ADVERTISEMENT

ಐಎನ್‌ಎ ಕಟ್ಟಿದ ಪ್ರಕ್ರಿಯೆ

ನಿಗೂಢ ನೇತಾಜಿ-13

ಚೂಡಿ ಶಿವರಾಂ
Published 12 ಡಿಸೆಂಬರ್ 2015, 19:36 IST
Last Updated 12 ಡಿಸೆಂಬರ್ 2015, 19:36 IST

ನೇತಾಜಿ ಜರ್ಮನಿಯನ್ನು ತಲುಪಿದ ಸಂದರ್ಭದಲ್ಲಿ ಆಗ್ನೇಯ ಏಷ್ಯಾದಲ್ಲಿದ್ದ ಭಾರತೀಯರ ಪಾಲಿಗೆ ಅವರು ದೇವದೂತನ ರೀತಿ ಕಂಡರು. ಅವರ ಮಾತು ಆಲಿಸಲು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೈಜೋಡಿಸಲು ಅಲ್ಲಿನ ಜನ ತುದಿಗಾಲಲ್ಲಿ ನಿಂತಿದ್ದರು.

ನೇತಾಜಿ ಸಮಯ ವ್ಯರ್ಥ ಮಾಡದೆ ಸರಣಿ ಸಭೆಗಳು, ಸುದ್ದಿ ಗೋಷ್ಠಿಗಳು,ರೇಡಿಯೊ ಕಾರ್ಯಕ್ರಮಗಳು, ಉಪನ್ಯಾಸಗಳ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದರು. 1943ರ ಜೂನ್‌ 19ರಂದು ಆಗ್ನೇಯ ಏಷ್ಯಾದಲ್ಲಿ ತಾನು ಹಾಜರಿರುವುದನ್ನು ಒಂದು ಸುದ್ದಿಗೋಷ್ಠಿಯಲ್ಲಿ ಖಾತರಿಪಡಿಸಿದ ನೇತಾಜಿ, ಬ್ರಿಟಿಷರ ವಿರುದ್ಧ ಹೋರಾಡುವ ಕಾರ್ಯ ಯೋಜನೆಯನ್ನೂ ಅನಾವರಣಗೊಳಿಸಿದರು.

ಭಾರತದಲ್ಲಿನ ಹಾಗೂ ವಿದೇಶಗಳಲ್ಲಿನ ರಾಷ್ಟ್ರೀಯತಾ ಶಕ್ತಿಗಳನ್ನು ಒಗ್ಗೂಡಿಸಿದರೆ ಬ್ರಿಟಿಷರನ್ನು ಹೊರದೂಡುವಷ್ಟು ಕಸುವು ಹೋರಾಟಕ್ಕೆ ದಕ್ಕುತ್ತದೆ ಎನ್ನುವುದು ನೇತಾಜಿ ಉದ್ದೇಶವಾಗಿತ್ತು. ‘ಭಾರತದ ಒಳಗಿನಿಂದ, ಹೊರಗಿನಿಂದ ಬ್ರಿಟಿಷ್‌ ಸರ್ಕಾರದ ಮೇಲೆ ದಾಳಿ ನಡೆಸಿದರೆ ಅದು ಕುಸಿಯುತ್ತದೆ. ಆಗ ಭಾರತದ ಜನರಿಗೆ ಸ್ವಾತಂತ್ರ್ಯ ಲಭಿಸುತ್ತದೆ’ ಎನ್ನುವುದು ಅವರ ಕಾರ್ಯತಂತ್ರವಾಗಿತ್ತು.

1943ರ ಜೂನ್‌ 27ರಂದು ರಾಸ್‌ ಬಿಹಾರಿ ಬೋಸ್‌ ಅವರ ಜೊತೆ ನೇತಾಜಿ ಟೋಕಿಯೊದಿಂದ ಸಿಂಗಾಪುರ ತಲುಪಿದಾಗ ಅಲ್ಲಿದ್ದ ಭಾರತೀಯರಿಂದ ಐತಿಹಾಸಿಕ ಸ್ವಾಗತ ಸಿಕ್ಕಿತು. ನೇತಾಜಿ ಅವರಿಗಿದ್ದ ಆಕರ್ಷಣ ಶಕ್ತಿಯಿಂದ ಆಗ್ನೇಯ ಏಷ್ಯಾದಲ್ಲಿ ಸ್ವಾತಂತ್ರ್ಯ ಚಳವಳಿ ಚುರುಕಾಯಿತು.

‘ನನಗೆ ರಕ್ತ ಕೊಡಿ, ನಾನು ಸ್ವಾತಂತ್ರ್ಯ ಕೊಡಿಸುತ್ತೇನೆ’ ಎಂಬ ಅವರ ಮಾತನ್ನು ಕೇಳಿ ಜನ ರಾಷ್ಟ್ರೀಯತೆಯ ವಿಷಯದಲ್ಲಿ ಭಾವಾವಿಷ್ಟರಾದದ್ದೇ ಅಲ್ಲದೆ, ದೇಶಸೇವೆಗಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಮುಂದೆ ಬಂದರು. ‘ಕೃಷ್ಣನ  ಕೊಳಲಿನ ಕರೆ’ಯಷ್ಟೇ ಮಾಂತ್ರಿಕ ಶಕ್ತಿ ನೇತಾಜಿ ಅವರ ಕರೆಗೆ ಇತ್ತು.

