ADVERTISEMENT

ಅಪರೂಪದವರ ಅಪರೂಪದ ಸಂದರ್ಶನ

ಪಿ.ಶ್ರೀಧರ್ ನಾಯಕ್
Published 19 ಏಪ್ರಿಲ್ 2014, 19:30 IST
Last Updated 19 ಏಪ್ರಿಲ್ 2014, 19:30 IST
ಭಾವು ಪತ್ತಾರ್
ಭಾವು ಪತ್ತಾರ್   

ಗಾಂಪೇಶ್ವರ ಸ್ವಾಮಿಗಳು ಮಠದಲ್ಲಿ ವಿಶೇಷ ಸಭೆ ಕರೆದಾಗ ಬಹುಶಃ ವೈದ್ಯಕೀಯ ಕಾಲೇಜೋ, ಎಂಜಿನಿಯರಿಂಗ್ ಕಾಲೇಜೋ ಆರಂಭಿಸಲು ಯೋಚಿಸಿದ್ದಾರೆ ಎಂದು ಅಂದುಕೊಂಡು ಭಕ್ತಜನ ಬಂದರು.  ಆದರೆ ಸ್ವಾಮಿಗಳು ‘ಪತ್ರಿಕೆ ಆರಂಭಿಸುತ್ತೇನೆ’ ಎಂದಾಗ ಎಲ್ಲರೂ ಕಂಗಾಲು. ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿ ‘ನಿಮ್ಮ, ನಿಮ್ಮ ಅಭಿಪ್ರಾಯ ಹೇಳಿ’ ಎಂದಾಗ ಗಾಢ ಮೌನ ಆವರಿಸಿತು.

‘ಯಾಕೆ ಯಾರೂ ಬಾಯಿ ಬಿಡ್ತಾ ಇಲ್ಲ’ ಎಂದು ಗಾಂಪೇಶ್ವರ ಸ್ವಾಮಿಗಳು ಕೇಳಿದಾಗ  ಆವರಿಸಿದ ಮೌನವನ್ನು ಭೇದಿಸಿ ಪಟ್ಟಶಿಷ್ಯ ಅರೆಮರುಳ, ‘ಮೌನಂ ಸಮ್ಮತಿ ಲಕ್ಷ್ಮಣಂ’ ಎಂದು ಗಟ್ಟಿಯಾಗಿ ಕೂಗಿದ. ಸ್ವಾಮೀಜಿಗಳು ಒಮ್ಮೆ ಕಂಗಾಲಾಗಿ ‘ಏ ಅರೆಮರುಳಾ, ಸಮ್ಮತಿ ಲಕ್ಷ್ಮಣಂ ಅಲ್ಲ, ಲಕ್ಷಣಂ’ ಎಂದು ತಿದ್ದಿದರು. ‘ಏನೋ ಒಂದು’ ಅರೆಮರುಳ ಗೊಣಗಿದ. ಸಭೆ ಬರ್ಖಾಸ್ತು ಆಗಿ ಎಲ್ಲರೂ ಮನೆಗೆ ಹೋದರು.

ಸ್ವಾಮೀಜಿ ಪತ್ರಿಕೆ ಆರಂಭಿಸಿದ್ದೂ ಆಯಿತು; ಅರೆಮರುಳನ ನಿರುದ್ಯೋಗ ಪರಿಹರಿಸಿದ್ದೂ ಆಯಿತು. ಒಂದು ದಿನ,
‘ಬನ್ರಿ ಇಲ್ಲಿ’
ಸಂಪಾದಕರು ವರದಿಗಾರ ಅರೆಮರುಳನನ್ನು ನೋಡಿ ಗರ್ಜಿಸಿದರು. ಒಮ್ಮೆ ಬೆಚ್ಚಿಬಿದ್ದು ಎದುರು ಬಂದು ನಿಂತುಕೊಂಡ. ‘ಅಲ್ರಿ, ಎಷ್ಟು ಬಾರಿ ಆಕಳಿಸ್ತೀರಾ? ಅರ್ಧ ಗಂಟೆಯಲ್ಲಿ ಮೂವತ್ತು ಬಾರಿ ಆಕಳಿಸಿದ್ದೀರಿ. ಇದಕ್ಕಾಗಿ ನಿಮಗೆ ಸಂಬಳ ಕೊಡುವುದಾ?’
ದುರುಗುಟ್ಟಿ ನೋಡಿದರು ಸಂಪಾದಕರು.

