ADVERTISEMENT

ಅಸೆಂಬ್ಲೀಲಿ ಆಪರೇಷನ್ ಮಾಡ್ತಾರಾ...?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST

ವಿಜಯಪುರ: ‘ರಾಜಕಾರಣ ಮಾಡೋಕೆ ಮೆಟ್ರಿಕ್ ಮಾಡ್ದವ್ರು ಸಾಕ್ರೀ. ಡಾಕ್ಟ್ರು ಯಾಕೆ ಬೇಕ್ರೀ...’ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಖಡಕ್‌ ನುಡಿಗಳಿವು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಿಂದ ಅವರ ಮಕ್ಕಳ ಸ್ಪರ್ಧೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಮನಗೂಳಿ ಅವರು ಪ್ರತಿಕ್ರಿಯೆ ನೀಡಿದ ಪರಿಯಿದು.

‘ನಂಗೂ ಸಾಕಾಗೈತಿ. ಜನ ಕೈ ಬಿಟ್ಟಾಗೈತ್ರೀ. ಹೋರಾಟ ಮಾಡ್ದವನಿಗ ವೋಟ್‌ ಹಾಕಲಿಲ್ಲರಿ. ಇನ್ನು ದವಾಖಾನೇಲಿ ಇಂಜೆಕ್ಷನ್‌ ಮಾಡೋ ಮಗನಿಗೆ ವೋಟ್‌ ಹಾಕ್ತಾರೇನ್ರೀ. ಅವ್ನ ದುಡಿಮೆ ಚಲೋ ಐತಿ. ಮನೇಲಿ ನಡೆಯೋದು ನನ್ನ ಮಾತು. ಯಾರೂ ಇದ್ನ ಮೀರಲ್ಲ.

ರಾಜಕಾರಣದ ರಂಗು ಶಾಶ್ವತ ಅಲ್ಲಾರೀ. ಡಾಕ್ಟ್ರು ಎಲೆಕ್ಷನ್‌ಗೆ ನಿಂತು ಶಾಸಕನಾಗಿ ಆಯ್ಕೆಯಾಗಿ ತನ್ನ ಕೆರಿಯರ್‌ ಯಾಕೆ ಕೆಡಿಸಿಕೊಳ್ಳಬೇಕ್ರೀ. ನಿತ್ಯ ಕೈತುಂಬಾ ದುಡಿಮೆಯಿದೆ. ಅವ್ನು ಗೆದ್ದು ಹೋದ್ರೇನು ಅಸೆಂಬ್ಲೀನಲ್ಲೇನು ಆಪರೇಷನ್‌ ಮಾಡ್ತಾನೇನು. ಆ ದುಡಿಮೆ ಸಂಪಾದಿಸಲಿಕ್ಕ ಸಾಧ್ಯವೇನ್ರೀ?’

‘ಇಲ್ಲೇ ಚಲೋ ದುಡ್ಕೊಂಡಿರಲಿ. ಇದೆಲ್ಲ ಪಟ್ಟಿ (ದೇಣಿಗೆ) ಪಡೆಯೋಕೆ ಬರೋರ ಆಟ. ನಾನಿರೋದೊರಳಗ ನನ್ನ ಇನ್ನೊಬ್ಬ ಮಗನ್ನ ರಾಜಕೀಯದಲ್ಲಿ ಬೆಳಸ್ತೇನೆ. ಡಾಕ್ಟ್ರು ಅಲ್ಲಿಗೆ ಬ್ಯಾಡವೇ ಬ್ಯಾಡ’ ಎಂದು ಕಡ್ಡಿ ಮುರಿದಂತೆ ವಾಸ್ತವ ಚಿತ್ರಣ ಬಿಚ್ಚಿಟ್ಟಾಗ, ಬೆಚ್ಚಿ ಬೀಳುವ ಸರದಿ ವೈದ್ಯರ ಪರ ಲಾಬಿ ನಡೆಸುತ್ತಿದ್ದ ಪ್ರಮುಖರದ್ದು. 