ಜನರನ್ನು ಹುರಿದುಂಬಿಸಲು ನೇತಾಜಿ ಕೆಲವು ಉದಾಹರಣೆಗಳನ್ನು ಕೊಟ್ಟರು: ‘‘ಅಮೆರಿಕದ ಜಾರ್ಜ್‌ ವಾಷಿಂಗ್ಟನ್‌ ತನ್ನ ಸೇನಾಬಲದಿಂದಾಗಿ ಸ್ವಾತಂತ್ರ್ಯ ದಕ್ಕಿಸಿಕೊಟ್ಟರು. ಇಟಲಿಗೆ ಸ್ವಾತಂತ್ರ್ಯ ದೊರೆಯುವಂತೆ ಗ್ಯಾರಿಬಾಲ್ಡಿ ಹೋರಾಡಲು ಬಲ ನೀಡಿದವರೂ ಅವರ ಹಿಂದೆ ಇದ್ದ ಸಶಸ್ತ್ರಧಾರಿ ಸ್ವಯಂ ಸೇವಕರು. ಇದು ನಿಮಗೆ ಸಿಕ್ಕಿರುವ ವಿಶೇಷ ಅವಕಾಶ. ಮೊದಲಿಗರಾಗಿ ಮುನ್ನುಗ್ಗಿ, ಭಾರತದ ರಾಷ್ಟ್ರೀಯ ಸೇನೆ ಕಟ್ಟಬೇಕು. ನನ್ನ ಯೋಧರೇ, ‘ದೆಹಲಿಯತ್ತ ಚಿತ್ತ... ದೆಹಲಿಯತ್ತ ಚಿತ್ತ’ ಎನ್ನುವುದು ನಿಮ್ಮ ಯುದ್ಧಮಂತ್ರವಾಗಬೇಕು’’. ಭಾರತದ ವಿಷಯದಲ್ಲಿ ಜಪಾನ್‌ ಪ್ರಧಾನಿ ತೊಜೊ ಸಹಾನುಭೂತಿ ತೋರಿದ್ದೇ ಅಲ್ಲದೆ ಸುಭಾಷ್‌ ಹೋರಾಟಕ್ಕೆ ಸಕಲ ರೀತಿಯ ಬೆಂಬಲ ಸೂಚಿಸಿದರು. ‘ಭಾರತವು ಭಾರತೀಯರಿಗೆ’ ಎಂದೂ ಅವರು ಆಗ ಹೇಳಿದರು.

1943ರ ಜುಲೈ 5ರಂದು ನೇತಾಜಿ ‘ಇಂಡಿಯನ್‌ ನ್ಯಾಷನಲ್‌ ಆರ್ಮಿ’ಯ (ಐಎನ್‌ಎ) ಕಮಾಂಡ್‌ ಆಗಿ ಅಧಿಕಾರ ಸ್ವೀಕರಿಸಿದರು. ಆ ಹೊತ್ತಿಗಾಗಲೇ ಐಎನ್‌ಎ ‘ಆಜಾದ್‌ ಹಿಂದ್‌ ಫೌಜ್‌’ ಎಂದೇ ಜನಜನಿತವಾಗಿತ್ತು. ತುಕಡಿಯನ್ನು ಪರಿಶೀಲಿಸುತ್ತಾ ನೇತಾಜಿ ಆಗ ಹೀಗೆ ಹೇಳಿದ್ದರು: ‘ಈ ಯುದ್ಧದಲ್ಲಿ ನಾವು ಎಷ್ಟು ಮಂದಿ ಬದುಕುತ್ತೇವೆಯೋ ಇಲ್ಲವೋ ತಿಳಿಯದು. ಅಂತಿಮವಾಗಿ ನಾವು ಗೆಲ್ಲಲೇಬೇಕು ಹಾಗೂ ದೆಹಲಿ ಕೆಂಪುಕೋಟೆಯಲ್ಲಿ ಬ್ರಿಟಿಷ್‌ ಚಕ್ರಾಧಿಪತ್ಯದ ಗೋರಿಯ ಮೇಲೆ ಹೋರಾಟದ ನಂತರವೂ ಬದುಕಿ ಉಳಿಯುವ ಯೋಧರು ಕವಾಯತು ಮಾಡಬೇಕು ಎನ್ನುವುದಷ್ಟೆ ನನ್ನ ಕನಸು’.

