ADVERTISEMENT

ವೇತನ: ಸರ್ಕಾರ ಸ್ಪಂದಿಸಲಿ

​ಡಾ.ಡಿ.ಎಸ್‌.ಚೌಗಲೆ ಬೆಳಗಾವಿ
Published 15 ಆಗಸ್ಟ್ 2018, 19:30 IST
Last Updated 15 ಆಗಸ್ಟ್ 2018, 19:30 IST

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ತತ್ಸಮಾನ ಅಂಗಸಂಸ್ಥೆಗಳ ಪ್ರಾಧ್ಯಾಪಕರಿಗೆ ದೊರೆಯಬೇಕಾದ ಯುಜಿಸಿ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಶೀಘ್ರ ಅನುಷ್ಠಾನಗೊಳಿಸಬೇಕು. ಈಗಾಗಲೇ ವಿಳಂಬವಾಗಿದೆ. 2017ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಈ ಹೊಸ ವೇತನವನ್ನು ಜಾರಿಗೊಳಿಸಲು ಸೂಚಿಸಿತ್ತು. ತದನಂತರ ಎರಡು ಬಾರಿ ಸರ್ಕಾರಕ್ಕೆ ಪತ್ರ ಬರೆದು ವೇತನ ಅನುಷ್ಠಾನದ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿತ್ತು.

ಇದರ ಅನುಷ್ಠಾನದಿಂದ ಬೊಕ್ಕಸಕ್ಕೆ ಆಗುವ ಹೊರೆ ಬಗ್ಗೆ ವರದಿ ನೀಡಲು ಉನ್ನತ ಶಿಕ್ಷಣ ಇಲಾಖೆಯು ಸಮಿತಿ ರಚಿಸಿತ್ತು. ಆ ಸಮಿತಿಯು ಹಣಕಾಸು ಇಲಾಖೆಗೆ ವರದಿ ನೀಡಿದೆ ಎಂದು ಹೇಳಲಾಗುತ್ತಿದೆ. ಹಣಕಾಸು ಖಾತೆಯು ಮುಖ್ಯಮಂತ್ರಿ ಬಳಿಯೇ ಇದೆ. ಆದಕಾರಣ ಮುಖ್ಯಮಂತ್ರಿಯವರು ವಿಳಂಬ ನೀತಿ ಅನುಸರಿಸದೆ ಈ ಸಂಬಂಧ ತ್ವರಿತವಾಗಿ ಸ್ಪಂದಿಸಬೇಕು.

ಈ ಸಂಬಂಧ ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಗತಿಯ ವರದಿ ನೀಡಬೇಕಿದೆ. ಅಷ್ಟೇ ಅಲ್ಲ, ವೇತನ ಆಯೋಗದ ಶಿಫಾರಸನ್ನು 2019ರ ಮಾರ್ಚ್‌ ಒಳಗೆ ಜಾರಿಗೊಳಿಸುವುದು ಕಡ್ಡಾಯವಾಗಿದೆ. ಲೋಕಸಭಾ ಚುನಾವಣೆ ಸನಿಹದಲ್ಲಿದೆ. ವಿಳಂಬ ಮಾಡಿದರೆ ನೀತಿಸಂಹಿತೆ ತೊಡರಾಗಿ ಪರಿಣಮಿಸಬಹುದು. ಆದಕಾರಣ ಸರ್ಕಾರವು ಕೂಡಲೇ ಇತ್ತ ಗಮನಹರಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.