿತ ನಿಮ್ಮ ವಿವರ ವರ್ಣನೆ ಮತ್ತು ಇತರೆ ಸೃಜನಶೀಲ ಕ್ರಿಯೆ, ಭಾಷಾ ಜಗತ್ತನ್ನು ಹಿಗ್ಗಿಸಿ ಮನಸ್ಸಿಗೆ ಮುದ ಕೊಡುತ್ತದೆ. 

ಅದೆಲ್ಲಾ ಸರಿ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಾಹಿತಿಗಳು ಅನೇಕ ಪುರಸ್ಕಾರಗಳನ್ನು ಪಡೆಯುತ್ತಾ, ಅವರಿವರ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಾ, ಅಲ್ಲಿ ಇಲ್ಲಿ ವೇದಿಕೆಗಳಲ್ಲಿ ಭಾಷಣ ಮಾಡುತ್ತಾ, ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾ ವಯಸ್ಸಿನ ಜೊತೆ ಜೊತೆಗೆ ಎತ್ತರ ಎತ್ತರ ಬಹು ಎತ್ತರಕ್ಕೆ ಬೆಳೆದಿದ್ದೇವೆಂದು ತಿಳಿದು ತಾವು ತಿಳಿದಿರುವುದೇ ಸತ್ಯ ಮತ್ತು ತಾವು ತಿಳಿಸಿರುವುದೇ ಸತ್ಯ, ಇದಕ್ಕಿಂತ ಬೇರೆ ಸತ್ಯವಿಲ್ಲ ಎನ್ನುವ ಹಂತ ತಲುಪಿ ಅಂತಿಮವಾಗಿ ‘ಅವನೆಲ್ಲಿದ್ದಾನೆ ತೋರಿಸಿ’ ಎಂದು ಹಿರಣ್ಯಕಶಪುವಿನ ತೆರದಿ ಕಾಲ್ಪನಿಕ ಜಗತ್ತಿನಲ್ಲಿ ನಿಂತು ತೊಡೆ ತಟ್ಟುತ್ತಿರುವುದು  ವಿಷಾದನೀಯ.

ಸಾಹಿತಿಗಳದು ಗಂಭೀರ ಮತ್ತು ವಿನಯಪೂರ್ಣ ಧನಾತ್ಮಕ ಸೃಜನ ಕಾರ್ಯವೇ ಹೊರತು ಋಣಾತ್ಮಕ ಪ್ರಚೋದನ ಕಾರ್ಯವಲ್ಲ ಎಂದು ಭಾವಿಸಿ ಒಂದು ಕಳಕಳಿಯ ಪ್ರಾರ್ಥನೆಯೆಂದರೆ ಯಾರದೇ ಧಾರ್ಮಿಕ ಭಾವನೆಗಳನ್ನು ಕೀಳಾಗಿ ಪರಿಗಣಿಸದೆ ಕೃತಿಗಳ ಸೃಜನ ಸಾಮರ್ಥ್ಯದ ಬಗ್ಗೆ ವಿವರಿಸಿ ಮತ್ತು ಭಾಷಣಗಳ ಮಳೆ ಸುರಿಸಿ ಸಾಹಿತ್ಯ ಜಗತ್ತನ್ನು ಜೀವ ಭಯದಿಂದ ಮುಕ್ತರನ್ನಾಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.