ನಿರೀಕ್ಷಿಸಿದಷ್ಟು ಐಎನ್‌ಎ ಬಲಗೊಳ್ಳಲಿಲ್ಲ. ಅದನ್ನು ವಿಸ್ತರಿಸುವ ಅಗತ್ಯವಿತ್ತು. ಯುದ್ಧದ ಆ ಸಂದರ್ಭವೇ ಸ್ವಾತಂತ್ರ್ಯ ದಕ್ಕಿಸಿಕೊಳ್ಳಲು ಉತ್ತಮ ಅವಕಾಶವೆನ್ನುವುದು ನೇತಾಜಿ ಅವರಿಗೆ ಸ್ಪಷ್ಟವಿತ್ತು. ಜರ್ಮನ್‌ ನೇತೃತ್ವದ ಮೈತ್ರಿ ಶಕ್ತಿಗಳು ಬ್ರಿಟಿಷರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಸಿಂಗಾಪುರದಿಂದ ಬ್ರಿಟಿಷರನ್ನು ಜಪಾನ್‌ ಹೊರಗೆ ಓಡಿಸಿತ್ತು.

ನೈತಿಕ ಹಾಗೂ ಹಣಕಾಸಿನ ಬೆಂಬಲ ಪಡೆಯಲು ನೇತಾಜಿ 17 ದಿನಗಳ ಕಾಲ ಆಗ್ನೇಯ ಏಷ್ಯಾದ ವಿವಿಧ ದೇಶಗಳಲ್ಲಿ ಪ್ರವಾಸ ಮಾಡಿದರು. ಥಾಯ್ಲೆಂಡ್‌ನ ಆಗಿನ ಪ್ರಧಾನಿ ಪಿಲ್‌ಬುಲ್‌ಸೊಂಗ್ರಮ್ ಅವರನ್ನು ಬ್ಯಾಂಕಾಕ್‌ನಲ್ಲಿ ಭೇಟಿ ಮಾಡಿ, ಅವರ ಬೆಂಬಲ ಗಿಟ್ಟಿಸಿದರು. ನೇತಾಜಿ ಎಲ್ಲಿಗೆ ಹೋದರೂ ಅಲ್ಲಿದ್ದ ಭಾರತೀಯರಿಂದ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿತ್ತು. ಪ್ರತಿ ಕುಟುಂಬದಿಂದ ಒಬ್ಬ ಸದಸ್ಯನನ್ನು ಸ್ವಾತಂತ್ರ್ಯ ಹೋರಾಟಕ್ಕೆ ಕಳುಹಿಸಿಕೊಡುವಂತೆ ಅವರು ಮನವಿ ಮಾಡಿದರು. ಆದರೆ, ಬಹುತೇಕ ಕುಟುಂಬಗಳ ಎಲ್ಲರೂ ಹೋರಾಟಕ್ಕೆ ಸ್ವಪ್ರೇರಣೆಯಿಂದ ಮುಂದೆ ಬಂದು, ಐಎನ್‌ಎ ಸೇರಿದರು. ಆಗ್ನೇಯ ಏಷ್ಯಾದ ನಗರಗಳು ಹಾಗೂ ಪಟ್ಟಣಗಳಲ್ಲಿಯೂ ಇದೇ ಪ್ರತಿಕ್ರಿಯೆ ಸಿಕ್ಕಿತು. ಸಾವಿರಾರು ಜನರ ಎದುರು ನೇತಾಜಿ ನಿಂತು ಸ್ವಾತಂತ್ರ್ಯ ಯಾಕೆ ಬೇಕು ಎಂದು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಅವರ ಮಾತು ಮುಗಿಯುವಷ್ಟರಲ್ಲಿ ಜನಬೆಂಬಲ ಸಿಕ್ಕೇ ಸಿಗುತ್ತಿತ್ತು.

ನೇತಾಜಿ ಕರೆಗೆ ಓಗೊಟ್ಟು ವರ್ತಕರು, ವಾಣಿಜ್ಯೋದ್ಯಮಿಗಳು ಹಾಗೂ ಮಹಿಳೆಯರು ತಮ್ಮ ಆಸ್ತಿ ಹಾಗೂ ಒಡವೆಗಳನ್ನು ಕೊಡಲು ಮುಂದೆ ಬಂದರು. ಸ್ಯೋನನ್‌ನಲ್ಲಿ 1943ರ ಅಕ್ಟೋಬರ್ 24ರಂದು ನೇತಾಜಿ 50,000 ಭಾರತೀಯರ ಎದುರು ಭಾಷಣ ಮಾಡಿ, ವಿದೇಶದಲ್ಲಿ ರಚಿತವಾಗಿದ್ದ ಆಜಾದ್ ಹಿಂದ್‌ನ ಹಂಗಾಮಿ ಸರ್ಕಾರವು ಬ್ರಿಟನ್ ಹಾಗೂ ಅಮೆರಿಕ ವಿರುದ್ಧ ಯುದ್ಧ ಘೋಷಿಸಿರುವುದಾಗಿ ತಿಳಿಸಿದರು. ಜನಬೆಂಬಲವಷ್ಟೇ ಅಲ್ಲದೆ ಧನಬೆಂಬಲ ಹಾಗೂ ಅಗತ್ಯ ವಸ್ತುಗಳ ನೆರವಿಗಾಗಿ ಅವರು ಯಾಚಿಸಿದರು. 50,000 ಮಂದಿ ಒಕ್ಕೊರಲಿನಿಂದ ಬೆಂಬಲ ಸೂಚಿಸಿ 15 ನಿಮಿಷಗಳಷ್ಟು ಕಾಲ ಘೋಷಣೆಗಳನ್ನು ಕೂಗಿದರು.