‘ನನ್ನನ್ನು ಗಮನಿಸುತ್ತಾ, ನನ್ನ ಆಕಳಿಕೆ ಲೆಕ್ಕ ಹಾಕುತ್ತಾ ಕುಳಿತುಕೊಳ್ಳುವುದು ಬಿಟ್ಟು ಬೇರೆ ಕೆಲಸ ಇಲ್ವಾ ಸಾರ್ ನಿಮಗೆ’ ಎಂದು ಕೇಳಬೇಕೆಂದು ಅಂದುಕೊಂಡಿದ್ದ. ದೊಡ್ಡವರಿಗೆ ಎದುರು ಉತ್ತರ ಕೊಡಬಾರದು ಎನ್ನುವ ಮಾತು ಪತ್ರಿಕಾ ಸಂಸ್ಥೆ ಸೇರಿದಾಗಲೇ ಹಿರಿಯರೊಬ್ಬರು ಹೇಳಿದ್ದು ನೆನಪಿಗೆ ಬಂದು ಮೌನವಾಗಿ ತಲೆ ತಗ್ಗಿಸಿ ನಿಂತ. ‘ವಿಶೇಷ ವರದಿ ಬರಿಬೇಕು. ಬರೀ ಸುದ್ದಿ ಬರೆದು ಬಿಸಾಕುವುದಕ್ಕೆ ಅಲ್ಲ, ನಿಮ್ಮನ್ನು ಇಲ್ಲಿ ಇಟ್ಕೋಳ್ಳೋದು. ತಿಳಿತಾ?’

ಧ್ವನಿಯಲ್ಲಿ ಸಿಟ್ಟಿರಲಿಲ್ಲ. ‘ಸರಿ ಸಾರ್’ ಎಂದು ಅವರ ಮುಖವನ್ನೇ ನೋಡುತ್ತಾ ನಿಂತ. ‘ಅಪರೂಪದ ವ್ಯಕ್ತಿಗಳ ಸಂದರ್ಶನ ಮಾಡಿ. ಸಭೆ, ಸಮಾರಂಭ, ಪುಸ್ತಕ ಬಿಡುಗಡೆ ದಿನಾ ಇದ್ದುದೇ. ಸರಿ, ಹೋಗಿ ನೀವು’

ಬದುಕಿದೆಯೇ ಬಡಜೀವವೇ ಎಂದು ಬಂದು ಸೀಟಲ್ಲಿ ಹೋಗಿ ಕೂತ. ಸಂಪಾದಕರ ಮಾತು ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು. ‘ಅಪರೂಪದ ವ್ಯಕ್ತಿಗಳ ಸಂದರ್ಶನ ಮಾಡಿ’

ಅಪರೂಪದವರು ಎಂದರೆ ಯಾರು? ಇನ್ನು ಸ್ವಲ್ಪ ಜಾಸ್ತಿ ಹೊತ್ತು ಕೂತರೆ ಮತ್ತೆ ಸಿಟ್ಟಿಗೆ ಗುರಿಯಾಗಬೇಕಾದೀತು ಎಂದು ಹೊರಟೇ ಬಿಟ್ಟ ಭಾವಿ ಪ್ರಖ್ಯಾತ ಪತ್ರಕರ್ತ.

ಮೊದಲ ಸಂದರ್ಶನಕ್ಕೆ ಆಯ್ಕೆ ಮಾಡಿದ್ದು ಬಸ್ ಚಾಲಕನ ಹಿಂದೆಯೇ ನಿಂತು ಪ್ರಯಾಣಿಸುವ ಗಜಗಮನೆಯೊಬ್ಬಳನ್ನು.
‘ಮೇಡಂ, ನಾನು ಪತ್ರಕರ್ತ. ಅಪರೂಪದ ವ್ಯಕ್ತಿಗಳನ್ನು ಸಂದರ್ಶಿಸಿ ವರದಿ ಸಿದ್ಧಪಡಿಸಬೇಕೆಂದುಕೊಂಡಿದ್ದೇನೆ. ನಿಮ್ಮ...’
ಮಾತು ಅರ್ಧದಲ್ಲಿಯೇ ಕತ್ತರಿಸಿದ ಆಕೆ ‘ಅಪರೂಪ? ಏನ್ರಿ, ನನ್ನ ಯಾವತ್ತಿನ ರೂಪವೇ ಇದು. ಅಪರೂಪವಂತೆ ಅಪರೂಪ ...’  ಗುಡುಗಿದಳು.

