ADVERTISEMENT

ತೀರ್ಪಿಗೆ ಕಾಯೋಣ...

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST

ಮಹದಾಯಿ ನದಿ ನೀರಿನ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ.ದೂರದಿಂದ ನೋಡುವ ನಮ್ಮಂಥ ಜನಸಾಮಾನ್ಯರಿಗೆ ಇದರಿಂದ ನೋವು ಉಂಟಾಗುತ್ತದೆ. ಸರಳವಾಗಿ ಪರಿಹಾರ ಕಾಣಬಹುದಾದ ವಿವಾದ ಜಟಿಲಗೊಂಡು ರೇಜಿಗೆ ಹುಟ್ಟಿಸುತ್ತಿದೆ. ಪದೇ ಪದೇ ನಡೆಯುವ ಬಂದ್‌ಗಳಿಂದ ಆರ್ಥಿಕ ನಷ್ಟ ಉಂಟಾಗಿ, ವ್ಯಾಪಾರ–ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಕರ್ನಾಟಕ ಪ್ರಕ್ಷುಬ್ಧ ರಾಜ್ಯ ಎಂದು ಬಿಂಬಿತವಾಗುತ್ತಿದೆ. ಇದು ಬದಲಾಗಬೇಕು.

ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ
ರಾಜ್ಯ ಮಾತುಕತೆಗೆ ನಿರಾಕರಿಸುತ್ತಿರುವಾಗ ನ್ಯಾಯಾಲಯದ ತೀರ್ಪಿಗೆ ಕಾಯದೆ ಗತ್ಯಂತರವಿಲ್ಲ. ತೀರ್ಪಿಗಾಗಿ ಕಾಯುವಂತೆ ಅಥವಾ ಅಲ್ಲಿಯವರೆಗೂ ಸಮಾಧಾನದಿಂದ ಇರುವಂತೆ ಹೋರಾಟಗಾರರು ಆ ಭಾಗದ ಜನರಿಗೆ ಯಾಕೆ ತಿಳಿ ಹೇಳುತ್ತಿಲ್ಲ? ತೀರ್ಪಿನ ನಂತರ ಯಾರ ಹಂಗೂ ಇಲ್ಲದೆ ನಮ್ಮ ನೀರನ್ನು ನಾವು ಬಳಸಬಹುದಲ್ಲವೇ?

ಪ್ರತಿ ಜಿಲ್ಲೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಂತ ಎಲ್ಲರೂ ಹೋರಾಟಕ್ಕಿಳಿದರೆ ಪರಿಸ್ಥಿತಿ ಹದಗೆಡುವುದಿಲ್ಲವೇ? ಅಣೆಕಟ್ಟೆಗಳನ್ನು ನಿರ್ಮಿಸುವುದೇ ನೀರಿನ ಸಮಸ್ಯೆಗೆ ಪರಿಹಾರವೇ? ನೀರನ್ನು ಇಂಗಿಸುವ ಪರ್ಯಾಯ ಯೋಜನೆಗಳಿಲ್ಲವೇ? ನಮ್ಮ ರಾಜಕಾರಣಿಗಳಿಗೆ
ಅಣೆಕಟ್ಟೆ ನಿರ್ಮಾಣ ಬಿಟ್ಟು ಬೇರೆ ಏನೂ ಹೊಳೆಯುವುದಿಲ್ಲ!

ADVERTISEMENT

ಧಾರವಾಡದ ಬಳಿಯ ಪೆಪ್ಸಿ ಫ್ಯಾಕ್ಟರಿಗೆ ಮಲಪ್ರಭಾ ನದಿಯಿಂದ ಪ್ರತಿದಿನ ಲಕ್ಷಾಂತರ ಲೀಟರ್‌ ನೀರು ಸರಬರಾಜು ಆಗುತ್ತಿದೆ ಎಂದು ಗೋವಾ ಪ್ರತಿಪಾದಿಸಿದೆ. ಅದು ನಿಜವೇ? ನಿಜವಾಗಿದ್ದಲ್ಲಿ ಅದನ್ನು ನಿಲ್ಲಿಸಿ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಲ್ಲವೇ?

-ಗುರು ಜಗಳೂರು, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.