ನೇತಾಜಿ ಅವರಿಗೆ ತಮ್ಮ ಬೆಂಬಲವಿದೆ ಎಂದು ಎಲ್ಲರೂ ಕೈಗಳನ್ನು ಮೇಲೆತ್ತಿದರು. ಪುರುಷರು, ಮಹಿಳೆಯರಷ್ಟೇ ಅಲ್ಲದೆ ಮಕ್ಕಳೂ ಭಾವಾವೇಶದಿಂದ ಹೋರಾಟಕ್ಕೆ ಧುಮುಕಿದರು. ಹಣ ಹಾಗೂ ವಸ್ತುಗಳು ಹರಿದುಬಂದವು. ಮಹಿಳೆಯರು  ಒಡವೆಗಳನ್ನು ತಂದು ನೇತಾಜಿ ಅವರ ಪದತಲದಲ್ಲಿ ಇಟ್ಟರು. ‘ದೋಭಿಯೊಬ್ಬ ತನ್ನ ಸಂಪಾದನೆಯನ್ನೆಲ್ಲಾ ನೇತಾಜಿ ಅವರಿಗೆ ಕೊಟ್ಟ. ಜೀವಮಾನವಿಡೀ ಕೂಡಿಟ್ಟಿದ್ದ 200 ಡಾಲರ್ ಹಣವನ್ನು ಕ್ಷೌರಿಕನೊಬ್ಬ ನೀಡಿದ. ಜನರು ತಮ್ಮ ದನಕರುಗಳು, ಜಮೀನುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಸ್ವಾತಂತ್ರ್ಯ ಹೋರಾಟಕ್ಕೆಂದು ಮುಕ್ತ ಮನಸ್ಸಿನಿಂದ ಕೊಟ್ಟರು. ನೇತಾಜಿ ತನ್ನ ಭಾಷಣ ಮುಗಿಸುವ ಮೊದಲೇ ಜನರು ತಮಗೆ ಏನೆಲ್ಲಾ ಕೊಡಲು ಸಾಧ್ಯವೋ ಅವನ್ನೆಲ್ಲಾ ವೇದಿಕೆ ಎದುರು ತಂದಿಡುತ್ತಿದ್ದರು’ ಎಂದು ಐಎನ್‌ಎ ಯೋಧರಾಗಿ ಸೇವೆ ಸಲ್ಲಿಸಿದ್ದ ಆರ್.ಪಿ. ಮಾಧವನ್ ನೆನಪಿಸಿಕೊಳ್ಳುತ್ತಾರೆ.

ನೇತಾಜಿ ವಾಸ್ತವವಾದಿಯಾಗಿದ್ದವರು. ವ್ಯಾವಹಾರಿಕವೂ ಹಟವಾದವೂ ಆದ ದೃಷ್ಟಿಕೋನ ಅವರದ್ದು. 1943ರ ಜುಲೈ 5ರಂದು ಸಿಂಗಾಪುರದಲ್ಲಿ ಭಾಷಣ ಮಾಡುತ್ತಾ ನೇತಾಜಿ ಹೀಗೆ ಘೋಷಿಸಿದರು: ‘ಸದ್ಯಕ್ಕೆ ನಾನು ನಿಮಗೆ ಹಸಿವು, ಬಾಯಾರಿಕೆ, ಬಡತನ, ಒತ್ತಾಯದ ಕವಾಯತುಗಳು ಹಾಗೂ ಸಾವಿನ ಹೊರತು ಏನನ್ನೂ ಕೊಡಲಾರೆ. ಆದರೆ ನೀವು ನನ್ನ ಬದುಕು, ಸಾವಿನ ಸಹ ಪಯಣಿಗರಾದರೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟೇ ಕೊಡುತ್ತೇನೆ. ಅದನ್ನು ನೋಡಲು ನಮ್ಮಲ್ಲಿ ಯಾರು ಬದುಕಿರುತ್ತೇವೆಯೋ ಗೊತ್ತಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು ಎನ್ನುವುದಷ್ಟೇ ಮುಖ್ಯ. ನಾನು ಭಾರತಕ್ಕಾಗಿ ಬದುಕುತ್ತೇನೆ, ಭಾರತಕ್ಕಾಗಿಯೇ ಸಾಯುತ್ತೇನೆ. ಮುಂದಿನ ಹೋರಾಟದಲ್ಲಿ ಜಯ ಲಭಿಸುವಂತೆ ನಮ್ಮ ಸೇನೆಯನ್ನು ಆಶೀರ್ವದಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’.