*
ಒಂದು ಕಾಡಾನೆ ಹಿಡಿಯಲು ₹ 13 ಲಕ್ಷ!
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಣಕಲ್‌ನಲ್ಲಿ ಎರಡು ಜೀವಗಳನ್ನು ಬಲಿ ಪಡೆದ ಕಾಡಾನೆ ಉಪಟಳ ಜಿಲ್ಲಾ ಕೆಡಿಪಿ ಸಭೆಯಲ್ಲಿ ಗಹನ ಚರ್ಚೆಗೆ ಕಾರಣವಾಯಿತು. ‘ಚುನಾವಣೆ ದಿನವೇ ಕ್ಷೇತ್ರದ ಒಬ್ಬ ಮತದಾರನನ್ನು ಆನೆ ತುಳಿದು ಸಾಯಿಸಿತು. ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಆನೆ ಹಿಡಿಸಿ’ ಎಂದು ಶಾಸಕ ಬಿ.ಬಿ.ನಿಂಗಯ್ಯ ಅಲವತ್ತುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್‌ ‘ಯಾಕ್ರೀ ಇನ್ನೂ ಆನೆ ಹಿಡಿಸಿಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ‘ಸರ್‌ ಆನೆ ಹಿಡಿಯಲು ಸರ್ಕಾರದಿಂದ ಅನುದಾನ ಬಂದಿಲ್ಲ’ ಎಂದು ಡಿಸಿಎಫ್‌ ಚಂದ್ರಣ್ಣ ಉತ್ತರ ಕೊಟ್ಟರು. ‘ಅಲ್ರಿ ಆನೆ ಹಿಡಿಯಲು ಸರ್ಕಾರದ ಅನುಮತಿ ಬೇಕು, ಅನುದಾನವೂ ಬೇಕೇನ್ರಿ? ಇದು ಹೊಸ ವಿಚಾರ. ಮಹಾ ಅಂದ್ರೆ ಎಷ್ಟು ಖರ್ಚಾದೀತು?’ ಎಂದು ಸಚಿವರು ಪ್ರಶ್ನಿಸಿದರು.

ಆನೆ ಹಿಡಿಯಲು ₹ 13 ಲಕ್ಷ ಅನುದಾನ ಬೇಕು ಎಂದು ಅಧಿಕಾರಿ ಹೇಳಿದಾಗ ಸಭೆಯಲ್ಲಿದ್ದವರೆಲ್ಲ ಹೌಹಾರಿದರು! ‘ಒಂದು ಆನೆ ಹಿಡಿಯಲು ಅಷ್ಟೊಂದು ಹಣ ಖರ್ಚಾಗುತ್ತೇನ್ರಿ? ಸ್ವಲ್ಪ ವಿವರಿಸಿ, ಬೇರೆ ಕಡೆ ಇಂತಹ ಸಮಸ್ಯೆ ಉದ್ಭವಿಸಿದಾಗ ನಿಮ್ಮನ್ನೇ ಕರಿತೀವಿ’ ಎಂದು ಸಚಿವರು ಮಾತಿನಲ್ಲಿ ತಿವಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜು ‘ಸರ್‌ ಅಷ್ಟೂ ಹಣ ನಮ್ಮ ಜಿಲ್ಲಾ ಪಂಚಾಯಿತಿಗೆ ಕೊಡ್ಸಿ, ನಾವೇ ಆನೆಯನ್ನು ಫ್ರೀಯಾಗಿ ಹಿಡಿಸ್ತೀವಿ’ ಎಂದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು. ಶಾಸಕ ಜೀವರಾಜ್‌, ಕಾಡಾನೆ ಹೆಸರಿನಲ್ಲಿ ಇಲಾಖೆಯ ‘ಬಿಳಿ ಆನೆ’ಗಳು ದುಂಡಗಾಗಬೇಕಿದೆ.

ADVERTISEMENT

ಅದಕ್ಕೆ ಅಷ್ಟೊಂದು ಖರ್ಚು’ ಎಂದಾಗ ಸಚಿವರಿಗೂ ವಾಸ್ತವದ ಅರಿವಾಯಿತು. ಏನಾದ್ರೂ ಮಾಡಿ ಫೆಬ್ರುವರಿ ಅಂತ್ಯದೊಳಗೆ ಆನೆಯನ್ನು ಸೆರೆ ಹಿಡಿದು, ಸಮಸ್ಯೆಗೆ ಅಂತ್ಯ ಕಾಣಿಸುವಂತೆ ಅರಣ್ಯ ಇಲಾಖೆಗೆ ಹುಕುಂ ನೀಡಿದರು.
-ಡಿ.ಬಿ.ನಾಗರಾಜ, ಕೆ.ಎಂ.ಸಂತೋಷ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.