‘ಹಾಗಲ್ಲ ಮೇಡಂ...’ ತೊದಲಿದ. ಸ್ವಲ್ಪ ಹೊತ್ತಿನ ಬಳಿಕ ನೇರವಾಗಿ ಸಂದರ್ಶನ ಆರಂಭಿಸುವುದೇ ಸೂಕ್ತ ಎಂದು ಅನಿಸಿ ‘ನೀವು ಎಷ್ಟು ವರ್ಷಗಳಿಂದ ಚಾಲಕನ ಹಿಂದೆ ನಿಂತು ಪ್ರಯಾಣಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿಯೇ ಬಿಟ್ಟ.    

‘15 ವರ್ಷಗಳಿಂದ’
‘15 ವರ್ಷಗಳಿಂದ? ಯಾಕೆ ಮೇಡಂ?’
ಅರೆಮರುಳ ಪ್ರಶ್ನಿಸಿದ

‘ಯಾಕೆಂದರೆ ಚಾಲಕನನ್ನು ಪ್ರೇಮಿಸಬೇಕಾದರೆ ಅಲ್ಲೇ ನಿಲ್ಲಬೇಕು’.
‘ಸರಿ ಮೇಡಂ, ಅವನನ್ನು ಪ್ರೇಮದಲ್ಲಿ ಕೆಡವಿ, ಅನಂತರ ಮದುವೆ ಎಂಬ ಬಲೆಯಲ್ಲಿ ಕೆಡವುದಕ್ಕೆ ಇಷ್ಟು ವರ್ಷವಾದರೂ ಆಗಿಲ್ವಾ ನಿಮ್ಮಿಂದ’ ಎಂದ ಅರೆಮರುಳ.
ಸಿಡಿಮಿಡಿಗೊಂಡ ಆಕೆ ‘ಯಾಕೆ ಆಗಿಲ್ಲ? ಮದುವೆ ಎಂದೋ ಆಗಿ ಹೋಗಿದೆ’ ಎಂದು ನಿಟ್ಟುಸಿರುಬಿಟ್ಟಳು.
‘ಆದರೆ 15 ವರ್ಷಗಳಿಂದ ಅದೇ ಜಾಗದಲ್ಲಿ ನಿಂತುಕೊಳ್ಳುವ ದರ್ದು ಯಾಕೆ ನಿಮಗೆ’ ಧೈರ್ಯವಾಗಿ ಪ್ರಶ್ನಿಸಿದ.

‘15 ವರ್ಷಗಳ ಹಿಂದೆಯೇ ಹಿಂದೆ ನಿಂತೆ. ಲವ್‌ ಆಯ್ತು. ಮದುವೆನೂ ಆಯ್ತು. ನಾನು ಅವರ ಮನೆ ಸೇರಿದೆ. ಆದರೆ ನನ್ನ ಗ್ರಹಚಾರಕ್ಕೆ ಇನ್ನೊಬ್ಬಾಕೆ ಅವರ ಹಿಂದೆ ನಿಲ್ಲುವುದಕ್ಕೆ ಶುರು ಮಾಡಿದಳು. ಅದೇ ಲಾಸ್ಟು. ಅನಂತರ ಮತ್ತೆ, ಚಾಲಕನ... ಹಿಂದೆ ಅಲ್ಲ, ಅಲ್ಲ ನಮ್ಮ ಯಜಮಾನರ ಹಿಂದೆ ನಿಂತುಕೊಳ್ಳುವುದಕ್ಕೆ ಶುರು ಮಾಡಿದೆ’

ಮೊದಲ ಸಂದರ್ಶನ ಯಶಸ್ವಿಯಾದ ಸಂತಸದಲ್ಲಿ ಅರೆಮರುಳ ಮುಂದಕ್ಕೆ ಹೊರಟ. ಆಗ ಸಿಕ್ಕಿದ್ದು ಪ್ರಗತಿಪರ ಸಾಹಿತಿ ಖಂಡನಾ ಪ್ರಿಯ.