ಐಎನ್‌ಎ ಉಸ್ತುವಾರಿ ವಹಿಸಿಕೊಂಡ ನಂತರ ಅದರ ಪುನರುತ್ಥಾನಕ್ಕೆ ನೇತಾಜಿ ಸಂಕಲ್ಪ ಮಾಡಿದರು. 1943ರ ಅಕ್ಟೋಬರ್ ಹೊತ್ತಿಗೆ ಆಜಾದ್ ಹಿಂದ್‌ನ ಹಂಗಾಮಿ ಸರ್ಕಾರವನ್ನು ಸ್ಥಾಪಿಸಲು ಮುಂದಾದರು. ಸಿಂಗಾಪುರದಲ್ಲಿ ಆ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಆ ಸರ್ಕಾರದ ಪ್ರಧಾನಿ, ಮುಖ್ಯಸ್ಥ ಹಾಗೂ ಪ್ರಧಾನ ಕಮಾಂಡರ್ ಆಗಿ ನೇತಾಜಿ ಅವಿರೋಧವಾಗಿ ಆಯ್ಕೆಯಾದರು. ಪ್ರಮಾಣ ವಚನ ಸ್ವೀಕರಿಸುವಾಗ ಅವರಾಡಿದ ಮಾತು ಹೀಗಿತ್ತು: ‘ದೇವರ ಹೆಸರಿನಲ್ಲಿ ನಾನು ಪ್ರಮಾಣ ವಚನ ಸ್ವೀಕರಿಸುತ್ತೇನೆ. ಭಾರತ ಹಾಗೂ ಅಲ್ಲಿನ 38 ಕೋಟಿ ಜನರಿಗೆ ಸ್ವಾತಂತ್ರ್ಯ ದಕ್ಕಿಸಿಕೊಡುವ ಸಂಕಲ್ಪ ಮಾಡುತ್ತೇನೆ. ಸುಭಾಷ್ ಚಂದ್ರ ಭೋಸ್ ಆದ ನಾನು ನನ್ನ ಕೊನೆಯುಸಿರು ಇರುವವರೆಗೂ ಸ್ವಾತಂತ್ರ್ಯಕ್ಕಾಗಿ ಪವಿತ್ರ ಹೋರಾಟ ಮುಂದುವರಿಸುತ್ತೇನೆ. ನಾನು ಸದಾ ಭಾರತದ ಸೇವಕ ಆಗಿರುತ್ತೇನೆ’.

ಯುದ್ಧ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಗಳನ್ನೂ ನೇತಾಜಿ ಹೊಂದಿದ್ದರು. ಅವರ ಹಂಗಾಮಿ ಸರ್ಕಾರದಲ್ಲಿ ಹಲವು ಸಚಿವರು ಹಾಗೂ ಸಲಹೆಗಾರರಿದ್ದರು. ಜಪಾನ್, ಬರ್ಮ, ಕ್ರೊಯೇಷಿಯಾ, ಜರ್ಮನಿ, ಫಿಲಿಪ್ಪೀನ್ಸ್, ನ್ಯಾನ್‌ಕಿಂಗ್ ಚೀನಾ, ಇಟಲಿ ಹಾಗೂ ಸಿಯಾಮ್ (ಥಾಯ್ಲೆಂಡ್) ಆ ಸರ್ಕಾರಕ್ಕೆ ಅಧಿಕೃತ ಮಾನ್ಯತೆ ನೀಡಿದವು. ಜಪಾನ್ ಸೇನೆಯು ಸಕಲ ರೀತಿಯ ನೆರವುಗಳನ್ನು ನೀಡುವುದಾಗಿ ಹೇಳಿತು. ಸ್ವತಂತ್ರ ಐರ್ಲೆಂಡ್‌ನ ಅಧ್ಯಕ್ಷ ಡಿ ವಲೆರ, ಬೋಸ್ ಅವರನ್ನು ಅಭಿನಂದಿಸಿದ್ದರು. ಪತ್ರಾಗಾರದ ಕೆಲವು ಕಡತಗಳ ಪ್ರಕಾರ ರಷ್ಯಾ ಕೂಡ ಆಮೇಲೆ ಆ ಹಂಗಾಮಿ ಸರ್ಕಾರಕ್ಕೆ ಮಾನ್ಯತೆ ನೀಡಿದ್ದೇ ಅಲ್ಲದೆ ಓಮ್‌ಸ್ಕ್ ಅನ್ನು ತನ್ನ ಕೇಂದ್ರವಾಗಿ ಬಳಸಿಕೊಳ್ಳಲು ಅನುಮತಿ ನೀಡಿತ್ತು.

ಆಜಾದ್ ಹಿಂದ್ ಸರ್ಕಾರದಲ್ಲಿ ಹಣಕಾಸು ಸಚಿವರಿದ್ದರು. ಪ್ರಚಾರ, ಬೇಹುಗಾರಿಕೆ, ಶಿಕ್ಷಣ, ವಾಣಿಜ್ಯ ಖಾತೆಗಳಲ್ಲದೆ ಮಹಿಳಾ ಕಲ್ಯಾಣ ಖಾತೆಯೂ ಇತ್ತು. ಆ ಖಾತೆಯನ್ನು ಸ್ತ್ರೀರೋಗ ತಜ್ಞೆ ಲಕ್ಷ್ಮಿ ಸ್ವಾಮಿನಾಥನ್ ವಹಿಸಿಕೊಂಡಿದ್ದರು. ತನ್ನದೇ ನೋಟು-ನಾಣ್ಯಗಳು, ಅಂಚೆಚೀಟಿಗಳನ್ನು ಚಲಾವಣೆಗೆ ತಂದಿತ್ತು. ನ್ಯಾಯಾಲಯ, ನಾಗರಿಕ ಸಂಹಿತೆ ಕೂಡ ಇತ್ತು. 1944ರ ಏಪ್ರಿಲ್ 5ರಂದು ಆಜಾದ್ ಹಿಂದ್ ಬ್ಯಾಂಕ್ ಪ್ರಾರಂಭವಾಯಿತು. ರಂಗೂನ್‌ನಲ್ಲಿ ಅದರ ಕೇಂದ್ರ ಕಚೇರಿ ಇತ್ತು.

