ADVERTISEMENT

ಸಿಗುವ ಉತ್ತರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST

‘ಮೃತಪಟ್ಟ ಹನ್ನೊಂದನೆಯ ದಿನ ಕಾರ್ಯ ಮಾಡಿ ಸ್ಮಶಾನದಲ್ಲಿಯೇ ಎಡೆ ಬಡಿಸಿ ಎಷ್ಟೇ ಪೂಜೆ ಮಾಡಿದರೂ ಒಂದು ಕಾಗೆಯೂ ಬಂದು ಎಡೆ ಸ್ವೀಕರಿಸಲಿಲ್ಲ; ಬದಲಿಗೆ ಮನೆಯ ಹತ್ತಿರ ಬಂದು ಎಷ್ಟೇ ಓಡಿಸಿದರೂ ಹೋಗದೇ, ಬಡಿಸಿದ ಎಡೆಯನ್ನು ತಿಂದು ಹಾರಿ ಹೋಯಿತು’ ಎಂದು ತಮ್ಮ ಅಚ್ಚರಿಯನ್ನು ತೋಡಿಕೊಂಡ ಕೆ.ಎಂ.ರುಕ್ಮಿಣಿ ವೆಂ. ಕುಮಾರ್, ‘ಇದಕ್ಕೆ ನಿಖರ ಉತ್ತರ ಯಾರಿಗೂ ಹೇಳಲಾಗಲಿಲ್ಲ. ಆದರೆ, ಇದು ಉತ್ತರ ಸಿಗಲಾರದ ಸತ್ಯ ಘಟನೆ’ ಎಂದು ತೀರ್ಮಾನಿಸಿದ್ದಾರೆ (ವಾ.ವಾ., ಜುಲೈ 14).
ಹುಡುಕುವ ರೀತಿಯಲ್ಲಿ ಹುಡುಕಿದ್ದರೆ ಉತ್ತರ ಸುಲಭವಾಗಿ ಸಿಗುತ್ತಿತ್ತು; ಬದಲಿಗೆ ಬಹಳ ಕಷ್ಟ ಪಟ್ಟಿದ್ದಕ್ಕೆ ಉತ್ತರ ಸಿಕ್ಕಿಲ್ಲ. ಉತ್ತರ ಸರಳ: ಸ್ಮಶಾನದಲ್ಲಿ ಎಡೆ ಇಟ್ಟಾಗ ಅಲ್ಲಿ ಹತ್ತಿರದಲ್ಲಿ ಯಾವುದೇ ಕಾಗೆ ಇರಲಿಲ್ಲ, ಅದಕ್ಕಾಗಿಯೇ ಬರಲಿಲ್ಲ. ಮನೆ ಹತ್ತಿರ ಹೊರಗಡೆ ಪಂಕ್ತಿಯಲ್ಲಿ ಊಟ ಮಾಡುವಾಗ ಹಸಿದ ಕಾಗೆಯೊಂದು ಅಲ್ಲಿತ್ತು. ಕಾ ಕಾ ಎಂದು ಕೂಗುವುದು ಅದರ ಜಾಯಮಾನ. ಕೂಗಿತು. ಎಲೆ ತುಂಬಾ ಎಡೆ ಇಟ್ಟಿದ್ದನ್ನು ಕಂಡು ಹಾರಿಬಂದು ಎಷ್ಟು ಬೇಕೋ ಅಷ್ಟು ತಿಂದು ಹಾರಿಹೋಯಿತು. ಅಕಸ್ಮಾತ್ ಕೆಳಗೆ ಬರುವುದಕ್ಕೇನಾದರೂ ಹೆದರಿಕೊಂಡಿದ್ದರೆ, ಅಷ್ಟರಲ್ಲಿ ಬೀದಿ ನಾಯಿಯೇನಾದರೂ ಹತ್ತಿರ ಸುಳಿದಿದ್ದರೆ, ಕಾಗೆಗೆ ಮೋಸವಾಗುತ್ತಿತ್ತು ಅಷ್ಟೆ. ಈ ಸತ್ಯದಲ್ಲಿ ಉತ್ತರ ಸಿಗಲಾರದ್ದು ಯಾವುದಿದೆ?
ನಂಬಿಕೆಯುಳ್ಳವರು ಪ್ರಶ್ನೆಯನ್ನು ಕೇಳುವುದಿಲ್ಲ. ಕೇಳಿದರೂ ಅವರಿಗೆ ಸಿಗುವ ಉತ್ತರವೂ ನಂಬಿಕೆಯಲ್ಲಿಯೇ ಇರುತ್ತದೆ. ಮೃತಪಟ್ಟ ತಮ್ಮ ಬಂಧುವಿಗೂ ಒಂದು ಸಾಧಾರಣ ಕಾಗೆಗೂ ಸಂಬಂಧವಿದೆ ಎಂದು ದಟ್ಟವಾಗಿ ಭಾವಿಸುವವರಿಗೆ ಅದಕ್ಕಿಂತ ಹೊರತಾದ ಉತ್ತರ ಸಿಗುವುದಿಲ್ಲ. ಹೋಗಲಿ ಬಿಡಿ ಮನೆಯ ಹತ್ತಿರದ ಕಾಗೆಗಾದರೂ ಮೃಷ್ಟಾನ್ನ ಭಾಗ್ಯ ಸಿಕ್ಕಿತಲ್ಲ!                                      
- ಎಂ.ಅಬ್ದುಲ್ ರೆಹಮಾನ್ ಪಾಷ
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.