‘ನಮಸ್ಕಾರ ಸಾರ್.. ಅರೆಮರುಳ ಅಂತ ನನ್ನ ಹೆಸರು. ಪತ್ರಿಕೆಗೆ ತಮ್ಮ ಸಂದರ್ಶನ ಬೇಕಿತ್ತು’
‘ಸರಿ ಶುರು ಹಚ್ಚಿ’
ನೀವು ಇತ್ತೀಚೆಗೆ ಓದಿದ ಅತ್ಯುತ್ತಮ ಕೃತಿ ಯಾವುದು?’
‘ನನ್ನ ಕೃತಿಯೇ ಅಥವಾ ಬೇರೆಯವರದ್ದೇ?’
‘ಬೇರೆಯವರದ್ದು ಸಾರ್’

‘ಇಲ್ಲ, ನಾನು ಬೇರೆಯವರ ಕೃತಿ ಓದುವುದೇ ಇಲ್ಲ. ಬೇರೆಯವರ ಕೃತಿ ಓದುತ್ತಾ ಇದ್ದರೆ ಸಾಹಿತಿ ಹೇಗೆ ಆಗುತ್ತಾನೆ?’
­‘ಆದರೆ ನೀವು ಪುಸ್ತಕ ವಿಮರ್ಶೆ ಬರೆದಿದ್ದು ಇದೆ?’

‘ಹೌದು ಬರೆದಿದ್ದೇನೆ. ಅವುಗಳನ್ನೂ ಓದದೆ ಬರೆದಿದ್ದೇನೆ. ಅದು ನನ್ನ ಹೆಚ್ಚುಗಾರಿಕೆ!’
  ‘ಮುನ್ನುಡಿಯನ್ನೂ ಬರೆದಿದ್ದೀರಿ’

‘ಹೌದು ಬರೆದಿದ್ದೇನೆ. ಅದಕ್ಕೂ ಪುಸ್ತಕ ಓದಬೇಕಾಗಿಲ್ಲ. ಭಾಷೆಯ ಮೇಲೆ ಹಿಡಿತ ಇದ್ದರೆ ಸಾಕು, ಏನು ಬೇಕಾದರೂ ಬರೆದು ಬಿಸಾಕಬಹುದು’

‘ಇದೇನು ಸಾರ್, ಟೇಬಲ್ ಮೇಲೆ ಬರೀ ಧಾರ್ಮಿಕ ಗ್ರಂಥಗಳು, ನೀವು ಪ್ರಗತಿಪರರು. ಧಾರ್ಮಿಕ ಗ್ರಂಥಗಳ ಮೇಲೆ ಏಕಾಏಕಿ ಯಾಕೆ ಮೋಹ ಹುಟ್ಟಿತು? ವೃದ್ಧಾಪ್ಯ ಹತ್ತಿರ ಬಂತು ಎಂಬ ಆತಂಕವೇ? ಬೇರೆ ಧರ್ಮಗಳ ಗ್ರಂಥಗಳು ಇಲ್ಲಿ ಯಾಕಿಲ್ಲ ಸಾರ್? ಬರೀ ವಿಷ್ಣುಸಹಸ್ರನಾಮ, ಮನು ಶಾಸ್ತ್ರ...’

‘ಟೀಕೆ ಮಾಡುವ ಮೊದಲು ಧಾರ್ಮಿಕ ಗ್ರಂಥಗಳನ್ನು ಓದಿ ಟೀಕೆ ಮಾಡಲಿ ಎಂದು ಒಬ್ಬರು ವಾಚಕರವಾಣಿಗೆ ಪತ್ರ ಬರೆದಿದ್ದರು. ಅದಕ್ಕೆ ಗ್ರಂಥಗಳನ್ನು ಓದುತ್ತಾ ಇದ್ದೇನೆ. ನಿಮ್ಮ  ಎರಡನೆಯ ಪ್ರಶ್ನೆಗೆ ಉತ್ತರ ಎಂದರೆ ಬೇರೆ ಧರ್ಮದವರ ಗ್ರಂಥಗಳನ್ನು ಓದಿ ಟೀಕೆ ಯಾಕೆ ಮಾಡುವುದಿಲ್ಲ ಎನ್ನುವುದು. ಮಾಡಿದರೆ ಮೂಳೆ ಮುರಿತಾರೆ. ಅದಕ್ಕೆ ಸೇಫರ್ ಸೈಡ್‌ನಲ್ಲಿ ಇರುತ್ತೇನೆ’.

‘ನಿಮ್ಮ ಪುಸ್ತಕಗಳು ಯಾಕೆ ಸರ್ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಇರುತ್ತವೆ? ಹಿಂದೆ ವಯಸ್ಕರ ಶಿಕ್ಷಣಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಇದೇ ರೀತಿ ಮುದ್ರಿಸುತ್ತಿದ್ದರು. ಅವುಗಳ ಹಾಗೆ ಇವೆ?’