1943ರ ಅಕ್ಟೋಬರ್ 22-23ರ ಮಧ್ಯರಾತ್ರಿ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರವು ಬ್ರಿಟನ್ ಹಾಗೂ ಅಮೆರಿಕ ಮೇಲೆ ಯುದ್ಧ ಸಾರಿತು. ‘ನಿಮ್ಮಷ್ಟೇ ಪೌರುಷ ನಮಗೂ ಇದೆ ಎಂದು ಅಮೆರಿಕದ ಸ್ನೇಹಿತರಿಗೆ ಹೇಳಬಯಸುತ್ತೇನೆ. ನಮಗೆ ಸ್ವಾತಂತ್ರ್ಯ ಬೇಕು. ಅದನ್ನು ಹೇಗಾದರೂ ಪಡೆದೇ ತೀರುತ್ತೇವೆ’ ಎಂದು ಸುಭಾಷ್ ಆಗ ಗರ್ಜಿಸಿದರು.

ಬ್ರಿಟನ್‌ನಿಂದ ವಶಪಡಿಸಿಕೊಂಡಿದ್ದ ಅಂಡಮಾನ್ ಹಾಗೂ ನಿಕೊಬಾರ್ ದ್ವೀಪಗಳನ್ನು ಪ್ರಧಾನಿ ತೊಜೊ 1943ರ ನವೆಂಬರ್ 6ರಂದು ಭಾರತದ ಹಂಗಾಮಿ ಸರ್ಕಾರಕ್ಕೆ ನೀಡಿದರು. ವಿದೇಶದಲ್ಲಿ ಸ್ಥಾಪಿತವಾಗಿದ್ದ ಭಾರತದ ಸ್ವತಂತ್ರ ಸರ್ಕಾರದ ಮೊದಲ ಹೆಜ್ಜೆಗುರುತು ಮೂಡಿದ ಭಾರತೀಯ ನೆಲ ಅದೇ ಎನ್ನಬೇಕು. ನೇತಾಜಿ ಆ ದ್ವೀಪಗಳಿಗೆ ‘ಶಹೀದ್’ ಹಾಗೂ ‘ಸ್ವರಾಜ್’ ಎಂದು ಮರುನಾಮಕರಣ ಮಾಡಿದರು. ಸೆಪ್ಟೆಂಬರ್‌ನಲ್ಲಿ ಆಜಾದ್ ಹಿಂದ್ ಫೌಜ್‌ನ ಪ್ರಧಾನ ಕಮಾಂಡರ್ ಆಗಿ ಆ ದ್ವೀಪಗಳಿಗೆ ಹೋದಾಗ ಅಲ್ಲಿನ ಸೆಲ್ಯುಲಾರ್‌ ಜೈಲಿನಲ್ಲಿದ್ದು, ಪ್ರಾಣತೆತ್ತ ಸ್ವತಂತ್ರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಾವರ್ಕರ್ ಬರೆದಿದ್ದ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ಆಫ್ 1857’ ಕೃತಿಯ ಸಾವಿರಾರು ಪ್ರತಿಗಳನ್ನು ಅಲ್ಲಿ ನೇತಾಜಿ ಹಂಚಿದರು.

‘ಐಎನ್‌ಎ ಬೆಳೆಯುತ್ತಾ ಹೋಗಿ 60,000 ಬಲಾಢ್ಯ ಯೋಧರನ್ನು ಒಳಗೊಂಡಿತು. ನಾಲ್ಕು ರೆಜಿಮೆಂಟ್‌ಗಳನ್ನು ಅದು ಒಳಗೊಂಡಿತ್ತು. ತನ್ನದೇ ಆದ ಅಧಿಶಾಸನ ಹೊರಡಿಸುವ ಅಂಗ ರಚಿಸಿಕೊಂಡಿತ್ತು. ವೈದ್ಯಕೀಯ, ಹಣಕಾಸು, ನೇಮಕಾತಿ ಹಾಗೂ ತರಬೇತಿ ವಿಭಾಗಗಳೂ ಇದ್ದವು. ಆಗ್ನೇಯ ಏಷ್ಯಾದ ವಿವಿಧ ದೇಶಗಳಲ್ಲಿ 13 ಶಾಖೆಗಳನ್ನು ಅದು ಸ್ಥಾಪಿಸಿತ್ತು. ತನ್ನದೇ ಶೌರ್ಯ ಪ್ರಶಸ್ತಿ ‘ಸರ್ದಾರ್-ಎ-ಜಂಗ್’ ನೀಡುವ ನಿರ್ಧಾರವನ್ನೂ ಮಾಡಿತ್ತು.

