ADVERTISEMENT

ಈಸಬೇಕು ಇದ್ದು ಜಯಿಸಬೇಕು...

ವಿಶಾಖ ಎನ್.
Published 19 ಮೇ 2017, 19:30 IST
Last Updated 19 ಮೇ 2017, 19:30 IST
ಈಸಬೇಕು ಇದ್ದು      ಜಯಿಸಬೇಕು...
ಈಸಬೇಕು ಇದ್ದು ಜಯಿಸಬೇಕು...   

‘ನನ್ನ ಸಿನಿಮಾ ನಾಯಕಿ ಇಷ್ಟು ಸಣ್ಣಗಿದ್ದರೆ ಕಷ್ಟ. ತಗೊ… ತಿನ್ನು’ ಎಂದು ಕ್ಯಾರೆಟ್ ಹಲ್ವಾ ಬಟ್ಟಲನ್ನು ಕೊಟ್ಟರು ಹಿಂದಿ ಸಿನಿಮಾ ನಿರ್ದೇಶಕ ರಾಕೇಶ್ ಮೆಹ್ರಾ. ಬಟ್ಟಲುಕಂಗಳ ಹುಡುಗಿ ಸೋನಂ ಕಪೂರ್ ಆಗಿನ್ನೂ 21ರ ಹುಡುಗಿ. ‘ಮತ್ತೆ ದಪ್ಪ ಆಗಬೇಕಾ?’ ಮುಖವನ್ನೆಲ್ಲ ಕಿವುಚಿ ಪ್ರತಿಕ್ರಿಯಿಸಿದ್ದಳು.

ನೂರು ಕೆ.ಜಿ.ತೂಕ ದಾಟಿದ್ದ ದೇಹವನ್ನು ಸಪೂರ ಆಗಿಸಿಕೊಂಡು ನಾಯಕಿಯಾದವಳು ಸೋನಂ. ಮೊದಲ ಚಿತ್ರ ‘ಸಾವರಿಯಾ’ದಲ್ಲಿ ಅವಳ ಸಪಾಟಾದ ಹೊಟ್ಟೆ ನೋಡಿದ್ದ ಆಪ್ತೇಷ್ಟರು ಚಕಿತರಾಗಿದ್ದರು. ಬಿರುನಡೆ, ಯೋಗ, ವ್ಯಾಯಾಮ, ಪಥ್ಯಾಹಾರ ಎಲ್ಲ ಮಾಡಿ ಹುಡುಗಿ ಸಣ್ಣಗಾಗಿದ್ದಳು.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅಂದುಕೊಂಡ ಮಟ್ಟಕ್ಕೆ ಬರದಿದ್ದರೆ ಯಾವ ‘ಟೇಕ್’ ಕೂಡ ಓಕೆ ಆಗಲು ಬಿಡುತ್ತಿರಲಿಲ್ಲ.  ಮೊದಲ ಸಿನಿಮಾದ ಸಿದ್ಧತೆ ದೇಹ ಹಾಗೂ ಮನಸ್ಸನ್ನು ಮರುರೂಪಿಸಿತ್ತು. ಅದು ತೆರೆಕಂಡು, ಸೋಲುಂಡಾಗ ಸೋನಂ ಅಳುತ್ತಾ ಕೂರಲಿಲ್ಲ. ಅಷ್ಟು ಹೊತ್ತಿಗೆ ಮೆಹ್ರಾ ‘ಡೆಲ್ಲಿ 6’ ಚಿತ್ರದ ಸ್ಕ್ರಿಪ್ಟ್ ಕೈಗಿತ್ತು ಆಗಿತ್ತು.

ADVERTISEMENT

ಮೊದಲು ಸಣ್ಣಗಾಗು ಎಂದಿದ್ದರು. ಈಗ ಸ್ವಲ್ಪ ದಪ್ಪಗಾಗಬೇಕು ಎನ್ನುತ್ತಾರೆ ಎಂದು ಅಮ್ಮನ ತೊಡೆಮೇಲೆ ಮಲಗಿ ಸೋನಂ ಅಲವತ್ತುಕೊಂಡಿದ್ದಳು. ತನ್ನನ್ನು ‘ಮಜ್ದೂರ್’ ಎಂದೇ ಕರೆದುಕೊಳ್ಳುವ ಅಪ್ಪ ಅನಿಲ್ ಕಪೂರ್ ಮಗಳ ಕಡೆ ನೋಡಿ ತುಂಟ ನಗೆ ನಕ್ಕರು. ಸಿನಿಮಾದಲ್ಲಿ ಏಗಬೇಕೆಂದರೆ ಇವೆಲ್ಲ ಅನಿವಾರ್ಯ ಎಂದು ಅವರು ಮಗಳಿಗೆ ಪುನರುಚ್ಚರಿಸಿದ್ದರು.

ಸೋನಂ ನಟನಾಲೋಕಕ್ಕೆ ಕಾಲಿಟ್ಟು ಹತ್ತು ವರ್ಷಗಳಾದುವು. ‘ರಾಂಝಣಾ’ ಸಿನಿಮಾ ನೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಪಾದನೆ ಮಾಡಿದ ಮೇಲೆ ಅನೇಕರು ಈ ನಟೀಮಣಿಯತ್ತ ಬೆರಗುಗಣ್ಣಿನಿಂದ ನೋಡಿದರು. ಹತ್ತು ವರ್ಷಗಳಲ್ಲಿ ಸೋನಂ ಖಾಲಿ ಕುಳಿತದ್ದೇ ಇಲ್ಲ.