‘ಏಕೆಂದರೆ ಗ್ರಂಥಾಲಯಕ್ಕೆ ಖರೀದಿ ಮಾಡಬೇಕಾದರೆ ಪುಟ ಜಾಸ್ತಿ ಇರಬೇಕು. ಅದಕ್ಕೆ ಅಕ್ಷರ ದೊಡ್ಡದು ಬೇಕು. ಸಾಹಿತಿ ಆದರೆ ಸಾಲದು. ಲೋಕ ಜ್ಞಾನ ಕೂಡ ಬೇಕು. ಅದಕ್ಕೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಿ ನಾನೇ ಪ್ರಕಾಶನ ಮಾಡುತ್ತೇನೆ’       
‘ಪ್ರಶಸ್ತಿ ಕೊಟ್ಟರೆ ತೆಗೆದುಕೊಳ್ಳುವುದಿಲ್ಲ ಅಂತ ಜನ ಹೇಳ್ತಾರೆ...’

‘ಪ್ರಶಸ್ತಿ ಸ್ವೀಕರಿಸದಿರುವುದು ನನ್ನ ಪಾಲಿಸಿ. ಪ್ರಶಸ್ತಿಗೆ ಹಾತೊರೆಯುವ ವ್ಯಕ್ತಿ ನಾನಲ್ಲ. ಆದರೆ ಕೊರಿಯರ್‌ ಅಥವಾ ಮನೆಗೆ ಕೊಟ್ಟು ಕಳುಹಿಸಿದರೆ ನಾನು ಒಲ್ಲೆ ಎನ್ನುವುದಿಲ್ಲ’

‘ನಿಮ್ಮ ಬದುಕಿನ ಸಂದೇಶವೇನು ಸರ್?’

‘ಎರಡು ಮೇಲುಗಳ ಬಗ್ಗೆ ಎಚ್ಚರ ವಹಿಸಬೇಕು. ಒಂದು ಈ ಮೇಲು. ಎರಡನೆಯದು ಫೀಮೇಲು. ಈ ಮೇಲ್‌ನಲ್ಲಿ ನನಗೆ ಸಾವಿರಾರು ಡಾಲರ್ ಬಹುಮಾನ ಬಂದಿದೆ ಎಂಬ ವಿಷಯ ಕೇಳಿ ಅವರು ಹೇಳಿದ ಖಾತೆಗೆ  ಒಂದು ಲಕ್ಷ ರೂಪಾಯಿ ಜಮಾ ಮಾಡಿ ಅದನ್ನು ಕಳೆದುಕೊಂಡೆ. ಫೀಮೇಲಿನಿಂದ ಜೀವಮಾನ ಇಡೀ ಗಳಿಸಿದ್ದನ್ನೆಲ್ಲಾ ಕಳೆದುಕೊಂಡೆ. ಆದುದರಿಂದ ನಾನು ಮೋಸ ಹೋದ ಹಾಗೆ ಯಾರೂ ಮೋಸ ಹೋಗಬಾರದು’.

ಪ್ರ‘ಕ್ಯಾತ’ ಸಾಹಿತಿಯ ಸಂದರ್ಶನ ಮುಗಿಸಿ ಸುಸ್ತಾಗಿ ಹೊರಟ ಅರೆಮರುಳನಿಗೆ ಎದುರಾದುದು ದೊಡ್ಡ ಬೋರ್ಡು. ‘ಇಲ್ಲಿ ಹೊಸ ಚಿತ್ರಗಳಿಗೆ  ಅದ್ಭುತವಾದ ಹೆಸರುಗಳನ್ನು ಸೂಚಿಸಲಾಗುವುದು’.

ಒಳಹೊಕ್ಕವನಿಗೆ ಎದುರಾದುದು ಎರಡು ಕುರ್ಚಿ ಒಂದು ಮೇಜು, ಒಬ್ಬ (ಆದಿ)ಮಾನವ.

ಅರೆಮರುಳ ತನ್ನ ಭೇಟಿಯ ಉದ್ದೇಶ  ವಿವರಿಸಿದ ಬಳಿಕ ನೇರವಾಗಿ ಸಂದರ್ಶನ ಆರಂಭಿಸಿದ. ‘ಯಾವಾಗ ಸರ್ ಈ ಆಪೀಸು ಶುರು ಮಾಡಿದ್ದು? ಉದ್ದೇಶ ಏನು ಸರ್ ?’