ಐಎನ್‌ಎ ಮಹಿಳಾ ಬ್ರಿಗೇಡ್ ಸ್ಥಾಪಿಸುವುದಾಗಿ ನೇತಾಜಿ ಪ್ರಕಟಿಸಿದರು. ಅಂಥದ್ದೊಂದು ಸಾಧ್ಯತೆಯ ಕುರಿತು ಜಪಾನ್‌ಗೆ ಅನುಮಾನವಿತ್ತಾದರೂ ನೇತಾಜಿ ಆ ರೀತಿ ಯೋಚಿಸಿದ್ದರು. ಮಹಿಳಾ ಸಬಲೀಕರಣದ ಕುರಿತು ನೇತಾಜಿ ಅವರಿಗೆ ಒಲವಿತ್ತು. ಆದ್ದರಿಂದ ರಾಣಿ ಝಾನ್ಸಿ ರೆಜಿಮೆಂಟ್ ಸ್ಥಾಪಿಸಿದರು. ಕಾಕತಾಳೀಯವೆಂಬಂತೆ ಅದನ್ನು ಲೆಫ್ಟಿನೆಂಟ್ ಕರ್ನಲ್ ಲಕ್ಷ್ಮಿ ಸ್ವಾಮಿನಾಥನ್ ಮುನ್ನಡೆಸಿದರು.

ಐಎನ್‌ಎ ಯೋಧರಿಗೆ ಜಪಾನ್ ಹಾಗೂ ಬರ್ಮ ಸೇನೆಯವರು ತೀವ್ರವಾದ ತರಬೇತಿ ನೀಡುತ್ತಿದ್ದರು. ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿಯಷ್ಟೇ ಅಲ್ಲದೆ ನಿಸ್ತಂತು ಸೇವೆಯ ಉಪಯೋಗದ ಬಗೆಗೂ ಹೇಳಿಕೊಡಲಾಯಿತು. ಅವುಗಳನ್ನು ಬಳಸಿಕೊಂಡು ಪ್ರಚಾರ ನಡೆಸುವುದು ಹೇಗೆ ಎನ್ನುವುದನ್ನು ಕಲಿಸಲಾಯಿತು. ಸ್ಫೋಟಕಗಳ ತಯಾರಿಕೆ, ಉಪಯೋಗದ ಕುರಿತೂ ತಿಳಿಸಿಕೊಟ್ಟ ತರಬೇತಿ ಅದು. ಶತ್ರುಗಳ ಯೋಜನೆಗಳನ್ನು ಅರಿಯುವ ಮಾರ್ಗೋಪಾಯಗಳು ಹಾಗೂ ಅವರ ಕಾರ್ಯತಂತ್ರವನ್ನು ಮಟ್ಟಹಾಕುವ ಬಗೆಗಳ ಕುರಿತು ತಿಳಿಹೇಳಲಾಯಿತು.

ನೇತಾಜಿ ಅವರ ಐಎನ್‌ಎಯಲ್ಲಿ ಇದ್ದ ಎಲ್ಲಾ ಯೋಧರು ಹೆಮ್ಮೆಯಿಂದ ಭಾರತೀಯತೆಯ ಗುರುತನ್ನು ಮೂಡಿಸಿಕೊಂಡಿದ್ದರು. ‘ಯಾವುದೇ ಧರ್ಮ, ಜಾತಿ ಅಥವಾ ಪ್ರಾದೇಶಿಕ ಭೇದಭಾವಕ್ಕೆ ಅಲ್ಲಿ ಅವಕಾಶ ಇರಲಿಲ್ಲ. ನೇತಾಜಿ ಯಾರಿಗೂ ಧರ್ಮದ ಕುರಿತು ಮಾತನಾಡಲು ಬಿಡುತ್ತಿರಲಿಲ್ಲ. ಹಿಂದೂ, ಮುಸ್ಲಿಂ, ಸಿಖ್ಖರೆಲ್ಲಾ ಒಂದೇ ಸ್ಥಳದಲ್ಲಿ ಪೂಜೆ ಸಲ್ಲಿಸಬೇಕಿತ್ತು. ಎಲ್ಲರಿಗೂ ಒಂದೇ ಅಡುಗೆಮನೆ ಇತ್ತು. ನಾವೆಲ್ಲಾ ಒಟ್ಟಿಗೆ ಊಟ ಮಾಡುತ್ತಿದ್ದೆವು. ಒಂದೇ ಕುಟುಂಬದ ಸದಸ್ಯರಂತೆ ಇದ್ದೆವು’ ಎಂದು 90 ವರ್ಷ ವಯಸ್ಸಿನ ಹರಿ ರಾಮ್ ನೆನಪಿಸಿಕೊಳ್ಳುತ್ತಾರೆ. ಅವರೂ ಐಎನ್‌ಎ ಗುಪ್ತಸೇವಾ ವಿಭಾಗದಲ್ಲಿ ಇದ್ದವರು.

