ADVERTISEMENT

‘ಇದೊಂದು ವಿಷ್ಯ ನಂಗ್ ಗೊತ್ತಾಗಲ್ಲ’

ವಿಜಯಕುಮಾರ್ ಸಿಗರನಹಳ್ಳಿ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST

ಬೆಂಗಳೂರು: ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ  ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಸಮ್ಮೇಳನದ ಕುರಿತು ಮಾಹಿತಿ ನೀಡುವ ಮಾಧ್ಯಮಗೋಷ್ಠಿಯದು. ಮೊದಲೇ ಸಿದ್ಧಪಡಿಸಿದ್ದ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓದಿದರು.

ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಪಕ್ಕದಲ್ಲೇ ಕುಳಿತಿದ್ದರು.

ಸಮ್ಮೇಳನದ ಉದ್ದೇಶ, ಪರಿಣಾಮ,  ಭಾಗವಹಿಸುವ ಅತಿಥಿಗಳ ವಿವರಗಳನ್ನು ಮುಖ್ಯಮಂತ್ರಿ ವಿವರಿಸಿದರು. ಕೊನೆಯ ಎರಡು ಸಾಲಿನಲ್ಲಿ ಸಮ್ಮೇಳನಕ್ಕಾಗಿಯೇ ತೆರೆದಿರುವ ವೆಬ್‌ಸೈಟ್‌, ಫೇಸ್‌ಬುಕ್ ಖಾತೆ, ಟ್ವಿಟರ್ ಖಾತೆಗಳ ವಿವರ ಇತ್ತು. ಸಮ್ಮೇಳನದಲ್ಲಿ ಭಾಗವಹಿಸುವವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂಬ ಮಾಹಿತಿ ಇತ್ತು.

ADVERTISEMENT

ಅದನ್ನು ಓದುವ ಸರದಿ ಬಂದಾಗ ಸಿದ್ದರಾಮಯ್ಯ, ‘ಇದೇನ್ ನೀನೇ ಹೇಳಪ್ಪ’ ಎಂದು ಪ್ರಿಯಾಂಕ್‌ ಖರ್ಗೆ ಕೈಗೆ  ಪತ್ರಿಕಾ ಹೇಳಿಕೆಯ ಪ್ರತಿ ನೀಡಲು  ಮುಂದಾದರು. ‘ನೀವೇ ಹೇಳಿ ಸರ್‌, ಹೆಚ್ಚು ಜನರಿಗೆ ರೀಚ್ ಆಗುತ್ತೆ’ ಎಂದು ಪ್ರಿಯಾಂಕ್‌ ಮರು ಉತ್ತರಿಸಿದರು.

‘ರಿಜಿಸ್ಟರ್‌ ಅಟ್ ಕ್ವೆಸ್ಟ್‌ ಫಾರ್‌ ಇಕ್ವಿಟಿ’ ಎಂದು ಓದಿದವರು ನಂತರ ತಡವರಿಸಿ ‘ಏನಯ್ಯ ಇದು’ ಎಂದರು. ‘ಡಾಟ್‌ ಓಆರ್‌ಜಿ ಅಂತ ವೆಬ್‌ಸೈಟ್ ಸರ್’ ಎಂದು ಅಕ್ಕಪಕ್ಕ ಇದ್ದವರು ಹೇಳಿಕೊಟ್ಟರು.‘ವೆಬ್‌ಸೈಟಾ...’ ಎಂದು ಕಷ್ಟಪಟ್ಟು ‘ಡಾಟ್‌ ಓಆರ್‌ಜಿ’ ಎಂದು ಹೇಳಿದ ಸಿದ್ದರಾಮಯ್ಯ, ನನಗೆ ಉಳಿದಿದ್ದೆಲ್ಲ ಗೊತ್ತಾಗುತ್ತದೆ. ಇದೊಂದ್ ವಿಷ್ಯ ಮಾತ್ರ ಗೊತ್ತಾಗಲ್ಲ ನೋಡಿ, ಅದ್ಕೆ ಓದಪ್ಪ ಅಂತ ಖರ್ಗೆಗೆ ಹೇಳಿದ್ರೆ, ಅವ್ನು ನಂಗೆ ಕೊಟ್ಟ’ ಎಂದು ನಕ್ಕರು. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.