ಬಾಣದಂತೆ ಬಂತು ಉತ್ತರ. ‘ಇವತ್ತೇ ಕಣ್ರಿ. ಈಚೆಗೆ ಚಿತ್ರಗಳಿಗೆ ಇಡುವ ಹೆಸರು ಯಾಕೋ ಹಳಸಿದ್ದು ಅನಿಸುತ್ತದೆ. ಅದಕ್ಕೆ ನಾನು ಈ ಬಿಜಿನೆಸ್ ಶುರು ಮಾಡಿದ್ದೇನೆ’

‘ಏನ್ ಸರ್ ಹಾಗೆಂದರೆ? ‘ಪ್ಯಾರ್ ಆಗ್ ಬಿಟ್ಟೈತೆ’, ‘ಗೊಂಬೆಗಳ ಲವ್’, ‘ಮೆಂಟಲ್ ಮಂಜ’, ‘ಹಾಫ್ ಮೆಂಟಲ್’, ‘ಮಂಗನ ಕೈಲಿ ಮಾಣಿಕ್ಯ’, ‘ಲೂಸುಗಳು’, ‘ಕಳ್ ಮಂಜ’, ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’ ‘ಪುಂಗಿದಾಸ’... ಒಂದೇ ಎರಡೇ ಇಂತಹ ಅದ್ಭುತ ಹೆಸರು ಇರುವ ಚಿತ್ರಗಳು ನಮ್ಮಲ್ಲೇ ತಯಾರಾಗಿರುವಾಗ ಹಳಸಿದ್ದು ಎನ್ನುತ್ತೀರಿ?’ ಆತನ ಮುಖವನ್ನೇ ನೋಡಿ ಪ್ರಶ್ನಿಸಿದ.

‘ನಿಮಗೆ ರಸಿಕತನ ಇಲ್ಲ ಕಣ್ರೀ... ನನ್ನ ಹತ್ತಿರ ಹೆಸರುಗಳ ಲಿಸ್ಟೇ ಇದೆ. ಅದನ್ನು ನೋಡಿ ನೀವೇ ಹೇಳ್ತೀರಿ ಅದ್ಭುತ, ಅದ್ಭುತ ಅಂತ... ಓದಿ ಹೇಳ್ತಿನಿ, ಸ್ವಲ್ಪ ಕೇಳಿ. ‘ಪಾಚಿಗಟ್ಟಿದ ಹಲ್ಲುಗಳು’, ‘ಚದುರಿದ ಕೂದಲು’, ‘ಅಲ್ಲಾಡುತ್ತಿರುವ ಮೋಡಗಳು’, ‘ಸೋಕಾಲ್ಡ್ ಸಾಹಿತಿ’, ‘ಐಸ್ ಕೋಲ್ಡ್ ಪತ್ರಕರ್ತ’.

ಅರೆಮರುಳ ದಂಗುಬಡಿದುಹೋದ. ಚೇತರಿಸಿಕೊಳ್ಳುವ ಮೊದಲೇ ಆಂಬುಲೆನ್ಸ್ ಬಂದು ನಿಂತಿತು. ಅದರಿಂದ ದಡಬಡ ಇಳಿದು ಬಂದ ಮೂವರು ನರ್ಸ್‌ಗಳು ಆ ಮಾನವನ ರಟ್ಟೆ ಹಿಡಿದು ಅಲ್ಲಿಯೇ ನಿಂತ ಆಂಬುಲೆನ್ಸ್ ಹತ್ತಿರ ದರದರ ಎಳೆದೊಯ್ದರು.

‘ಏನ್ರಿ ...ಏನ್ರಿ... ಇದು’ ಅರೆಮರುಳ ಗಾಬರಿಯಾಗಿ  ಕಂಗಾಲಾಗಿ ಪ್ರಶ್ನಿಸಿದ.  ‘ಹುಚ್ಚರಾಸ್ಪತ್ರೆಯಿಂದ  ತಪ್ಪಿಸಿಕೊಂಡು ಬಂದಿದ್ದಾನೆ. ಅಲ್ಲಿಗೇ ಕರೆದುಕೊಂಡು ಹೋಗುತ್ತಿದ್ದೇವೆ’  ಎಂದು ಆ ನರ್ಸ್‌ಗಳು ಹೊರಟೇಹೋದರು. ಅರೆಮರುಳ  ಸುಸ್ತಾಗಿ ಕುಸಿದು ಕೂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.