ಒಂದಲ್ಲ ಒಂದು ಸಿನಿಮಾ ಅವಕಾಶ ಹುಡುಕಿಕೊಂಡು ಬರುತ್ತಲೇ ಇತ್ತು. ‘ಪ್ರೇಮ್ ರತನ್ ಧನ್ ಪಾಯೊ’, ‘ಭಾಗ್ ಮಿಲ್ಖಾ ಭಾಗ್’ನಂಥ ದೊಡ್ಡ ಬಜೆಟ್ ನ ಚಿತ್ರಗಳ ಭಾಗವಾದ ಸೋನಂ, ಸ್ಟಾರ್ ನಟಿಯೇನೂ ಆಗಲಿಲ್ಲ. ಆದರೆ, ಹತ್ತು ಸಲ ಅವರು ದೇಹದ ತೂಕ ಹೆಚ್ಚಿಸಿಕೊಳ್ಳುವ ಹಾಗೂ ಕಡಿಮೆ ಮಾಡಿಕೊಳ್ಳುವ ಉಸಾಬರಿ ಎದುರಿಸಿದ್ದಾರೆ. 

‘ನನ್ನ ಸಿನಿಮಾ ಎಷ್ಟು ಹಣ ಮಾಡುತ್ತದೆ ಎನ್ನುವುದನ್ನು ಮಾರುಕಟ್ಟೆ ಪಂಡಿತರೇ ಹೇಳುತ್ತಾರೆ. ಹೆಚ್ಚೆಂದರೆ ಹದಿನೈದು ಕೋಟಿ ಬಜೆಟ್ ಸಿನಿಮಾ ನನ್ನದು. ಅದಕ್ಕಿಂತ ಹೆಚ್ಚು ಹಣ ತರಬಲ್ಲ ನಟಿ ನಾನೆಂದು ಕೆಲವರು ವಿಶ್ಲೇಷಣೆಗಳನ್ನೂ ಬರೆದಿದ್ದಾರೆ. ಆದರೂ ಇಲ್ಲಿ ನನ್ನ ಶೇರ್ ಸಿಗುತ್ತಿಲ್ಲ. ಎಷ್ಟೋ ಸಿನಿಮಾಗಳಿಗೆಂದೇ ಸಂಭಾವನೆ ಕಡಿಮೆ ಮಾಡಿಕೊಂಡಿದ್ದೇನೆ. ಈಗಲೂ ಅದು ಅನಿವಾರ್ಯ.

ಚಿತ್ರರಂಗ ಎಷ್ಟು ಪುರುಷ ಪ್ರಧಾನ, ಸೆಕ್ಸಿಸ್ಟ್ ಆಗಿಬಿಟ್ಟಿದೆ ಎಂದರೆ ನಾವೆಲ್ಲಾ ಹಾಲಿವುಡ್ ನಟಿಯರಂತೆ ಬೆಳೆಯುವುದು ಯಾವಾಗ ಎಂದು ಪದೇ ಪದೇ ಅಂದುಕೊಳ್ಳುತ್ತಲೇ ಇರುತ್ತೇನೆ. ಕೆಲವು ನಿರ್ಮಾಪಕರಲ್ಲಿ ಈ ಪ್ರಶ್ನೆ ಕೇಳಿ ಕೆಟ್ಟವಳೂ ಆಗಿದ್ದೇನೆ. ನೇರವಾಗಿ ಮಾತಾಡು ಎಂದು ಅಪ್ಪ ಹೇಳಿಕೊಟ್ಟಿದ್ದರು. ಅದನ್ನೇ ನಾನು ಪಾಲಿಸುತ್ತಿರುವೆ. ಅಪ್ಪ ಹೇಳಿದ್ದು ನಿಜ, ಇಲ್ಲಿ ನಾವೆಲ್ಲಾ ಮಜ್ದೂರ್ ಗಳೇ’- ಈ ಮಾತು ಸೋನಂ ಸಾಗಿಬಂದ ಹಾದಿ, ಏಗುತ್ತಿರುವ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಗೆಲುವು ಒಲಿದಾಗ ಅತಿಯಾಗಿ ಬೀಗದೆ, ಸೋಲುಂಡಾಗ ಮುಂದಿನ ಚಿತ್ರವಾದರೂ ಗೆಲ್ಲಲಿ ಎಂದು ಆಶಾವಾದಿಯಾಗುವ ನಟಿ ಆಗೀಗ ಭಗವದ್ಗೀತೆಯ ಶ್ಲೋಕಗಳನ್ನೂ ಹೇಳುತ್ತಾರೆ. ‘ಕರ್ಮಣ್ಯೇವಾಧಿಕಾರಸ್ಥೆ ಮಾ ಫಲೇಷು ಕದಾಚನ’ ಅವುಗಳಲ್ಲಿ ಒಂದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.