ರೇಡಿಯೊ ಮೂಲಕ ನೇತಾಜಿ ನಿರಂತರವಾಗಿ ಸಂದೇಶಗಳನ್ನು ಹರಡುತ್ತಿದ್ದರಾದರೂ ಐಎನ್‌ಎ ಚಟುವಟಿಕೆಗಳನ್ನು ಗುಪ್ತವಾಗಿ ಇಡಲಾಗಿತ್ತು. 1944ರ ಮಾರ್ಚ್‌ನಲ್ಲಿ ಐಎನ್‌ಎಯ ನಾಲ್ವರನ್ನು ಜಲಾಂತರ್ಗಾಮಿಯ ಮೂಲಕ ಭಾರತಕ್ಕೆ ಕಳುಹಿಸಲಾಗಿತ್ತು. ಆಜಾದ್ ಹಿಂದ್ ಸರ್ಕಾರ ಸ್ಥಾಪನೆಯಾದದ್ದನ್ನು ಭಾರತದಲ್ಲಿ ಹರಡುವ ಹಾಗೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಭಾರತದಲ್ಲಿದ್ದ ಜನರನ್ನು ದೊಡ್ಡ ಸಂಖ್ಯೆಯಲ್ಲಿ ಹುರಿದುಂಬಿಸುವುದು ನೇತಾಜಿ ಉದ್ದೇಶವಾಗಿತ್ತು.

1944ರ ಫೆಬ್ರುವರಿಯಲ್ಲಿ ಐಎನ್‌ಎ ಕಾರ್ಯಪ್ರವೃತ್ತವಾಯಿತು. ‘ಸುಭಾಷ್ ಬ್ರಿಗೇಡ್’ ಅರೇಕನ್ ಫ್ರಂಟ್‌ನಲ್ಲಿ ಕಾರ್ಯಾಚರಣೆ ಶುರುಮಾಡಿತು. ಇಂಫಾಲ್‌ನಲ್ಲಿ ‘ಗಾಂಧಿ ಬ್ರಿಗೇಡ್’ ದಾಳಿ ಇಟ್ಟರೆ, ಮೈಯಿಂತ ಸೆಕ್ಟರ್‌ನಲ್ಲಿ ‘ಆಜಾದ್ ಬ್ರಿಗೇಡ್’ ಮುನ್ನುಗ್ಗಿತು. ಜಪಾನ್‌ನ ಬೆಂಬಲದೊಂದಿಗೆ ಐಎನ್‌ಎ ಈ ಮೊದಲ ಕಾರ್ಯಾಚರಣೆಯಲ್ಲಿ ಪ್ರಥಮ ಯಶಸ್ಸಿನ ರುಚಿ ಕಂಡಿತು.

ಐಎನ್‌ಎ ಸಾಧನೆಯ ಅಧಿಕೃತ ಡೈರಿಯ ಪ್ರಕಾರ ಮಾಯೋ ನದಿಯ ಪೂರ್ವ ದಂಡೆಯಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಪಡೆಯು ಯಶಸ್ವಿಯಾಗಿದ್ದೇ ಅಲ್ಲದೆ ವಿಶಾಖಪಟ್ಟಣಂಗೆ ಬಾಂಬ್ ಹಾಕಲಾಗಿತ್ತು. ಫೆಬ್ರುವರಿ 12ರ ಹೊತ್ತಿಗೆ ಬ್ರಿಟಿಷರ ಸೇನೆಯ ಜಂಘಾಬಲವನ್ನು ಸಂಪೂರ್ಣವಾಗಿ ಉಡುಗಿಸಲಾಯಿತು. 10,000 ಯೋಧರನ್ನು ಕೊಂದು, ಕೆಲವರನ್ನು ಸೆರೆಯಾಳುಗಳಾಗಿಸಿದ್ದರು.

ಭಾರತೀಯ ಬ್ರಿಟಿಷ್ ಯೋಧರಲ್ಲಿ ಅನೇಕರು ಐಎನ್‌ಎ ಸೇರಿದ್ದರು. ಇಂಡೊ-ಬರ್ಮ ಗಡಿಯನ್ನು ಐಎನ್‌ಎ ದಾಟಿ, ಭಾರತದ ನೆಲಕ್ಕೆ ಕಾಲಿಟ್ಟಿದೆ ಎಂಬ ಸುದ್ದಿ ಮಾರ್ಚ್ 18ರಂದು ಹರಡಿತು. ವಿವಿಧೆಡೆ ಐಎನ್‌ಎ ಮಾಡಿದ ತೀವ್ರವಾದ ಹೋರಾಟದ ವಿವರಗಳು ಆ ಡೈರಿಯಲ್ಲಿವೆ. ಇಂಫಾಲ್‌ನ ಪತನ ಹಾಗೂ ಐಎನ್‌ಎಯ ಯಶಸ್ಸು ಐತಿಹಾಸಿಕ. ಆಂಗ್ಲೋ ಅಮೆರಿಕನ್ ಹೈಕಮಾಂಡ್ ಇಂಫಾಲ್ ಬಿಟ್ಟು ಹೋಗಲು ಕೂಡ ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.